ಕರ್ನಾಟಕ

karnataka

ETV Bharat / state

'ಪಲ್ಲಕ್ಕಿ ಹೊಸ ಬ್ರ್ಯಾಂಡ್​​ನ ಹವಾ ನಿಯಂತ್ರಣ ರಹಿತ ಬಸ್​​ಗಳ ವಿಶೇಷತೆ ಏನು, ಪ್ರಸ್ತುತ ಬಸ್​​ಗಳ ಸಂಚಾರ ಎಲ್ಲೆಲ್ಲಿ?

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು 100 ಕರ್ನಾಟಕ ಸಾರಿಗೆ ಹಾಗೂ 40 ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್​ ಗಳಿಗೆ ಇಂದು ಚಾಲನೆ ನೀಡಿದರು.

By ETV Bharat Karnataka Team

Published : Oct 7, 2023, 7:57 PM IST

Updated : Oct 7, 2023, 11:04 PM IST

pallakki bus
ಹವಾ ನಿಯಂತ್ರಣ ರಹಿತ ಪಲ್ಲಕ್ಕಿ ಬಸ್​ಗಳಿಗೆ ಚಾಲನೆ ಇಂದು

ಬೆಂಗಳೂರು: ದೂರದ ಪ್ರಯಾಣಕ್ಕಾಗಿ ಪಲ್ಲಕ್ಕಿ ಹೆಸರಿನಲ್ಲಿ ಹೊಸ ಬ್ರ್ಯಾಂಡ್ ನ ಹವಾ ನಿಯಂತ್ರಣ ರಹಿತ ಸ್ಲೀಪರ್ ಬಸ್ ಗಳ ಸೇವೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆರಂಭಿಸಿದೆ. ವಿಧಾನಸೌಧದ ಮುಂಭಾಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನೂತನವಾಗಿ 100 ಕರ್ನಾಟಕ ಸಾರಿಗೆ ಹಾಗೂ 40 ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್ಸುಗಳಿಗೆ ಚಾಲನೆ ನೀಡಿದರು.

ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಈಗಾಗಲೇ ಐರಾವತ, ಬಿಎಂಟಿಸಿಯಲ್ಲಿ ವಜ್ರ ಎಂಬ ಬ್ರಾಂಡಿಂಗ್ ಸಾರಿಗೆ ಸೇವೆಯನ್ನು ನೀಡಲಾಗುತ್ತಿದೆ. ಅವುಗಳ ಸಾಲಿಗೆ ಹೊಸದಾಗಿ ಪಲ್ಲಕ್ಕಿ ಎಂಬ ಹೊಸ ಬ್ರಾಂಡ್‍ಗೆ ಚಾಲನೆ ದೊರೆತಿದೆ. ಆರಾಮದಾಯಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇಂದಿನಿಂದ ಬಸ್ ಗಳು ರಾಜ್ಯದ ಹಲವು ಜಿಲ್ಲೆಗಳಿಗೆ ಸಂಚಾರ ಆರಂಭಿಸಿವೆ.

ಪಲ್ಲಕಿ - ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್ ಗಳ ವಿಶೇಷತೆ ಏನು? : 11.3 ಮೀಟರ್ ಉದ್ದದ 8 ಬಸ್‍ಗಳಿದ್ದು, ಅವುಗಳಲ್ಲಿ 4 ನಾನ್ ಎಸಿ, ಉಳಿದ 4 ಎಸಿ ಬಸ್‍ಗಳಾಗಿವೆ. ಅತ್ಯಾಧುನಿಕ ಈ ಬಸ್‍ಗಳು ಐಶಾರಾಮಿ ಸೌಲಭ್ಯ ಹೊಂದಿವೆ. 6 ಅಡಿ ಉದ್ದದ ಸೀಟುಗಳಲ್ಲಿ ಆರಾಮಾಗಿ ಮಲಗಬಹುದು. ಕುಳಿತುಕೊಳ್ಳಲೂ ಅವಕಾಶವಿದೆ.

