ಬೆಳಗಾವಿ :ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ಬಿಜೆಪಿಗೆ ನಷ್ಟ. ಅವರಿಗೆ ಯಾಕೆ ಟಿಕೆಟ್ ಕೊಡಲಿಲ್ಲ ಎಂಬುದು ಗೊತ್ತಿಲ್ಲ ಎಂದು ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ತಿಳಿಸಿದ್ದಾರೆ. ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕವಾಗಿ ನನಗೂ ಅವರಿಗೂ ಸಂಬಂಧ ಇತ್ತು. ಇಂದು ಸಂಜೆ ಭೇಟಿಯಾಗಿ ಮಾತನಾಡುತ್ತೇನೆ. 7ನೇ ಬಾರಿಯೂ ಅವರು ಗೆಲ್ಲುತ್ತಿದ್ದರು. ಆದರೆ ಪಕ್ಷ ಯಾಕೆ ಕಡೆಗಣನೆ ಮಾಡಿತು ಎಂಬುದೇ ಗೊತ್ತಿಲ್ಲ. ಪಕ್ಷೇತರರಾಗಿ ನಿಂತರೂ ಅವರು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಗ್ಗೆ ಹೈಕಮಾಂಡ್ ಜೊತೆ ಮಾತನಾಡುತ್ತೇನೆ. ಶೆಟ್ಟರ್ ಅವರನ್ನು ಮತ್ತೊಮ್ಮೆ ಪರಿಗಣಿಸಿ, ನಿರ್ಲಕ್ಷ್ಯ ಮಾಡಬೇಡಿ ಎಂದು ತಿಳಿಸುತ್ತೇನೆ. ಯಾಕೆಂದರೆ ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಚುನಾವಣೆ ಮುಂದಿಟ್ಟುಕೊಂಡು ಈ ರೀತಿ ಮಾಡುವುದು ಸರಿಯಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚಿಕೆ ಮಾಡುವ ಪ್ರಯೋಗ ಮಾಡಬಹುದಿತ್ತು ಎಂದು ಹೇಳಿದರು. ನಿಮ್ಮನ್ನು ಏನಾದರೂ ಕಾಂಗ್ರೆಸ್ ನಾಯಕರು ಸಂಪರ್ಕಿಸಿದ್ದಾರಾ ಎಂಬ ಪ್ರಶ್ನೆಗೆ, ನನಗೆ ಕಾಂಗ್ರೆಸ್ನಿಂದ ಯಾವುದೇ ಆಫರ್ ಬಂದಿಲ್ಲ. ಬಿಜೆಪಿ ಬಿಡುವ ವಿಚಾರ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.