ಅಥಣಿ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ವ ಕ್ಷೇತ್ರದ ಅಥಣಿ ಪಟ್ಟಣದ ಹೃದಯ ಭಾಗದಲ್ಲಿ ಇರುವ ರಾಜ್ಯ ಹೆದ್ದಾರಿಗಳ ವಿಭಜಕಗಳ ನಡುವೆ ಹುಲುಸಾಗಿ ಹುಲ್ಲು ಬೆಳೆದು ನಿಂತು ಪಟ್ಟಣದ ಅಂದ ಚಂದಕ್ಕೆ ಕಪ್ಪು ಚುಕ್ಕೆಯಾಗಿದೆ.
ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಶಿವಾಜಿ ವೃತ್ತದವರೆಗೆ ಸೂಮಾರು 2 ಕಿ.ಮೀಟರ್ ವರೆಗೆ ಕಳೆ, ಹುಲ್ಲು ಬೆಳೆದು ನಿಂತಿರುವುದು ತಾಲೂಕು ಆಡಳಿತ ಪಟ್ಟಣವನ್ನು ಎಷ್ಟರಮಟ್ಟಿಗೆ ಸುಂದರವಾಗಿಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಜೊತೆಗೆ ಇಲ್ಲಿ ಬೆಳೆದ ಹುಲ್ಲನ್ನು ತಿನ್ನಲು ಬಿಡಾಡಿ ದನಗಳು ಬಂದು ನಿಲ್ಲುವುದರಿಂದ ಅಪಘಾತಗಳು ಕೂಡ ಸಂಭವಿಸುತ್ತಿವೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಈ ಕಳೆಯನ್ನು ಸ್ವಚ್ಛಗೊಳಿಸಿ ಉತ್ತಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ವಾಹನ ಸವಾರರ ಮನವಿಯಾಗಿದೆ.