ಬೆಂಗಳೂರು : ರಾಜ್ಯ ಸರ್ಕಾರ ತನ್ನ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಅಕ್ಕಿ ಕೊರತೆ ಹಿನ್ನೆಲೆ ಅಕ್ಕಿ ಬದಲು ನಗದು ಜಮೆ ಮಾಡುವುದನ್ನು ಮುಂದುವರಿಸಿದೆ. ರಾಜ್ಯ ಸರ್ಕಾರದ ನಗದು ಜಮೆ ಮಾಡುವ ಅನ್ನ ಭಾಗ್ಯ ಯೋಜನೆ ಆರಂಭವಾಗಿ ಏಳು ತಿಂಗಳು ಕಳೆದಿದ್ದು, ಸದ್ಯದ ಸ್ಥಿತಿಗತಿ ಏನಿದೆ?. ಎಷ್ಟು ಮಂದಿಗೆ ಇನ್ನೂ ನಗದು ವರ್ಗಾವಣೆ ಆಗುತ್ತಿಲ್ಲ ಎಂಬ ವರದಿ ಇಲ್ಲಿದೆ.
ಅನ್ನ ಭಾಗ್ಯ ಯೋಜನೆ ರಾಜ್ಯದ ಬಿಪಿಎಲ್ ಕಾರ್ಡ್ ದಾರರಿಗೆ ಐದು ಕೆ.ಜಿ. ಉಚಿತ ಅಕ್ಕಿ ವಿತರಿಸುವ ಉದ್ದೇಶಿತ ಯೋಜನೆ ಇದಾಗಿದೆ. ಆದರೆ ಅಕ್ಕಿ ಕೊರತೆ ಹಿನ್ನೆಲೆ ಕೇಂದ್ರದಿಂದ ಅಕ್ಕಿ ಸಿಗದ ಕಾರಣ ರಾಜ್ಯ ಸರ್ಕಾರ ಅನಿವಾರ್ಯವಾಗಿ ಅಕ್ಕಿ ಬದಲು ನಗದು ನೀಡಲು ನಿರ್ಧರಿಸಿತು. ಜುಲೈನಿಂದ ಕಾಂಗ್ರೆಸ್ ಸರ್ಕಾರ ನಗದು ವರ್ಗಾವಣೆ ರೂಪದಲ್ಲಿ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿತು. ಇತ್ತ ಕೇಂದ್ರ ಸರ್ಕಾರ ತನ್ನ ಪಾಲಿನ ಉಚಿತ ಐದು ಕೆ.ಜಿ ಅಕ್ಕಿಯನ್ನು ರಾಜ್ಯದ ಬಿಪಿಎಲ್ ಪಡಿತರದಾರಿಗೆ ವಿತರಿಸುತ್ತಿದೆ.
ಆದರೆ, ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊರತೆ ಹಿನ್ನೆಲೆ ತನ್ನ ಗ್ಯಾರಂಟಿಯಾದ 5 ಕೆ.ಜಿ ಅಕ್ಕಿ ಬದಲು ನಗದು ನೀಡುವ ವ್ಯವಸ್ಥೆ ಜಾರಿಗೊಳಿಸಿತು. ರಾಜ್ಯದ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರದಾರರಿಗೆ ಜುಲೈ 10ರಿಂದ ಫಲಾನುಭವಿಗಳ ಖಾತೆಗೆ ಅಕ್ಕಿ ಬದಲು ನಗದು ಜಮೆ ಮಾಡುವ ಪ್ರಕ್ರಿಯೆ ಆರಂಭಿಸಿತ್ತು. ಪ್ರತಿ ಕೆ.ಜಿಗೆ 34 ರೂ.ರಂತೆ ಮಾಸಿಕ 170 ರೂ. ನಗದು ಹಣವನ್ನು ಪಡಿತರ ಫಲಾನುಭವಿಯ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾಯಿಸಲಾಗುತ್ತಿದೆ. ಇದೀಗ ನಗದು ವರ್ಗಾವಣೆಯ ಅನ್ನಭಾಗ್ಯಕ್ಕೆ ಏಳು ತಿಂಗಳು ಕಳೆದಿದೆ.
ಅನ್ನಭಾಗ್ಯದಡಿ ಈವರೆಗೆ ಜಮೆ ಮಾಡಿದ ಹಣ ಏನು? :ಅನ್ನಭಾಗ್ಯಕ್ಕೆ ರಾಜ್ಯ ಸರ್ಕಾರ 2023-24 ಸಾಲಿನಲ್ಲಿ ಒಟ್ಟು 10,265 ಕೋಟಿ ರೂ. ಹಂಚಿಕೆ ಮಾಡಿದೆ. ಈ ಪೈಕಿ ಡಿಸೆಂಬರ್ ವರೆಗೆ 4,071 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಅನ್ನಭಾಗ್ಯ ಯೋಜನೆಯಡಿ ಡಿಸೆಂಬರ್ ವರೆಗೆ 3,998.54 ಕೋಟಿ ರೂ. ವೆಚ್ಚವಾಗಿದೆ ಎಂದು ಕೆಡಿಪಿ ಪ್ರಗತಿ ಅಂಕಿ - ಅಂಶದಲ್ಲಿ ತೋರಿಸಲಾಗಿದೆ. ಮಾಸಿಕ ಸುಮಾರು 600 - 655 ಕೋಟಿ ರೂ. ವರೆಗೆ ಫಲಾನುಭವಿಗಳ ಖಾತೆಗೆ ಡಿಬಿಟಿ ಮಾಡಲಾಗುತ್ತಿದೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
ಆಹಾರ ಇಲಾಖೆ ನೀಡಿದ ಅಂಕಿ - ಅಂಶದ ಪ್ರಕಾರ ಜುಲೈ ತಿಂಗಳಲ್ಲಿ ಆಹಾರ ಇಲಾಖೆ ರಾಜ್ಯದ ಒಟ್ಟು 3.45 ಕೋಟಿ ಪಡಿತರ ಫಲಾನುಭವಿಗಳ ಖಾತೆಗಳಿಗೆ ಸುಮಾರು 566 ಕೋಟಿ ರೂ. ಡಿಬಿಟಿ (ನಗದು ವರ್ಗಾವಣೆ) ಮಾಡಿದೆ. ಅದೇ ಆಗಸ್ಟ್ ನಲ್ಲಿ ಒಟ್ಟು 3.36 ಕೋಟಿ ಫಲಾನುಭವಿಗಳ ಖಾತೆಗಳಿಗೆ ಸುಮಾರು 605.88 ಕೋಟಿ ರೂ. ಡಿಬಿಟಿ ಮಾಡಿದೆ. ಇನ್ನು ಸೆಪ್ಟೆಂಬರ್ ತಿಂಗಳಲ್ಲಿ ಆಹಾರ ಇಲಾಖೆ 3.86 ಕೋಟಿ ಫಲಾನುಭವಿಗಳ ಖಾತೆಗಳಿಗೆ ಒಟ್ಟು 627.73 ಕೋಟಿ ರೂ. ನಗದು ಜಮೆ ಮಾಡಿದೆ.