ಬಿಎಸ್-6 ತಂತ್ರಜ್ಞಾನ ಮಾದರಿಯ 197 ಹೆಚ್‌ಪಿ ಇಂಜಿನ್ ಹೊಂದಿದೆ. ಹೈಟೆಕ್ ವಿನ್ಯಾಸದ 30 ಸ್ಲೀಪರ್ ಬರ್ತ್ ಸೀಟ್‌ಗಳು, ಪ್ರತಿ ಸೀಟ್‌ಗೆ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಚಾರ್ಜಿಂಗ್ ಹಾಗೂ ಮೊಬೈಲ್ ಸ್ಟ್ಯಾಂಡ್ ವ್ಯವಸ್ಥೆ, ಎಲ್‌ಇಡಿ ಲೈಟ್ ಅಳವಡಿಕೆ ಬಸ್‌ಗಳಲ್ಲಿ ಆಡಿಯೋ ಸ್ಪೀಕರ್ ಅಳವಡಿಕೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವ ವ್ಯವಸ್ಥೆ, ಡಿಜಿಟಲ್ ಗಡಿಯಾರ, ಪ್ರಯಾಣಿಕರಿಗೆ ತಲೆದಿಂಬಿನ ವ್ಯವಸ್ಥೆ, ಚಪ್ಪಲಿ ಇಡಲು ಸ್ಥಳಾವಕಾಶ ಎಲ್ಲವನ್ನೂ ಹೊಂದಿದೆ.

ಲಗೇಜ್ ಬ್ಯಾಗ್‍ಗಳಿಗೂ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಿಸಿ ಕ್ಯಾಮೆರಾ, ಪ್ರಥಮ ಚಿಕಿತ್ಸೆ ಕಿಟ್, ಡಿಜಿಟಲ್ ವಾಚ್ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳು ಈ ಬಸ್ ಗಳಲ್ಲಿ ಇದೆ. ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಲಭ್ಯವಾಗುತ್ತಿವೆ. ಪ್ರಾಯೋಗಿಕವಾಗಿ ಆರಂಭವಾಗಿರುವ ಈ ಬಸ್‍ಗಳಲ್ಲಿ ಉತ್ತಮವಾದ ಸಸ್ಪೆನ್ಷನ್, ಶಬ್ಧ ನಿಯಂತ್ರಣ, ಚಾಲಕರಿಗೆ ಅಗತ್ಯ ಸೌಲಭ್ಯಗಳಿವೆ. ಪ್ರಯಾಣಿಕರ ಅನಿಸಿಕೆ, ಅನುಭವಗಳನ್ನು ಆಧರಿಸಿ ಮುಂದೆ ಇವುಗಳನ್ನು ಮತ್ತಷ್ಟು ವಿಸ್ತರಿಸುವ ಚಿಂತನೆ ಇದೆ ಎಂದು ಕೆಎಸ್ ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಸಾರಿಗೆ ಬಸ್ ಗಳ ವೈಶಿಷ್ಟತೆಗಳೇನು? : ಈವರೆಗೆ ಸಾರಿಗೆ ನಿಗಮಗಳಲ್ಲಿ 15 ಮತ್ತು 12 ಮೀಟರ್ ಉದ್ದದ ಬಸ್‍ಗಳು ಸಂಚರಿಸುತ್ತಿದ್ದವು. ಕಿರಿದಾದ ಮತ್ತು ಗುಡ್ಡಗಾಡು, ಅರಣ್ಯ ಪ್ರದೇಶಗಳ ರಸ್ತೆಗಳ ತಿರುವುಗಳಲ್ಲಿ ಉದ್ದದ ಬಸ್‍ಗಳ ಸಂಚಾರ ಕಷ್ಟವಾಗುತ್ತಿತ್ತು. ಈಗ 10.5 ಮೀಟರ್ ಉದ್ದದ 8 ಹೊಸ ಬಸ್‍ಗಳನ್ನು ಸೇವೆಗೆ ನೀಡಲಾಗಿದೆ.

