ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿ: ಬಿಎಸ್​ವೈ ಉಳಿಸಲು ಕೊನೆಯ ಯತ್ನ ಆರಂಭವಾಗಿದೆಯೇ? - ಬಿಎಸ್​ವೈ

ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ ಆಗುತ್ತಿದೆ. ಬಿಎಸ್​ವೈ ಬದಲಿಗೆ ಬೇರೆಯವರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ವದಂತಿ ದಟ್ಟವಾಗಿ ಹಬ್ಬುತ್ತಿದ್ದಂತೆ ಅವರನ್ನು ಉಳಿಸಿಕೊಳ್ಳಲು ಇದೀಗ ಇನ್ನಿಲ್ಲದ ಕಸರತ್ತು ನಡೆಯುತ್ತಿದೆ.

Yediyurappa
Yediyurappa

By

Published : Jul 20, 2021, 10:08 PM IST

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರದ್ದೇ ಧ್ವನಿ ಎನ್ನಲಾದ ಆಡಿಯೋ ಬಾಂಬ್ ರಾಜ್ಯದಲ್ಲಿ ಇನ್ನಿಲ್ಲದ ಸಂಚಲನ ಸೃಷ್ಟಿಸಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಪತನ ನಿಶ್ಚಿತ ಎಂಬುದು ಮನದಟ್ಟಾಗುತ್ತಿದ್ದಂತೆಯೇ ಅವರನ್ನು ಹುದ್ದೆಯಲ್ಲಿ ಉಳಿಸುವ ಕೊನೆಯ ಯತ್ನ ಆರಂಭವಾಗಿದೆ.

ಇದರ ಭಾಗವಾಗಿ ಪ್ರಬಲ ಲಿಂಗಾಯತ ಸಮುದಾಯದ ಮಠಾಧೀಶರು, ರಾಜ್ಯದ ಸಂಸದರು, ಬಿಜೆಪಿ ಹೈಕಮಾಂಡ್​ಗೆ ಸಂದೇಶ ರವಾನಿಸುತ್ತಿದ್ದು, ಯಡಿಯೂರಪ್ಪ ಇಳಿದರೆ ಬಿಜೆಪಿ ಕುಸಿಯುವುದು ನಿಶ್ಚಿತ ಎಂಬ ಅಂಶವನ್ನು ಪದೇ ಪದೇ ಒತ್ತಿ ಹೇಳತೊಡಗಿದ್ದಾರೆ. ಈ ಮಧ್ಯೆ ಮುಖ್ಯಮಂತ್ರಿ ಹುದ್ದೆಯ ರೇಸ್​ನಲ್ಲಿ ಮುಂದಿರುವ ಗಣಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಇಂದು ಇದ್ದಕ್ಕಿದ್ದಂತೆಯೇ ಆರೋಪಗಳ ಸುರಿಮಳೆ ಶುರುವಾಗಿದ್ದು ಅವರ ವಿರುದ್ಧ ವ್ಯವಸ್ಥಿತ ದಾಳಿ ನಡೆಸಲಾಗುತ್ತಿದೆ.

ಯಾರೆಲ್ಲ ಸಿಎಂ ರೇಸ್​ನಲ್ಲಿ?

ಸಿಎಂ ಹುದ್ದೆಯಿಂದ ಯಡಿಯೂರಪ್ಪ ಕೆಳಗಿಳಿದರೆ ಅವರ ಜಾಗಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬರುತ್ತಾರೆಂಬ ಮಾತು ರಾಜಕೀಯ ವಲಯಗಳಲ್ಲಿ ದಟ್ಟವಾಗಿ ಹರಡಿದ್ದು, ಅದೇ ಕಾಲಕ್ಕೆ ರೇಸ್​​ನಲ್ಲಿ ಡಿಸಿಎಂ ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಟಿ.ರವಿ ಸೇರಿದಂತೆ ಕೆಲವು ನಾಯಕರ ಹೆಸರು ಕೇಳಿ ಬರುತ್ತಿವೆ. ಇದರ ಪರಿಣಾಮವಾಗಿ ರಾಜ್ಯ ಬಿಜೆಪಿಯಲ್ಲಿ ಅಯೋಮಯ ವಾತಾವರಣ ಸೃಷ್ಟಿಯಾಗಿದ್ದು ಮುಂದೇನು?ಎಂಬ ಪ್ರಶ್ನೆ ಶಾಸಕರನ್ನು ಕಾಡತೊಡಗಿದೆ.

