ಬೆಂಗಳೂರು:ಯಾವುದೇ ತರಕಾರಿಗಳನ್ನು ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಬಾರದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ವರ್ತಕರಿಗೆ ಸೂಚಿಸಿದ್ದಾರೆ. ಬ್ಯಾಟರಾಯನಪುರ ಹಾಗೂ ದಾಸನಪುರ ಮಾರುಕಟ್ಟೆ ಪ್ರಾಂಗಣಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ್ಣು, ತರಕಾರಿ ಬೆಲೆಗಳು ಜನ ಸ್ನೇಹಿಯಾಗಿರಬೇಕು ಎಂದರು.
ತರಕಾರಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಬಾರದು: ಸಚಿವ ಗೋಪಾಲಯ್ಯ ಎಚ್ಚರಿಕೆ - ಕೊರನಾ ಲೆಟೆಸ್ಟ್ ನ್ಯೂಸ್
ಕೊರೊನಾ ಲಾಕ್ಡೌನ್ನಿಂದಾಗಿ ಮಾರುಕಟ್ಟೆಗಳಲ್ಲಿ ಜನರಿಗೆ ಅಗತ್ಯ ವಸ್ತುಗಳ ಮಾರಾಟದಲ್ಲಿ ವ್ಯತ್ಯಯವಾಗಿದೆ. ಅಲ್ಲದೆ ಹಲವೆಡೆ ತರಕಾರಿಗಳನ್ನು ದುಪ್ಪಟ್ಟು ಬೆಲೆಗೆ ಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆ ಬ್ಯಾಟರಾಯನಪುರ ಹಾಗೂ ದಾಸನಪುರ ಮಾರುಕಟ್ಟೆ ಪ್ರಾಂಗಣಕ್ಕೆ ಭೇಟಿ ನೀಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಯಾವುದೇ ತರಕಾರಿಗಳನ್ನು ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಬಾರದು ಎಂದಿದ್ದಾರೆ.
ಯಾವುದೇ ಕಾರಣಕ್ಕೂ 50 ರೂಪಾಯಿ ಇರುವ ತರಕಾರಿಯನ್ನು 150 ರೂ.ಗೆ ಮಾರಾಟ ಮಾಡಬಾರದು ಎಂದು ಎಚ್ಚರಿಕೆ ನೀಡಿದರು. ಕೊರೊನಾ ವೈರಸ್ ಮಹಾಮಾರಿಯ ವಿರುದ್ಧ ಸಮರ ಸಾರಲು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅದಕ್ಕಾಗಿಯೇ ಲಾಕ್ಡೌನ್ಗೆ ಕರೆ ನೀಡಲಾಗಿರುವುದನ್ನು ಜನರು ಅರಿತುಕೊಳ್ಳಬೇಕು. ಲಾಕ್ ಡೌನ್ನಿಂದ ಯಾರಿಗೂ ಯಾವುದೇ ತೊಂದರೆಗಳಾಗುವುದಿಲ್ಲ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಿಟ್ಟ ಕ್ರಮ ಕೈಗೊಂಡಿದ್ದಾರೆ. ಹಾಗೆಯೇ ನಮ್ಮೆಲ್ಲರಿಗೂ ಜವಾಬ್ದಾರಿಯುತ ಖಾತೆಗಳನ್ನು ಕೊಟ್ಟಿದ್ದಾರೆ. ನಮ್ಮ ಖಾತೆಗಳನ್ನು ನಾವು ಸರಿಯಾಗಿ ನಿಬಾಯಿಸಬೇಕಿದೆ ಎಂದಿದ್ದಾರೆ.