ಬೆಂಗಳೂರು: ನಮ್ಮದು ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲ. ಕಲ್ಯಾಣ ರಾಜ್ಯದ ಆಡಳಿತ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಬೆಂಗಳೂರಿನ ಪದ್ಮನಾಭನಗರ ನಿವಾಸಿಯೊಬ್ಬರಿಗೆ ಸೇರಿದ ನಿವೇಶನಗಳನ್ನು ನಾಗರಿಕ ಸೇವೆಗೆ (ಸಿಎ) ಮೀಸಲಿಟ್ಟಿರುವುದು ಎಂಬುದಾಗಿ ವಾದಿಸಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ವಾದವನ್ನು ತಳ್ಳಿ ಹಾಕಿದೆ.
ಅಲ್ಲದೇ ಈ ಸಂಬಂಧ ಬಿಡಿಎ ನಿವೇಶನ ಮಾಲೀಕರಿಗೆ ಬರೆದಿದ್ದ ಪತ್ರವನ್ನು ರದ್ದು ಪಡಿಸಿ ಆದೇಶಿಸಿದೆ. ಸುಮಾರು 30 ವರ್ಷಗಳ ಹಿಂದೆ ಮಂಜೂರಾಗಿದ್ದ ನಿವೇಶನವನ್ನು ಸಿಎಗೆ ಮೀಸಲಿಟ್ಟಿರುವುದಾಗಿ ತಿಳಿಸಿ 2013ರ ಜೂನ್ 20 ರಂದು ನಗರದ ಪದ್ಮನಾಭನಗರದ ಬಿ. ವಿ ಓಂಪ್ರಕಾಶ್ ಎಂಬುವರಿಗೆ ಬಿಡಿಎ ಪತ್ರ ಬರೆದಿತ್ತು. ಇದನ್ನು ಪ್ರಶ್ನಿಸಿ ಓಂಪ್ರಕಾಶ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು, ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಪೀಠ ಈ ಆದೇಶ ನೀಡಿದೆ.
ಅಲ್ಲದೇ, ಬಿಡಿಎ ಅಧಿಕಾರಿಗಳು ಎಸಗಿರುವ ತಪ್ಪುಗಳಿಗೆ ದೊಡ್ಡ ಮಟ್ಟದ ದಂಡ ವಿಧಿಸಬಹುದಾಗಿದೆ. ಆದರೆ, ಬಿಡಿಎ ಪರ ವಕೀಲರ ಮನವಿಯನ್ನು ಪರಿಗಣಿಸಿ ದಂಡ ಹಾಕುವ ನಿರ್ಧಾರ ಹಿಂಪಡೆಯಲಾಗಿದೆ. ಆದರೆ, ಅಧಿಕಾರಿಗಳು ಅರ್ಜಿದಾರರ ವಿರುದ್ಧ ಮುಂದಾಗಿರುವ ಕ್ರಮವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ತಪ್ಪಿತಸ್ಥ ಅಧಿಕಾರಿಗಳಿಗೆ ದಂಡ ವಿಧಿಸುವ ಸಂಬಂಧ ಅರ್ಜಿದಾರರು ಮೆಮೋ ಸಲ್ಲಿಸಬಹುದು ಎಂದು ಸೂಚನೆ ನೀಡಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು?: ಶ್ರೀ ರಾಧಕೃಷ್ಣ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಖಾಸಗಿ ಬಡಾವಣೆ ಅಭಿವೃದ್ಧಿಪಡಿಸಿದ್ದು, ಇದಕ್ಕಾಗಿ ನಿರ್ಮಾಣ ಉದ್ಯಮ ತರಬೇತಿ ಮಂಡಳಿ (ಸಿಐಟಿಬಿ) ಮೂಲಕ ಅನುಮತಿ ನೀಡಿತ್ತು. ಈ ನಡುವೆ ಬಿಡಿಎಯಿಂದ ಒಪ್ಪಿಗೆ ನೀಡಲಾಗಿದ್ದ ಬಡಾವಣೆಯಲ್ಲಿ ಅರ್ಜಿದಾರರಾದ ಓಂ ಪ್ರಕಾಶ್ ನಿವೇಶನಗಳ ಸಂಖ್ಯೆ 86 ಮತ್ತು 86ಎ ಮಂಜೂರಾಗಿದ್ದವು.
