ದೊಡ್ಡಬಳ್ಳಾಪುರ: ರಾತ್ರೋರಾತ್ರಿ ಕೆಂಪೇಗೌಡರ ಪ್ರತಿಮೆಯನ್ನೂ ಗ್ರಾಮದ ಒಂದು ಸಮುದಾಯ ಸ್ಥಾಪನೆ ಮಾಡಿದರೆ, ಮತ್ತೊಂದು ಸಮುದಾಯ ಬೆಳಗ್ಗೆ ಶಿವಕುಮಾರ ಸ್ವಾಮೀಜಿಯ ಪ್ರತಿಮೆ ಸ್ಥಾಪನೆಗೆ ಮುಂದಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕು ಕೊಡಿಗೇಹಳ್ಳಿ ಗ್ರಾಮ ಜರುಗಿದೆ. ಗ್ರಾಮದಲ್ಲಿ ಈ ಪ್ರತಿಮೆ ಸ್ಥಾಪನೆಯ ವಿಚಾರ ವಿವಾದಕ್ಕೆ ತಿರುಗಿದ್ದು ಅಶಾಂತಿಯ ಗೊಂದಲ ವಾತಾವರಣ ಸೃಷ್ಟಿಸಿದೆ.
ಹೀಗಾಗಿ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮದ ಎರಡು ಪ್ರತ್ಯೇಕ ಸಮುದಾಯದವರು ನಾಡಪ್ರಭು ಕೆಂಪೇಗೌಡ ಮತ್ತು ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆ ಸ್ಥಾಪನೆಗೆ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ.
ನವೆಂಬರ್ 30ರಂದು ರಾತ್ರಿ ಒಂದು ಸಮುದಾಯದವರು ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ. ಕೆಂಪೇಗೌಡರ ಪ್ರತಿಮೆಗೆ ಮತ್ತೊಂದು ಸಮುದಾಯ ತಕರಾರು ಮಾಡಿದೆ. ಬೆಳಗ್ಗೆ ಪ್ರತಿಮೆಗೆ ಪೂಜೆ ಮಾಡಲು ಬಂದಾಗ ಎರಡು ಸಮುದಾಯಗಳ ನಡುವೆ ಮಾತಿನ ಚಕಮಕಿ ನಡೆದು ವಿವಾದ ವಿಕೋಪಕ್ಕೆ ತಿರುಗಿದೆ. ಪ್ರತಿಮೆ ವಿವಾದದ ಸ್ವರೂಪ ಪಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪೂಜೆಗೆ ಅವಕಾಶ ನೀಡದೇ ವಾಪಸ್ ಕಳುಹಿಸಿದ್ದಾರೆ. ಸ್ಥಳದಲ್ಲೇ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.