ಈ ಬಸ್ ಗಳು ಕಿರಿದಾದ ಮಾರ್ಗಗಳಲ್ಲೂ ಸುಗಮ ಸಂಚಾರ ಮಾಡಲಿವೆ. ಇನ್ನು ದೂರದ ಪ್ರಯಾಣಕ್ಕಾಗಿರುವ ಎಕ್ಸ್​ಪ್ರೆಸ್​ ಬಸ್‍ಗಳಲ್ಲೂ ಸೀಟುಗಳ ವಿನ್ಯಾಸವನ್ನು ಪರಿಷ್ಕರಿಸಲಾಗಿದೆ. 54 ರ ಬದಲಾಗಿ 51 ಕ್ಕೆ ಸೀಟು ಸಂಖ್ಯೆಯನ್ನು ಇಳಿಸಲಾಗಿದೆ. ಆರಾಮದಾಯಕ ವಾಗಿ ಕಾಲು ಚಾಚಿಕೊಳ್ಳಲು ಸ್ಥಳಾವಕಾಶ ಮಾಡಲಾಗಿದೆ. ಬಸ್‍ನ ಎತ್ತರವನ್ನು 2 ಅಡಿ ಹೆಚ್ಚಿಸಿರುವುದರಿಂದ ಗಾಳಿ, ಬೆಳಕು ಸಂಚಾರ ಇನ್ನಷ್ಟು ಸುಧಾರಣೆಯಾಗಿದೆ. ಪ್ರಯಾಣಿಕರಿಗೆ ಮಲ್ಟಿ ಆಕ್ಸೆಲ್ ಅನುಭವ ಹಿತ ನೀಡಲಿದೆ ಎನ್ನುತ್ತಾರೆ ಅಧಿಕಾರಿಗಳು.

ಚಾಲಕರಿಗೆ ಸಹಕಾರಿಯಾಗುವಂತೆ ಮುಂಭಾಗದ ಡ್ಯಾಶ್ ಕ್ಯಾಮರಾ ಹಾಗೂ ಹಿನ್ನೋಟ ಕ್ಯಾಮೆರಾ ಅಳವಡಿಕೆ, ಡಿಜಿಟಲ್ ನೇಮ್ ಬೋರ್ಡ್, ಬೆಂಕಿ ನಂದಿಸುವ ಸಲಕರಣೆಗಳು, ವಾಹನ ಸ್ಥಳದ ಟ್ರಾಕಿಂಗ್ ವ್ಯವಸ್ಥೆ ಅಳವಡಿಕೆ ಮತ್ತು ಎಚ್ಚರಿಕೆಯ ಗಂಟೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಬಸ್ ಗಳ ಸಂಚಾರ ಎಲ್ಲೆಲ್ಲಿ : ಪ್ರಮುಖವಾಗಿ ಬೀದರ್, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಉಡುಪಿ, ಶಿವಮೊಗ್ಗ, ಪುತ್ತೂರು, ರಾಯಚೂರು, ಕಲಬುರಗಿ, ಕೊಪ್ಪಳ, ಯಾದಗಿರಿ ಸೇರಿದಂತೆ ರಾಜ್ಯದ ಇತರ ಕಡೆಗಳಿಗೆ ರಾಜಧಾನಿ ಬೆಂಗಳೂರಿನಿಂದ ಸಂಚರಿಸುತ್ತವೆ. ಮುಂದಿನ ಹಂತದಲ್ಲಿ ವಿವಿಧ ಭಾಗಗಳಿಗೂ ಸಂಪರ್ಕ ಕಲ್ಪಿಸುವ ಸಾಧ್ಯತೆ ಇದೆ. ಆರು ಗಂಟೆ ದೂರದ ಪ್ರಯಾಣ ಇರುವವರಿಗೆ ಅನುಕೂಲವಾಗಿವೆ. ಪ್ರತಿ ಕಿ.ಮೀ ಗೆ 2 ರೂ. ಪ್ರಯಾಣ ದರ ನಿಗದಿ ಮಾಡಲಾಗಿದೆ ಎಂದು ಕೆಎಸ್ ಆರ್ ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ತಿಳಿಸಿದರು.

