ಚಿಕ್ಕೋಡಿ: ಮಹಾರಾಷ್ಟ್ರದ ಗಡಿಯಲ್ಲಿರುವ ಚಿಕ್ಕೋಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಲ್ಯಾಬ್ ಪ್ರಾರಂಭಿಸಿ ಎಂದು ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಹರಿಹಾಯ್ದಿದ್ದಾರೆ.
ಕೊರೊನಾ ಟೆಸ್ಟ್ ಲ್ಯಾಬ್ ವಿಳಂಬ: ಸರ್ಕಾರದ ಧೋರಣೆ ವಿರುದ್ಧ ಗಣೇಶ ಹುಕ್ಕೇರಿ ಗರಂ - ಚಿಕ್ಕೋಡಿ ಕೊರೊನಾ ಟೆಸ್ಟ್ ಲ್ಯಾಬ್ ಸುದ್ದಿ
ಚಿಕ್ಕೋಡಿಯಲ್ಲಿ ಕೊರೊನಾ ಟೆಸ್ಟ್ ಲ್ಯಾಬ್ ಸ್ಥಾಪಿಸುವ ಕುರಿತು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಚಂದೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಕದ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಸಹಜವಾಗಿಯೇ ಗಡಿ ಭಾಗದಲ್ಲಿ ಆತಂಕ ಮೂಡಿಸಿದೆ. ಅದರಂತೆ ಮಹಾರಾಷ್ಟ್ರದ ಗಡಿಯಲ್ಲಿರುವ ನಿಪ್ಪಾಣಿ, ಕಾಗವಾಡ, ಚಿಕ್ಕೋಡಿ, ಅಥಣಿ ತಾಲೂಕಿನ ಜನರು ಪಕ್ಕದ ಮಹಾರಾಷ್ಟ್ರಕ್ಕೆ ದುಡಿಯಲು ಸಂಸಾರಸಹಿತ ಹೋಗಿದ್ದರು. ಆದರೆ, ಕೊರೊನಾ ವೈರಸ್ ಹಾವಳಿಯಿಂದಾಗಿ ಅವರು ಇದೀಗ ತಮ್ಮ ತಮ್ಮ ಗ್ರಾಮಗಳಿಗೆ ಆಗಮಿಸುತ್ತಿದ್ದಾರೆ. ಹೀಗೆ ಬರುವ ಜನರನ್ನು ಕೊರೊನಾ ತಪಾಸಣೆಗೊಳಪಡಿಸಲು ಚಿಕ್ಕೋಡಿಯಲ್ಲಿ ಕೊರೊನಾ ಟೆಸ್ಟ್ ಲ್ಯಾಬ್ ಪ್ರಾರಂಭಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಈ ಕುರಿತಂತೆ ಸರ್ಕಾರಕ್ಕೆ ಸಾಕಷ್ಟು ಸಲ ಮನವಿಯನ್ನು ಮಾಡಿದರೂ ಸರ್ಕಾರ ಕ್ಯಾರೆನ್ನುತ್ತಿಲ್ಲ. ಚಿಕ್ಕೋಡಿಯಲ್ಲಿ ಕೊರೊನಾ ಟೆಸ್ಟ್ ಲ್ಯಾಬ್ ಸ್ಥಾಪಿಸುವ ಕುರಿತು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ದೂರಿದರು.