ಬೆಳಗಾವಿ:ಬೆಳಗಾವಿ ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡಲು ತಮ್ಮ ಜೀವನವನ್ನು ಮುಡಿಪಾಗಿಡುವ ಪೌರಕಾರ್ಮಿಕರಿಗೆ ಇನ್ನೂ ನೌಕರಿ ಕಾಯಮಾತಿ ಆದೇಶ ಸಿಕ್ಕಿಲ್ಲ. 2008ರಿಂದ ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕೆಂದು ಸರ್ಕಾರದ ಆದೇಶವಿದ್ದರೂ ನೇಮಕ ಮಾಡದೇ ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ. ಇನ್ನು ಅಧಿವೇಶನದೊಳಗೆ ಕಾರ್ಮಿಕರ ನೌಕರಿ ಕಾಯಂಗೊಳಿಸುವ ವಿಶ್ವಾಸವನ್ನು ಜಿಲ್ಲಾಧಿಕಾರಿ ಇಂದು ವ್ಯಕ್ತಪಡಿಸಿದ್ದು, ಪೌರ ಕಾರ್ಮಿಕರ ಮೊಗದಲ್ಲಿ ಮಂದಹಾಸ ಮೂಡಿದೆ.
ಹೌದು.. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ ಕಾಯಮಾತಿ ವಿಚಾರ ಕಳೆದ 15 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. 20 ವರ್ಷಕ್ಕೂ ಹೆಚ್ಚು ಕಾಲ ನಗರವನ್ನು ಸ್ವಚ್ಛಗೊಳಿಸುವ ಕಾಯಕ ಮಾಡುವ ಪೌರ ಕಾರ್ಮಿಕರು ಇಂದು ಆಗುತ್ತೆ, ನಾಳೆ ಆಗುತ್ತೆ ಎಂದು ಆಸೆಗಣ್ಣಿನಿಂದ ಕಾಯುತ್ತಾ ಕುಳಿತಿದ್ದಾರೆ.
2016ರಲ್ಲಿ ರಾಜ್ಯ ಸರ್ಕಾರ ಪೌರ ಕಾರ್ಮಿಕರ ಕಾಯಮಾತಿ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಆದೇಶ ನೀಡಿತ್ತು. ಆದರೆ, ಇದಕ್ಕೆ ಜಿಲ್ಲಾಡಳಿತ ಮತ್ತು ಪಾಲಿಕೆ ಕವಡೆ ಕಾಸಿನ ಕಿಮ್ಮತ್ತು ನೀಡಿರಲಿಲ್ಲ. ಈಗ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಪೌರಕಾರ್ಮಿಕರ ಬಹುದಿನಗಳ ಕನಸು ನನಸು ಮಾಡುವತ್ತ ಹೆಜ್ಜೆ ಇಟ್ಟಿದೆ.
ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮಾತನಾಡಿ, ಪೌರ ಕಾರ್ಮಿಕ ಕಾಯಮಾತಿಯಲ್ಲಿ ವಿಳಂಬದ ಪ್ರಶ್ನೆ ಉದ್ಭವಿಸುವುದಿಲ್ಲ. ಈಗಾಗಲೇ ಎಲ್ಲ ಪ್ರಕ್ರಿಯೆ ಸಂಪೂರ್ಣವಾಗಿದೆ. ಆದರೆ, 23 ಜನರ ವಯಸ್ಸಿನ ದಾಖಲಾತಿ ಕುರಿತು ಗೊಂದಲವಿತ್ತು. ಹಾಗಾಗಿ, ಸರ್ಕಾರ ಕೇಳಿದ್ದ ಸ್ಪಷ್ಟೀಕರಣ ಕುರಿತು ವಿವರವಾದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತೇನೆ. ಅದಾದ ಬಳಿಕ ಜಿಲ್ಲಾಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು.