ಬೆಂಗಳೂರು: ಚೀನಾ ಮೂಲದ ಶಿಯೋಮಿ ಸಂಸ್ಥೆಯ ಬ್ಯಾಂಕ್ ಖಾತೆಗಳಲ್ಲಿದ್ದ 5,551 ಕೋಟಿ ರೂ. ಜಪ್ತಿಗೆ ಜಾರಿ ನಿರ್ದೇಶನಾಲಯ ಹೊರಡಿಸಿದ್ದ ಆದೇಶವನ್ನು ತಡೆ ನೀಡುವಂತೆ ಕೋರಿ ಹೈಕೋರ್ಟ್ಗೆ ಮರು ಮನವಿ ಮಾಡಲಾಗಿತ್ತು. ನಿನ್ನೆಯಷ್ಟೇ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿ ನೇಮಕಗೊಂಡಿರುವ ಸಕ್ಷಮ ಪ್ರಾಧಿಕಾರದ ಊರ್ಜಿತಗೊಳಿಸಿ ಸಕ್ಷಮ ಪ್ರಾಧಿಕಾರ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಣೆ ಮಾಡಿದೆ.
ಏಪ್ರಿಲ್ 29ರಂದು ಜಾರಿ ನಿರ್ದೇಶನಾಲಯದ (ಇಡಿ) 5,551 ಕೋಟಿ ರೂ. ಜಪ್ತಿ ಆದೇಶವನ್ನು ದೃಢಪಡಿಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯನ್ನು ಜುಲೈ ತಿಂಗಳಿನಲ್ಲಿ ಇತ್ಯರ್ಥ ಪಡಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಶಿಯೋಮಿ ಅರ್ಜಿ ಸಲ್ಲಿಸಿರುವುದು ತರಾತುರಿಯ ಕ್ರಮವಾಗಿದೆ. ಅರ್ಜಿದಾರ ಕಂಪನಿಯ ಬ್ಯಾಂಕ್ ಖಾತೆ ಜಪ್ತಿಗೆ ಆದೇಶ ಹೊರಡಿಸಿರುವ ಅಧಿಕಾರಿ 20 ದಿನಗಳ ಒಳಗೆ ಆ ಆದೇಶವನ್ನು ಫೆಮಾ ಸೆಕ್ಷನ್ 37ಎ (2) ಅಡಿಯಲ್ಲಿ ಹಣಕಾಸು ಸಚಿವಾಲಯದಿಂದ ನೇಮಕಗೊಂಡ ಸಕ್ಷಮ ಪ್ರಾಧಿಕಾರದ ಮುಂದೆ ಇಡಬೇಕು. ಸಕ್ಷಮ ಪ್ರಾಧಿಕಾರ ಎಲ್ಲ ಬಾಧಿತರಿಗೆ ಅವಕಾಶ ನೀಡಿ, 60 ದಿನಗಳ ಒಳಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶಿಸಿತ್ತು.