ಚಿಕ್ಕೋಡಿ :ಕೃಷ್ಣಾ ನದಿ ಪ್ರವಾಹ ಉಂಟಾಗಿ ಬಂದುವರ್ಷವೇ ಕಳೆದಿದೆ.ನೂರಾರು ಕುಟುಂಬಗಳು ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿವೆ. ಆದರೆ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ. ಆದಷ್ಟು ಬೇಗ ಪರಿಹಾರ ನೀಡಬೇಕೆಂದು ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಮಾಂಜರಿ, ಯಡೂರ, ಚಂದೂರ, ಇಂಗಳಿ, ಕೆರೂರ, ಅಂಕಲಿ ಗ್ರಾಮದ ನೂರಾರು ಕುಟುಂಬಗಳು ಪ್ರವಾಹಕ್ಕೆ ಒಳಗಾಗಿದ್ದವು. ವಿಧಾನ ಪರಿಷತ್ತಿನ ಸದಸ್ಯ ಹಾಗೂ ಆಡಳಿತ ಪಕ್ಷದ ಮುಖ್ಯ ಸಂಚೇತಕರಾದ ಮಹಾಂತೇಶ ಕವಟಗಿಮಠ ಇವರ ನೇತೃತ್ವದಲ್ಲಿ ಚಿಕ್ಕೋಡಿ ಉಪ-ವಿಭಾಗೀಯ ಅಧಿಕಾರಿ ರವೀಂದ್ರ ಕರಲಿಂಗಣ್ಣವರ ಹಾಗೂ ತಹಶೀಲ್ದಾರ ಸುಭಾಷ್ ಸಂಪಗಾವಿ ಇವರಿಗೆ ಮನವಿ ಸಲ್ಲಿಸಿದರು.
ಈ ಸಂದಭ್ದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಕೃಷ್ಣಾ ನದಿ ತೀರದಲ್ಲಿ ಹಲವಾರು ಕುಟುಂಬಗಳು ಮನೆ ಕಳೆದುಕೊಂಡಿದ್ದು ನಿಜ. ಆದರೆ, ಸರ್ವೆ ಕಾರ್ಯದಲ್ಲಿ ಲೋಪ ದೋಷ ಉಂಟಾಗಿದ್ದರಿಂದ ನಿಜವಾದ ಪ್ರವಾಹ ಪೀಡಿತರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಹಾಗಾಗಿ ಬೇಗ ರಾಜೀವ್ ಗಾಂಧಿ ವಸತಿ ನಿಗಮ ಯೋಜನೆ ಅಡಿಯಲ್ಲಿ ಪ್ರವಾಹದಲ್ಲಿ ಮನೆ ಕಳೆದುಕೊಂಡ ಜನರಿಗೆ ಮನೆ ಮಂಜೂರಾತಿ ನೀಡಿ ನ್ಯಾಯ ಒದಗಿಸಲಾಗುವುದು ಎಂದರು.
ನಂತರ ಚಿಕ್ಕೋಡಿ ಉಪವಿಭಾಗಧಿಕಾರಿ ರವೀಂದ್ರ ಕರಲಿಂಗಣ್ಣವರ ಮಾತನಾಡಿ, ಪ್ರವಾಹ ಪೀಡಿತ ಜನರ ಮನೆಗಳಿಗೆ ತಾಂತ್ರಿಕ ದೋಷದಿಂದ ತೊಂದರೆ ಉಂಟಾಗಿದೆ. ಆದಷ್ಟು ಬೇಗ ಮೇಲಾಧಿಕಾರಿಗಳ ಗಮನಕ್ಕೆ ಈ ವಿಷಯ ತಂದು ಪ್ರವಾಹ ಪೀಡಿತ ಜನರಿಗೆ ನ್ಯಾಯ ನೀಡಲಾಗುವುದು ಎಂದು ಹೇಳಿದರು.