ಬೆಳಗಾವಿ: ಕಡಿಮೆ ಜನಸಂಖ್ಯೆಯ ಸಮಾಜಗಳಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಮಾಳಿ, ಮಾಲಗಾರದಂತಹ ಸಣ್ಣ ವೃತ್ತಿಪರ ಸಮಾಜಗಳ ಅಭಿವೃದ್ಧಿಗೆ ಆಯವ್ಯಯದಲ್ಲಿ ಒಟ್ಟು 400 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಅಲ್ಲದೇ ಈ ಸಮಾಜಗಳ ಅಭಿವೃದ್ಧಿಗೆ ವಿಶೇಷ ನಿಗಮ ಮಂಡಳಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಕಡಿಮೆ ಜನಸಂಖ್ಯೆ ಹೊಂದಿರುವ ಹಾಗೂ ವೃತ್ತಿಪರ ಸಣ್ಣ ಸಮಾಜಗಳು ಎಲೆಮರೆಯ ಕಾಯಿಯಂತೆ ರಾಜ್ಯ ಸರ್ಕಾರದ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಲೇ ಬಂದಿದ್ದಾರೆ. ಮಾಳಿ, ಮಾಲಗಾರ ಸಮಾಜವೂ ಸೇರಿದಂತೆ ದಿನ ನಿತ್ಯದ ಅವಶ್ಯಕತೆಯ ಉತ್ಪನ್ನಗಳ ಉತ್ಪಾದನೆಯಲ್ಲಿ ತೊಡಗಿರುವಂತಹ ಕಡಿಮೆ ಜನಸಂಖ್ಯೆಯ ಸಮಾಜಗಳಿಗೆ ಮುಂದಿನ ಆಯವ್ಯಯದಲ್ಲಿ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಸಮಾಜ ಉತ್ಪಾದಿಸುವ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಯೋಗ್ಯ ಬೆಲೆ ಒದಗಿಸಲು ಮಾಳಿ, ಮಾಲಗಾರ ಸಮಾಜದವರ ಬಳಿಯೇ ಬಂದು ಅವರು ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ವ್ಯವಸ್ಥೆ ಕಲ್ಪಿಸಿ, ಆರ್ಥಿಕವಾಗಿ ಸದೃಡವಾಗಿಸಲು ಸಹಕಾರಿಯಾಗುತ್ತದೆ ಎಂದು ಸಿಎಂ ಹೇಳಿದರು.
ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ:21ನೇ ಶತಮಾನವನ್ನು ಜ್ಞಾನದ ಶತಮಾನ ಎಂದು ಕರೆಯುತ್ತಾರೆ. ಮಾಳಿ, ಮಾಲಗಾರರ ಸಮಾಜದ ಮಕ್ಕಳು ಉತ್ತಮ ಶಿಕ್ಷಣ ಪಡೆಯುವುದು ಬಹಳ ಮುಖ್ಯ. ಅಭಿವೃದ್ಧಿ ನಿಗಮದ ಮೂಲಕ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ, ಯುವಕರಿಗೆ ಸ್ವಯಂ ಉದ್ಯೋಗ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಬೊಮ್ಮಾಯಿ ಭರವಸೆ ನೀಡಿದರು. ಸಮಾಜದ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವುದು ಸರ್ಕಾರ ಮೊದಲ ಆದ್ಯತೆ. ಸಾವಿತ್ರಿಬಾಯಿ ಫುಲೆ ಇದೇ ಸಮಾಜದವರಾಗಿದ್ದು, ಅವರು ಹೆಣ್ಣಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದವರು. ಭಾರತ ದೇಶದ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ಪ್ರತಿ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದರು.