ಬೆಂಗಳೂರು :ಬೆಳಗಾವಿ ಅಧಿವೇಶನದ ಬಿಜೆಪಿ ಪಾಲಿಗೆ ಅತ್ಯಂತ ಪ್ರಮುಖವಾದದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರ ಕೇವಲ ಆರು ತಿಂಗಳಲ್ಲಿ 60 ತಪ್ಪುಗಳನ್ನು ಮಾಡಿದೆ. ಅಧಿವೇಶನದಲ್ಲಿ ಈ ಸಂಬಂಧ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಪ್ರಾರಂಭದಲ್ಲೇ ವರ್ಗಾವಣೆ ದಂಧೆಯ ಅಂಗಡಿಗಳನ್ನು ತೆರೆದಿದ್ದಾರೆ. ಆಡಳಿತವು ಭ್ರಷ್ಟಾಚಾರದ ಕೂಪವಾಗಿದೆ. ಬೆಂಗಳೂರಿನಲ್ಲಿ ದಾಳಿ ನಡೆಸಿದಾಗ ಸುಮಾರು 100 ಕೋಟಿಗೂ ಹೆಚ್ಚು ಕಳ್ಳ ಹಣ ಸಿಕ್ಕಿದ್ದು, ಇದು ವರ್ಗಾವಣೆ ದಂಧೆಯ ಸ್ಪಷ್ಟ ರೂಪ ಎಂದು ಆರೋಪಿಸಿದರು.
ಕಾವೇರಿ ವಿಚಾರದಲ್ಲಿ ಕರ್ನಾಟಕ ಜನತೆಗೆ ಮೋಸ :ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಜನತೆಗೆ ಮೋಸ ಮಾಡಿದ್ದಾರೆ. ತಮಿಳುನಾಡಿನಲ್ಲಿ ಮಿತ್ರ ಸ್ಟಾಲಿನ್ ಇದ್ದಾರೆಂದು, ಅವರಿಗೆ ಸಹಾಯ ಮಾಡಲು ಹಳೆ ಮೈಸೂರಿನ ಭಾಗದ ಜನರಿಗೆ ದ್ರೋಹ ಬಗೆಯಲಾಗಿದೆ. ಇತರ ಬಹಳಷ್ಟು ವಿಚಾರಗಳಲ್ಲಿ ಸರಕಾರ ತಪ್ಪು ಮಾಡಿದೆ. ವಿರೋಧ ಪಕ್ಷದ ನಾಯಕನಾಗಿ, ನಮ್ಮೆಲ್ಲ 66 ಜನ ಶಾಸಕರು, ಜೆಡಿಎಸ್‍ನ 19 ಜನರು ಸೇರಿ ನಿಲುವಳಿ ಸೂಚನೆ ಮಂಡಿಸುತ್ತೇವೆ ಎಂದರು.
ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಜೆಡಿಎಸ್‍ನ ಕುಮಾರಸ್ವಾಮಿ ಮತ್ತಿತರ ಪ್ರಮುಖರ ಜೊತೆ ಮಾತನಾಡಿದ್ದೇವೆ. 236 ತಾಲೂಕುಗಳಲ್ಲಿ 223 ತಾಲ್ಲೂಕುಗಳಲ್ಲಿ ತೀವ್ರ ಬರಗಾಲ ಛಾಯೆ ಇದೆ. ಜೂನ್‍ನಲ್ಲಿ ಸಣ್ಣ ಮಳೆ, ಜುಲೈನಲ್ಲಿ ಮಳೆ ಇರಲಿಲ್ಲ. ಆಗಸ್ಟ್ನಲ್ಲಿ ಶೇ.73ರಷ್ಟು ಮಳೆ ಕೊರತೆ ಆಗಿದೆ. ರಾಜ್ಯ ಸರಕಾರ, ಸಚಿವರು ಯಾವುದೇ ಕ್ರಮ ಕೈಗೊಳ್ಳದೆ ವಿಧಾನಸೌಧದಲ್ಲಿ ಕುಳಿತು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ :ಮಾತೆತ್ತಿದರೆ ಕೇಂದ್ರ ಸರಕಾರ ಎನ್ನುತ್ತಿದ್ದಾರೆ. ಬರ ಸಂಬಂಧ ನಿಲುವಳಿ ಸೂಚನೆ ಮಂಡಿಸುತ್ತೇವೆ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಈ ಮೊದಲು ಶಿವಮೊಗ್ಗ, ಕೋಲಾರದ ಸಮಸ್ಯೆ ಇತ್ತು. ಬೆಂಗಳೂರಿನಲ್ಲಿ ನಿನ್ನೆ ಶಾಲೆ ಮಕ್ಕಳು ಭಯಭೀತರಾಗಿ, ಪೋಷಕರೂ ಓಡಿ ಹೋಗುವಂತಾಗಿತ್ತು. ಈ ಸರಕಾರ ಬಂದ ಬಳಿಕ ಕಾನೂನು- ಸುವ್ಯವಸ್ಥೆ ವಿಫಲವಾಗುತ್ತಿದೆ ಎಂದು ಆರೋಪಿಸಿದರು.
ಸಚಿವ ಜಮೀರ್ ಅಹ್ಮದ್ ಅವರು ತೆಲಂಗಾಣದಲ್ಲಿ ಬಿಜೆಪಿಯ ಹಿಂದೂ ಶಾಸಕರು ಮುಸ್ಲಿಂ ಸ್ಪೀಕರ್ಗೆ ದಿನಂಪ್ರತಿ ಸಲಾಂ ಹೊಡೆಯಬೇಕಿದೆ ಎಂಬಂತೆ ಮಾತನಾಡಿದ್ದಾರೆ. ಇದು ಸಂವಿಧಾನ ವಿರೋಧಿ ಹೇಳಿಕೆ. ಇದನ್ನು ನಾವು ಪ್ರಶ್ನಿಸುತ್ತೇವೆ. ಶಿಕ್ಷಣ ವ್ಯವಸ್ಥೆಯಡಿ ರಾಜಕೀಯ ಮಾಡಿದ್ದನ್ನು ಪ್ರಶ್ನಿಸುತ್ತೇವೆ. ಎನ್‍ಇಪಿ ಅಡಿಯಲ್ಲಿ ತಪ್ಪು ಕಂಡು ಹಿಡಿಯುವುದನ್ನು ಪ್ರಶ್ನೆ ಮಾಡುತ್ತೇವೆ. ಒಕ್ಕಲಿಗ ಸಮುದಾಯ, ಲಿಂಗಾಯತ ಸಮುದಾಯ ಮೊದಲಾದವರ ವಿರೋಧದ ನಡುವೆ ಕಾಂತರಾಜ್ ವರದಿ ಅನುಷ್ಠಾನಕ್ಕೆ ಮುಂದಾಗಿರುವ ಬಗ್ಗೆ ಚರ್ಚೆಗೆ ಕೈಗೆತ್ತಿಕೊಳ್ಳಲಿದ್ದೇವೆ ಎಂದು ತಿಳಿಸಿದರು.
ನೀರಾವರಿ ಯೋಜನೆಗಳ ವಿಚಾರ, ಅನುಷ್ಠಾನದಲ್ಲಿ ವಿಫಲತೆ, ಬಜೆಟ್‍ನಲ್ಲಿ ನೀರಾವರಿಗೆ ಮೋಸ ಮಾಡಿದ್ದನ್ನು ತೆಗೆದುಕೊಳ್ಳುತ್ತೇವೆ. ಪ್ರಮುಖವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಆಗದಿರುವುದು, ನೀರಾವರಿ ಯೋಜನೆಗಳು, ಗ್ಯಾರಂಟಿ ವೈಫಲ್ಯಗಳನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ವಿವರ ನೀಡಿದರು.