ಇದನ್ನೂ ಓದಿ: ಪುತ್ರ ವಿಜಯೇಂದ್ರಗೆ ಭವಿಷ್ಯ ಕಲ್ಪಿಸಲು ತ್ಯಾಗ.. ಸ್ವಪ್ರೇರಣೆಯಿಂದ ಸಿಎಂ ಕುರ್ಚಿ ಬಿಡಲು ನಿರ್ಧರಿಸಿದರೇ ಬಿಎಸ್‌ವೈ!?

ನಳೀನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಬಾಂಬ್ ಬಿದ್ದ ರಭಸಕ್ಕೆ ಯಡಿಯೂರಪ್ಪ ಬಣ ವಿಸ್ಮಿತವಾಗಿದ್ದು ಏನು ಹೇಳಬೇಕು?ಎಂದು ತೋಚದೆ ಪಕ್ಷದ ವರಿಷ್ಠರಿಂದ ಬರುವ ಸಂದೇಶವನ್ನು ಕಾಯತೊಡಗಿದೆ. ಇದರ ಮಧ್ಯೆ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಲ್ಲಿ ಉಳಿಸುವ ಸಲುವಾಗಿ ಕೊನೆಯ ಹಂತದ ಕಸರತ್ತಿಗೆ ಹಲವರು ಕೈ ಹಾಕಿದ್ದು ಮಠಾಧೀಶರು, ಸಂಸದರ ಮೂಲಕ ವರಿಷ್ಠರ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಲೋಕಸಭೆ ಚುನಾವಣೆಯಲ್ಲೂ ಹೊಡೆತ?

ಯಡಿಯೂರಪ್ಪ ಅವರು ಕೆಳಗಿಳಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದು ಅಧಿಕಾರ ಹಿಡಿಯಲು ಸಾಧ್ಯವೇ ಇಲ್ಲ. ಇದಾದ ಬಳಿಕ ಎದುರಾಗುವ ಲೋಕಸಭಾ ಚುನಾವಣೆಯಲ್ಲೂ ಪಕ್ಷ ಗಣನೀಯ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಹೈಕಮಾಂಡ್​ಗೆ ಮುಟ್ಟಿಸುತ್ತಿದ್ದಾರೆ. ಈ ನಡುವೆ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಯಾರು ಬರುತ್ತಾರೆಂಬುದು ಪ್ರಶ್ನೆ ಉದ್ಭವವಾಗಿದೆ.