1985ರ ಜೂನ್ 7 ರಂದು ಸೊಸೈಟಿಯು ಓಂ ಪ್ರಕಾಶ್ ಅವರಿಗೆ ಎರಡು ನಿವೇಶನಗಳನ್ನು ಕ್ರಯ ಮಾಡಿಕೊಟ್ಟಿದೆ. ಈ ಕ್ರಯ ಪತ್ರದಲ್ಲಿ ಕೆಲವು ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ 1997ರ ಮಾರ್ಚ್ 29ರಂದು ಮತ್ತೊಂದು ಕ್ರಯ ಪತ್ರ ಮಾಡಿಕೊಟ್ಟು ಸರಿ ಪಡಿಸಲಾಗಿತ್ತು. ಇದಾಗಿ 30 ವರ್ಷ ಕಳೆದಿದೆ. ತೆರಿಗೆಯನ್ನೂ ಪಾವತಿ ಮಾಡುತ್ತಿದ್ದಾರೆ. ಬಳಿಕ ನಿವೇಶನಗಳು ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಿದ್ದು, ಪರವಾನಗಿ ಪಡೆದು ಸಾಕಷ್ಟು ವೆಚ್ಚ ಮಾಡಿ ಕಟ್ಟಡವನ್ನೂ ನಿರ್ಮಿಸಿದ್ದರು. ಈ ಎಲ್ಲ ಬೆಳವಣಿಗೆಗಳು ನಡೆದ ಸಂದರ್ಭದಲ್ಲಿ ಬಿಡಿಎ ಕಾಯಿದೆ-1976 ಜಾರಿಗೆ ಬಂದಿರಲಿಲ್ಲ.
ಈ ನಡುವೆ, 2013ರ ಜೂನ್ 20ರಂದು ಪತ್ರವನ್ನು ಬರೆದಿದ್ದ ಬಿಡಿಎ, ಪತ್ರ ಬರೆದು ನಿಮ್ಮ ನಿವೇಶನಗಳು ಸಿಎ ವ್ಯಾಪ್ತಿಗೆ ಸೇರಿವೆ ಎಂದು ತಿಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ವೇಳೆ, ಬಿಡಿಎ ಪರ ವಕೀಲರು ಹಾಜರಾಗಿ, ಶ್ರೀ ರಾಧಕೃಷ್ಣ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ 1973ರಲ್ಲಿ ಬಡಾವಣೆ ನೀಡಿದ್ದ ದೃಢೀಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪ ವ್ಯಕ್ತ ಪಡಿಸಿ 1990ರ ಅಕ್ಟೋಬರ್ 10ರಂದು ಬಿಡಿಎನ ಸಂಬಂಧಿತ ಅಧಿಕಾರಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬುದಾಗಿ ದಾಖಲೆಗಳೊಂದಿಗೆ ನ್ಯಾಯಪೀಠಕ್ಕೆ ವಿವರಿಸಿದರು.
ಪ್ರಮಾಣ ಪತ್ರ ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರಿಗೆ ಮಂಜೂರಾಗಿದ್ದ ನಿವೇಶನಗಳ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವನ್ನು ಪತ್ತೆ ಹಚ್ಚಿತ್ತು. ಜತೆಗೆ, ಬಿಡಿಎ ಅರ್ಜಿದಾರರಿಗೆ ನಿವೇಶನ ಮಂಜೂರು ಮಾಡಿದ್ದ ಸೋಸೈಟಿಯ ಬಳಿ ಈ ಸಂಬಂಧ ಪ್ರಶ್ನೆ ಮಾಡದೇ ನೇರವಾಗಿ ಅರ್ಜಿದಾರರಿಗೆ ಪತ್ರ ಬರೆದಿರುವ ಅಂಶ ನ್ಯಾಯಪೀಠದ ಗಮನಕ್ಕೆ ಬಂದಿತ್ತು. ಈ ಅಂಶಗಳನ್ನು ಪರಿಗಣಿಸಿದ ನ್ಯಾಯಪೀಠ, ಬಿಡಿಎ ಬರೆದಿದ್ದ ಪತ್ರವನ್ನು ವಜಾಗೊಳಿಸಿ ಆದೇಶಿಸಿದೆ.
ಇದನ್ನೂ ಓದಿ:ಪ್ರಕರಣದ ವಿಚಾರಣೆ ವೇಳೆ ಚಾಟ್ ಬಾಕ್ಸ್ನಲ್ಲಿ ಸಂದೇಶ ಮಾಡಿದ ವಿದ್ಯಾರ್ಥಿಗಳು: ಹೈಕೋರ್ಟ್ ಗರಂ