ಬೆಂಗಳೂರು: ನಗರದಲ್ಲಿ ಗಾಳಿ ಸಹಿತ ಮಳೆ ಜೋರಾಗಿದ್ದು, ವರುಣನ ಅಬ್ಬರಕ್ಕೆ ಹಲವೆಡೆ ಮರಗಳು ಧರೆಗುರುಳುತ್ತಿದ್ದು ಸಂಚಾರ ವ್ಯವಸ್ಥೆ ಹದಗೆಟ್ಟಿದೆ.
ನಗರದ ಮೆಜೆಸ್ಟಿಕ್, ಮಲ್ಲೇಶ್ವರಂ, ಮೈಸೂರು ರಸ್ತೆ, ವಿಜಯ ನಗರ, ಕನಕಪುರ ರಸ್ತೆ, ಜಯನಗರ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಗಾಳಿ ಸಹಿತ ಮಳೆಯ ಪರಿಣಾಮ, ಮೂಡಲಪಾಳ್ಯ, ಜಯನಗರ 38 ಕ್ರಾಸ್, ಎಸ್.ಟಿ ಬೆಡ್ ಕೋರಮಂಗಲ, ಯಲಹಂಕ ಜಿಕೆವಿಕೆ , ವಾರ್ಡ್ 185,ಇಲಿಯಾಸ್ ನಗರ, ಮಲ್ಲೇಶ್ವರಂ ಹನ್ನೊಂದನೇ ಕ್ರಾಸ್ ಬಳಿ ಆರಕ್ಕೂ ಹೆಚ್ಚು ಮರಗಳು ಬಿದ್ದಿವೆ.
ಅಲ್ಲದೆ ಹಲವೆಡೆ ರಸ್ತೆಯಲ್ಲೇ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕೋಣನಕುಂಟೆ ಮೆಟ್ರೋ ಸ್ಟೇಷನ್ ಬಳಿ ನೀರು ನಿಂತಿದ್ದು, ಬಿಬಿಎಂಪಿ ಸಹಾಯವಾಣಿಗೆ ಸಾರ್ವಜನಿಕರಿಂದ ದೂರಿನ ಕರೆಗಳು ಬಂದಿವೆ. ಪಾಲಿಕೆ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಹೋಗಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.
ಬೆಂಗಳೂರಿನ ನಾಗರಬಾವಿಯ ಎನ್ ಜಿಇಎಫ್ ಲೇಔಟ್ ನಲ್ಲಿ ಭಾರಿ ಗಾಳಿ ಮಳೆಗೆ ಕರಣಾಕರ್ ಎಂಬುವವರಿಗೆ ಸೇರಿದ ಆಲ್ಟೊ ಕಾರಿನ ಮೇಲೆ ಮರ ಬಿದ್ದಿದೆದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿದ್ದು, ಮರ ಬಿದ್ದ ಕೂಡಲೇ ಪಾಲಿಕೆ ಸಿಬ್ಬಂದಿ ಮರ ತೆರವು ಮಾಡಿದ್ದಾರೆ.