ನಿರಾಣಿ ವಿರುದ್ಧ ಆಕ್ರೋಶ

ಸಿಎಂ ಹುದ್ದೆಯ ರೇಸಿನಲ್ಲಿ ಮುಂಚೂಣಿಯಲ್ಲಿರುವ ಸಚಿವ ಮುರುಗೇಶ್ ನಿರಾಣಿ ಅವರ ವಿರುದ್ಧ ಹಲವು ಆರೋಪಗಳ ದಾಳಿ ಶುರುವಾಗಿದೆ. ಸಾಮಾಜಿಕ ಕಾರ್ಯಕರ್ತ ಆಲಂಪಾಷಾ ಅವರು, ಮುರುಗೇಶ್ ನಿರಾಣಿ ಅವರ ವಿರುದ್ದ ಆಕ್ರಮ ಆಸ್ತಿ ಮಾಡಿದ್ದಾರೆ ಎಂಬುದೂ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ. ಮುರುಗೇಶ್ ನಿರಾಣಿ ಅವರು ಸಿಡಿ ಫ್ಯಾಕ್ಟರಿ ಎಂದು ಆರೋಪಿಸಿರುವ ಅವರು, ನಿರಾಣಿ ಅವರ ಬಳಿ ಹಲವು ರಾಜಕಾರಣಿಗಳ ರಹಸ್ಯನ್ನೊಳಗೊಂಡ ಐನೂರಕ್ಕೂ ಹೆಚ್ಚು ಸಿಡಿಗಳಿವೆ ಎಂದು ಆರೋಪಿಸಿದ್ದಾರೆ. ಹೀಗೆ ಅವರ ವಿರುದ್ಧ ಸಂಘಟಿತ ದಾಳಿ ಆರಂಭಗೊಂಡಿದ್ದು, ಇದು ಪರ್ಯಾಯ ನಾಯಕನ ಹುದ್ದೆಯ ರೇಸ್​ನಿಂದ ಅವರನ್ನು ಹಿಂದೆ ಸರಿಸುವ ತಂತ್ರ ಎಂಬ ಮಾತುಗಳೂ ಕೇಳಿ ಬಂದಿವೆ.

ಮುರುಗೇಶ್ ನಿರಾಣಿ ಅವರ ವಿರುದ್ಧದ ಆರೋಪಗಳು ಮಾಧ್ಯಮಗಳಲ್ಲಿ ಸಂಚಲನ ಉಂಟು ಮಾಡುತ್ತಿದ್ದಂತೆಯೇ ಬ್ರಾಹ್ಮಣ ನಾಯಕ ಪ್ರಹ್ಲಾದ್ ಜೋಷಿ ಅವರ ಹೆಸರು ಮುನ್ನೆಲೆಗೆ ಬಂದಿದ್ದು, ಅವರೇ ಕರ್ನಾಟಕದ ಮುಂದಿನ ಸಿಎಂ ಎಂದು ಬಣ್ಣಿಸಲಾಗುತ್ತಿದೆ. ಈ ಮಧ್ಯೆ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಶಾಸಕ ಅರವಿಂದ ಬೆಲ್ಲದ್ ಅವರ ಹೆಸರುಗಳು ಅನುಕ್ರಮವಾಗಿ ಕೇಳಿ ಬರುತ್ತಿದ್ದು, ಏಕಾಏಕಿಯಾಗಿ ಲಿಂಗಾಯತ ಸಮುದಾಯದ ಶಾಸಕ ರವೀಂದ್ರನಾಥ್ ಅವರ ಹೆಸರೂ ಚಾಲನೆಗೆ ಬಂದಿದೆ.

ಹೊಸಬರಿಗೆ ಆದ್ಯತೆ ನೀಡುವ ಯೋಚನೆ

ಮೂಲಗಳ ಪ್ರಕಾರ, ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದು ಜುಲೈ 26ಕ್ಕೆ ಎರಡು ವರ್ಷ ಪೂರ್ಣವಾಗುತ್ತಿದ್ದು, ಇದಾದ ನಂತರ ಅಧಿಕಾರ ತ್ಯಜಿಸುವಂತೆ ಈಗಾಗಲೇ ಪಕ್ಷದ ಹೈಕಮಾಂಡ್ ಸೂಚಿಸಿದೆ.ಇದೇ ರೀತಿ ಹಾಲಿ ಸಚಿವ ಸಂಪುಟದಲ್ಲಿರುವ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಮಾಧುಸ್ವಾಮಿ. ಸಿ.ಸಿ.ಪಾಟೀಲ್ ಸೇರಿದಂತೆ ಹಲವರನ್ನು ಕೈ ಬಿಟ್ಟು ಹೊಸಬರಿಗೆ ಆದ್ಯತೆ ನೀಡಿ ಕ್ರಿಯಾಶೀಲ ಮಂತ್ರಿ ಮಂಡಲವನ್ನು ಕಟ್ಟುವುದು ವರಿಷ್ಠರ ಯೋಚನೆ ಎಂಬುದು ಮೂಲಗಳ ಹೇಳಿಕೆ. ಹೀಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತರಾಗಲಿದ್ದಾರೆ ಎಂಬ ಮಾತು ಗಟ್ಟಿಯಾಗುತ್ತಿದ್ದಂತೆಯೇ ಅವರ ಆಪ್ತರು ಇಂದು ಪ್ರತ್ಯೇಕ ಸಮಾಲೋಚನೆಗಳನ್ನು ನಡೆಸಿದ್ದಲ್ಲದೆ ಮುಂದೇನು?ಎಂಬ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಕೊನೆ ಕ್ಷಣದ ಕಸರತ್ತು

