ಅಥಣಿ :ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ನಮ್ಮ ಕುಟುಂಬಕ್ಕೆ ಹಾಗೂ ನಮ್ಮ ಆಪ್ತರಿಗೆ ಸಚಿವ ಸ್ಥಾನ ನೀಡದೆ ಇರುವುದರಿಂದ ನಮಗೆ ಯಾವುದೇ ಬೇಸರವಿಲ್ಲ. ನಾನು ರಾಜೀನಾಮೆಯನ್ನು ಸಹ ನೀಡುವುದಿಲ್ಲ ಎಂದು ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿರೋದು ಸಂತೋಷವಾಗಿದೆ. 2023ರಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಹಾಗೂ ಅಥಣಿ ತಾಲೂಕಿನಲ್ಲಿ ನೀರಾವರಿ ಯೋಜನೆ ಮತ್ತು ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಇದರಿಂದ ಅಥಣಿಗೆ ಭೇಟಿ ನೀಡಲಾಗಿದೆ, ಇದರಲ್ಲಿ ಯಾವುದೇ ವಿಶೇಷತೆಯಿಲ್ಲ ಎಂದು ಹೇಳಿದರು.
ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ.. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಲಸಿಗರಿಗೆ ಸಚಿವ ಸ್ಥಾನ ಕೈಬಿಟ್ಟ ವಿಚಾರ :ಸಚಿವ ಸ್ಥಾನ ಯಾರಿಗೆ ಕೊಡಬೇಕು, ಯಾರನ್ನ ಬಿಡಬೇಕು ಎಂಬುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಈಗಾಗಲೇ ಹಲವಾರು ವಲಸಿಗ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ. ಮುಂಬರುವ ದಿನದಲ್ಲಿ ಉಳಿದವರಿಗೂ ನೀಡುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಅಥಣಿ ಶಾಸಕರಿಗೆ ಸಚಿವ ಸ್ಥಾನ ವಂಚಿತ ವಿಚಾರ :ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಉಪ ಚುನಾವಣೆ ಸಂದರ್ಭದಲ್ಲಿ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ರಾಜಕೀಯದಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಯಿಂದ ಅಥಣಿ ಶಾಸಕರು ಸಚಿವರು ಆಗಿಲ್ಲ. ಮುಂಬರುವ ದಿನದಲ್ಲಿ ಈ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತಾರೆಂದು ಹೇಳಿದರು.
ಸಿಡಿ ಪ್ರಕರಣ :ಸಿಡಿ ಪ್ರಕರಣ ಇತ್ಯರ್ಥಕ್ಕೆ ಇನ್ನೂ ಒಂದು ವರ್ಷವಾಗಲಿ. ಇದರಿಂದ ನನಗೆ ಯಾವುದೇ ತೊಂದರೆ ಇಲ್ಲ. ನಮ್ಮ ತಮ್ಮ ಬಾಲಚಂದ್ರ ಜಾರಕಿಹೊಳಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್ ಹಾಗೂ ಅನೇಕರಿದ್ದಾರೆ, ನನ್ನ ಪರವಾಗಿ ಅವರನ್ನ ಸಚಿವ ಸ್ಥಾನದಲ್ಲಿ ಮುಂದುವರೆಸುತ್ತಾರೆ. ನಾನೇ ಸಚಿವ ಆಗಬೇಕು ಅಂತಾ ಏನೂ ಇಲ್ಲ ಎಂದರು.
ರಾಜಿನಾಮೆ ನೀಡುವುದಿಲ್ಲ :ಮೈಸೂರಿನ ಸೂತ್ತೂರು ಮಠದ ಶ್ರೀಗಳನ್ನು ಭೇಟಿ ಮಾಡಿ ಮಾತನಾಡಿದಾಗ, ಆ ಸಂದರ್ಭದಲ್ಲಿ ಶ್ರೀಗಳು ರಾಜಿನಾಮೆ ನೀಡಬೇಡಿ ಎಂದು ಮಾರ್ಗದರ್ಶನ ನೀಡಿದ್ದರಿಂದ, ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವುದಿಲ್ಲ ಎಂದರು.
ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟ ವಿಚಾರ :ಲಕ್ಷ್ಮಣ್ ಸವದಿ ಅವರನ್ನು ಡಿಸಿಎಂ ಮಾಡಿದಾಗಲೂ ಯಾಕೆ ಮಾಡಿದ್ದು ಎಂದು ಯಾರನ್ನೂ ಕೇಳಿಲ್ಲ, ಸದ್ಯ ಸಚಿವ ಸಂಪುಟದಿಂದ ಕೈಬಿಟ್ಟಿದಕ್ಕೆ ಯಾಕೆ ಬಿಟ್ಟಿದ್ದು ಎಂದು ಯಾರನ್ನೂ ಕೇಳುವುದಿಲ್ಲ ಎಂದರು.
ಮುಂಬರುವ ಚುನಾವಣೆಯಲ್ಲಿ ಕುಮಟಳ್ಳಿ ಬಿಜೆಪಿ ಪಕ್ಷದಿಂದ ಸ್ಪರ್ಧೆ :ಸದ್ಯ ಅಥಣಿ ವಲಯದಲ್ಲಿ ಮುಂಬರುವ ಚುನಾವಣೆಯಲ್ಲಿ ಮಹೇಶ್ ಕುಮಟಳ್ಳಿ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುವುದಿಲ್ಲ ಎಂಬ ಮಾತುಗಳನ್ನು ನಾನು ಕೇಳಿದ್ದೇನೆ. ಇವೆಲ್ಲ ಮಾತುಗಳು ಊಹಾಪೋಹ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅಥಣಿಯಿಂದ ಬಿಜೆಪಿ ಪಕ್ಷದಿಂದಲೇ ಮಹೇಶ್ ಕುಮಟಳ್ಳಿ ಸ್ಪರ್ಧೆ ಮಾಡುತ್ತಾರೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.