ಬೆಳಗಾವಿ:ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ಸರ್ಕಾರ ನೀಡಬೇಕು. ಹಲವಾರು ಬಾರಿ ಮೀಸಲಾತಿ ಕೊಡುವುದಾಗಿ ಸರ್ಕಾರ ಭರವಸೆ ನೀಡಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ನಗರದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನವೆಂಬರ್ 13ರಂದು ಗೋಕಾಕ್‌ನಲ್ಲಿ ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 1ಕ್ಕೆ ಗೋಕಾಕ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ರ್ಯಾಲಿ ನಡೆಯಲಿದೆ. ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಆವರಣದಲ್ಲಿ ಸಮವೇಶ ನಡೆಯಲಿದೆ ಎಂದರು.
ಶಕ್ತಿ ಕೇಂದ್ರ:ಗೋಕಾಕ್ ಇಡೀ ಕರ್ನಾಟಕದಲ್ಲಿ ರಾಜಕೀಯ ಶಕ್ತಿ ಕೇಂದ್ರವಾಗಿದೆ. ಗೋಕಾಕ್ ತಾಲೂಕಿನಲ್ಲಿ 70 ಸಾವಿರ ಪಂಚಮಸಾಲಿ ಸಮುದಾಯದವರಿದ್ದಾರೆ. ಕುಂದರನಾಡಿನಲ್ಲಿ ಜನ ಸ್ವಯಂಪ್ರೇರಿತವಾಗಿ ಹೋರಾಟದಲ್ಲಿ ಭಾಗಿಯಾಗುತ್ತಾರೆ. ಸರ್ಕಾರ ಮೇಲಿಂದ ಮೇಲೆ ನಮ್ಮ ನಾಯಕರಿಗೆ ಸಕಾರಾತ್ಮಕ ಸ್ಪಂದನೆ ನೀಡುತ್ತ ಬಂದಿದೆ. ಆದರೆ ಅದು ಕೇವಲ ಭರವಸೆ ಆಗಿಯೇ ಉಳಿದಿದೆ. ಹೀಗಾಗಿ ನವೆಂಬರ್ 13ರಂದು ಗೋಕಾಕ್ ಸಮಾವೇಶದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಲಿದೆ ಎಂದರು.