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲವರು ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ಮಾಡಿ ಸಧ್ಯದ ವಿದ್ಯಮಾನಗಳ ಕುರಿತು ಮಾತನಾಡಿದರಾದರೂ, ಒಟ್ಟಾರೆಯಾಗಿ ಯಡಿಯೂರಪ್ಪ ಅವರು ಮಾತ್ರ ಮೌನಕ್ಕೆ ಶರಣಾಗಿದ್ದರು ಎಂದು ಮೂಲಗಳು ಹೇಳಿವೆ.ನಳೀನ್ ಕುಮಾರ್ ಕಟೀಲ್ ಅವರ ಆಡಿಯೋ ಬಾಂಬ್ ನಲ್ಲಿರುವಂತೆಯೇ ಬೆಳವಣಿಗೆಗಳು ಘಟಿಸುತ್ತಿರುವುದರಿಂದ ಹೆಚ್ಚು ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಯಡಿಯೂರಪ್ಪ ಭಾವಿಸಿದ್ದಾರೆ ಎನ್ನಲಾಗಿದ್ದು, ಇದರ ನಡುವೆಯೂ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಉಳಿಸುವ ಕೊನೆಯ ಹಂತದ ಕಸರತ್ತು ನಡೆಯುತ್ತಿದೆ.ಒಂದೆಡೆ ಯಡಿಯೂರಪ್ಪ ಬಣದ ಶಾಸಕರು ಮುಂದೇನು?ಎಂಬ ಚಿಂತೆಯಲ್ಲಿದ್ದರೆ, ಮತ್ತೊಂದೆಡೆ ಸಂಪುಟದಿಂದ ಹೊರಬೀಳುವ ಯೋಚನೆಯಲ್ಲಿರುವ ಹಲವು ಹಿರಿಯ ಸಚಿವರು ಕೂಡಾ ಸಭೆ ಸೇರಿ ಮುಂದೇನು?ಎಂದು ಚರ್ಚೆ ನಡೆಸಿದ್ದಾರೆ.

ಇದೇ ರೀತಿ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಪರದಾಡಿದ್ದ ಶಾಸಕರ ಪೈಕಿ ಕೆಲವರು, ಯಡಿಯೂರಪ್ಪ ಅವರ ಪತನದ ನಂತರ ರಚನೆಯಾಗುವ ಸರ್ಕಾರದಲ್ಲಿ ಮಂತ್ರಿಗಿರಿ ದಕ್ಕಿಸಿಕೊಳ್ಳುವ ಬಗ್ಗೆ ಕಾರ್ಯತಂತ್ರ ಹೆಣೆಯುತ್ತಿರುವುದು ಇಂದಿನ ಕುತೂಹಲಕಾರಿ ಬೆಳವಣಿಗೆಯಾಗಿದೆ. ಮುಂದಿನ ನಡೆ ಭಾರೀ ಕುತೂಹಲ ಕೆರಳಿಸಿದೆ.

ABOUT THE AUTHOR

...view details