ಜೆಸಿಬಿಯಲ್ಲಿ ಮಕ್ಕಳು ಶಾಲೆಗೆ ಹೋಗುವುದು, 1 ತಿಂಗಳು ಮಹಿಳೆಯರಿಗೆ ಹಣ ಕೊಟ್ಟು 3 ತಿಂಗಳು ನಾಮ ಹಾಕಿದ್ದು, ನಿರುದ್ಯೋಗಿ ಯುವಕರಿಗೆ ಭತ್ಯೆಯನ್ನು 6 ತಿಂಗಳಿಂದ ನಾಮ ಹಾಕಿದ್ದನ್ನೂ ಚರ್ಚಿಸುತ್ತೇವೆ. ಡಿ.ಕೆ.ಶಿವಕುಮಾರ್ ಕೇಸಿನಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆದ ಸಂವಿಧಾನ ವಿರೋಧಿ ಕ್ರಮದ ಕುರಿತು ಪ್ರಶ್ನಿಸುತ್ತೇವೆ. ಹಿಂದೆ ಸೋನಿಯಾ ಗಾಂಧಿ ನೇತೃತ್ವದ ಸರಕಾರ ಇದ್ದಾಗ ಯಡಿಯೂರಪ್ಪ, ಜನಾರ್ದನ ರೆಡ್ಡಿ ಅವರ ಮೇಲೂ ಕೇಸಿತ್ತು. ನಾವೇನೂ ಕೇಸು ತನಿಖೆ ವಾಪಸ್ ಪಡೆದಿಲ್ಲ ಎಂದು ಹೇಳಿದರು.ಈ ಪ್ರಮುಖ ಅಸ್ತ್ರಗಳು ನಮ್ಮ ಬತ್ತಳಿಕೆಯಲ್ಲಿವೆ. ಅವುಗಳ ಮೂಲಕ ಸರಕಾರದ ಕಿವಿ ಹಿಂಡುತ್ತೇವೆ ಎಂದರು.
ಒಂದು ಶಾಲೆಯನ್ನೂ ಹೊಸದಾಗಿ ತೆರೆದಿಲ್ಲ. ಒಂದು ರಸ್ತೆ ಮಾಡಿಲ್ಲ. ಒಂದು ನೂತನ ಆಸ್ಪತ್ರೆ ಉದ್ಘಾಟನೆ ಆಗಿಲ್ಲ. 6 ತಿಂಗಳಿಂದ ವಿದ್ಯಾರ್ಥಿ ಸ್ಕಾಲರ್ಶಿಪ್ ಕೊಟ್ಟಿಲ್ಲ. ಎಸ್‍ಸಿ ಎಸ್‍ಟಿ ನಿಧಿಯನ್ನೂ ಕೊಟ್ಟಿಲ್ಲ. ಅದನ್ನು ಬೇರೆ ಉದ್ದೇಶಕ್ಕೆ ಬಳಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಗುತ್ತಿಗೆದಾರ ಅಂಬಿಕಾಪತಿ ಸಾವಿಗೆ ಬೇರೆ ಕಾರಣ ಇದೆ. ಯಾರೋ ಒತ್ತಡ ಹಾಕಿದ್ದಾರೆಂಬ ಮಾಹಿತಿ ಇದೆ. ಅದನ್ನು ಚರ್ಚೆಗೆ ಕೈಗೆತ್ತಿಕೊಳ್ಳುತ್ತೇವೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ :ಚಳಿಗಾಲದ ಅಧಿವೇಶನಕ್ಕೆ ಸಕಲ ಸಿದ್ಧತೆ ಕೈಗೊಂಡ ಜಿಲ್ಲಾಡಳಿತ: ನಾಯಕರ ಸ್ವಾಗತಕ್ಕೆ ಸಜ್ಜಾದ ಕುಂದಾನಗರಿ