ಬೆಂಗಳೂರು:ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿರುವ ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮದುವೆ ಸಂಭ್ರಮದ ನಡುವೆಯೂ ತಮ್ಮ ಹಾಟ್ ಫೇವರಿಟ್ ಮಸಾಲೆ ದೋಸೆ ಸವಿಯುವುದನ್ನು ಮರೆಯಲಿಲ್ಲ.
ಯಾವಾಗ ಬೆಂಗಳೂರಿಗೆ ಭೇಟಿ ನೀಡಿದರೂ ಶಿವಾನಂದ ವೃತ್ತದ ಸಮೀಪದಲ್ಲಿರುವ ಜನಾರ್ದನ ಹೋಟೆಲ್ಗೆ ವೆಂಕಯ್ಯ ನಾಯ್ಡು ಒಂದು ಭೇಟಿ ನೀಡಿಯೇ ನೀಡುತ್ತಾರೆ. ರುಚಿರುಚಿಯಾದ ಮಸಾಲೆ ದೋಸೆ ಸವಿದು ಬಿಸಿ ಬಿಸಿಯಾದ ಚಹಾ ಹೀರಿ ಆಪ್ತರ ಜೊತೆ ಕೆಲ ಸಮಯ ಕಳೆಯುವುದನ್ನು ಅವರು ರೂಢಿಸಿಕೊಂಡಿದ್ದಾರೆ.
ಅದರಂತೆ ಇಂದು ಕೂಡ ನಗರಕ್ಕೆ ಆಗಮಿಸಿದ ವೆಂಕಯ್ಯ ನಾಯ್ಡು ಮೊದಲು ಭೇಟಿ ನೀಡಿದ್ದೇ ಜನಾರ್ದನ ಹೋಟೆಲ್ಗೆ. ತಮ್ಮ ಫೇವರಿಟ್ ಮಸಾಲೆ ದೋಸೆ ಸವಿದು ಚಹಾ ಹೀರಿದ ವೆಂಕಯ್ಯ ನಾಯ್ಡು, ಸಾಕಷ್ಟು ವರ್ಷದಿಂದ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿರುವವರನ್ನು ಮಾತನಾಡಿಸಿದರು. ಇದೇ ವೇಳೆ ಹೋಟೆಲ್ ಮಾಲೀಕರನ್ನೂ ಭೇಟಿಯಾದರು. ಈ ವಿಷಯವನ್ನು ಸ್ವತಃ ತಮ್ಮ ಟ್ವಿಟರ್ ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ.
ಇಂದು ಬೆಳಗ್ಗೆಯ ಉಪಹಾರಕ್ಕೆ ನನ್ನ ನೆಚ್ಚಿನ ಮಸಾಲೆ ದೋಸೆಯನ್ನು ಸವಿದೆ, ಎರಡು ದಶಕದಿಂದ ಬೆಂಗಳೂರಿಗೆ ಬಂದಾಗ ಜನಾರ್ದನ ಹೋಟೆಲ್ಗೆ ತೆರಳಿ ಉಪಹಾರ ಸೇವಿಸುವ ರೂಢಿಯಿದೆ. ಅದರಂತೆ ಇಂದು ಕೂಡ ದೋಸೆ ಸವಿದೆ. ನಾನು ಯಾವಾಗಲೂ ಸಾಂಪ್ರದಾಯಿಕ ಭಾರತೀಯ ಪಾಕ ಪದ್ದತಿಯನ್ನೇ ಆರಿಸಿಕೊಳ್ಳುತ್ತೇನೆ. ಅಲ್ಲದೇ ದಕ್ಷಿಣ ಭಾರತೀಯ ಖಾದ್ಯಗಳೇ ಇಷ್ಟ. ಹೋಟೆಲ್ನಲ್ಲಿ ಈಗಿನ ತಲೆಮಾರಿನ ಮಾಲೀಕರು ಹಾಗೂ ಹಳೆಯ ತಲೆಮಾರಿನ ಸಿಬ್ಬಂದಿಯನ್ನು ಭೇಟಿಯಾದೆ ಎಂದು ತಮ್ಮ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಯಾವಾಗ ರಾಜ್ಯಕ್ಕೆ ಭೇಟಿ ನೀಡಿದರೂ ಕನ್ನಡ, ಕರ್ನಾಟಕದ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳನ್ನಾಡುವ ವೆಂಕಯ್ಯ ನಾಯ್ಡು ಇಂದು ಕೂಡ ಕರ್ನಾಟಕದ ಜನರ ಸ್ನೇಹ ಮನೋಭಾವ ನನಗೆ ಬಹಳ ಇಷ್ಟ. ಜನಾರ್ದನ ಹೊಟೇಲ್ ದೋಸೆ ನನ್ನ ಫೇವರಿಟ್, ಇದು ಬ್ಯೂಟಿಫುಲ್ ಪ್ಲೇಸ್ ಎಂದು ಸಂತಸ ಹಂಚಿಕೊಂಡಿದ್ದಾರೆ.