ನಾಲ್ಕು ನಿಗಮಗಳಲ್ಲಿ 24 ಸಾವಿರ ಬಸ್​ಗಳು:ನಾಲ್ಕು ನಿಗಮಗಳಲ್ಲಿ 24 ಸಾವಿರ ಬಸ್ ಗಳು ಓಡಾಟ ಮಾಡುತ್ತಿವೆ. ಪ್ರತಿ ವರ್ಷ ಶೇ.10 ರಷ್ಟು ಬಸ್ ಗಳು ಸ್ಕ್ರ್ಯಾಪ್ ಆಗುತ್ತಿವೆ. ಇನ್ನೊಂದು ವರ್ಷದಲ್ಲಿ ಒಂದು ಸಾವಿರ ಬಸ್​​ಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಬಸ್ ಉದ್ಘಾಟನೆ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಜನಸಂಖ್ಯೆಗನುಗುಣವಾಗಿ ಬಸ್‌ ಗಳು ಇಲ್ಲ, ಈಗಿರುವ ಜನಸಂಖ್ಯೆಗೆ ಹೋಲಿಸಿದರೆ ಇನ್ನೂ 12 ಸಾವಿರ ಬಸ್‌ಗಳ ಅಗತ್ಯವಿದೆ. ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ 2 ಕೋಟಿ ಜನಸಂಖ್ಯೆ ಇದೆ. ಈಗ ನಾನ್ ಎಸಿ ಬಸ್‌ಗಳಿಗೆ ಬೇಡಿಕೆ ಇತ್ತು. ಹಾಗಾಗಿ ವಿನೂತನ ಮಾದರಿಯ ನಾನ್ ಎಸಿ ಬಸ್‌ಗಳಿಗೆ ಚಾಲನೆ ನೀಡಿದ್ದೇವೆ. ಇನ್ನೂ 100 ನಾನ್ ಎಸಿ ಬಸ್‌ಗಳು ಕೆಎಸ್‌ಆರ್‌ಟಿಸಿಗೆ ಸೇರ್ಪಡೆಯಾಗಲಿವೆ. ನಾಲ್ಕು ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯನ್ನು ಸದ್ಯದಲ್ಲೇ ಮಾಡಲಾಗುವುದು ಎಂದರು.

ಶಕ್ತಿ ಯೋಜನೆ ಸಂದರ್ಭದಲ್ಕಿ ವಿರೋಧ ಪಕ್ಷಗಳು ಸಾಕಷ್ಟು ಆರೋಪಗಳನ್ನು ಮಾಡಿದ್ದು, ಈ ಆರೋಪಗಳು ಸುಳ್ಳು ಎಂದು ಸಾಬೀತಾಗಿದೆ. ಶಕ್ತಿ ಯೋಜನೆಯಡಿ ಸುಮಾರು 70 ಕೋಟಿ ಮಹಿಳೆಯರು ಇದುವರೆಗೆ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆ ಯಶಸ್ಸಿಗೆ ಸಾರಿಗೆ ಸಿಬ್ಬಂದಿಗಳೇ ಕಾರಣ ಎಂದು ಹೇಳಿದರು.

ಇದನ್ನೂ ಓದಿ:100 ಕರ್ನಾಟಕ ಸಾರಿಗೆ ಹಾಗೂ 40 ನಾನ್​ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್​​​​ಗಳಿಗೆ ಸಿಎಂ, ಡಿಸಿಎಂ ಚಾಲನೆ

Last Updated : Oct 7, 2023, 11:04 PM IST

ABOUT THE AUTHOR

...view details