ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ಶೇ. 50ರಷ್ಟು ರಿಯಾಯಿತಿ ದಂಡ ಪಾವತಿ ನಿನ್ನೆಗೆ (ಶನಿವಾರ) ಕೊನೆಯಾಗಿದ್ದು, ಒಂದೇ ದಿನದಲ್ಲಿ ಸವಾರರು ಒಂದು ಕೋಟಿ ರೂ.ಗೂ ಹೆಚ್ಚು ದಂಡ ಕಟ್ಟಿದ್ದಾರೆ. ರಿಯಾಯಿತಿ ದಂಡ ಜಾರಿಯಾದಾಗಿನಿಂದ ಹಿಡಿದು ನಿನ್ನೆಯವರೆಗೆ 9 ಕೋಟಿ ರೂಪಾಯಿಗೂ ಹೆಚ್ಚು ದಂಡ ಸಂಗ್ರಹವಾಗಿದೆ.
ಶುಕ್ರವಾರದವರೆಗೆ 8 ಕೋಟಿ ರೂ.ವರೆಗೆ ದಂಡ ಸಂಗ್ರಹ ಆಗಿತ್ತು. ರಿಯಾಯಿತಿ ದಂಡ ಪಾವತಿಸಲು ನಿನ್ನೆಯೇ ಕೊನೆ ದಿನ. ಫೆಬ್ರವರಿ 11ಕ್ಕೂ ಮುನ್ನದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಶೇ. 50 ರಷ್ಟು ದಂಡ ಕಟ್ಟುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದರು. ರಿಯಾಯಿತಿ ದಂಡ ಪಾವತಿಗೆ ಗಡುವು ಮುಕ್ತಾಯವಾಗುವ 24 ಗಂಟೆ ಅಂತರದಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ದಂಡದ ಮೊತ್ತ ಪಾವತಿಸಿದ್ದಾರೆ. ಈ ಮೂಲಕ ಜುಲೈ 6 ರಿಂದ ಸೆ.9ರವರೆಗೆ ಈವರೆಗೆ ಒಟ್ಟು 2,92,792 ಲಕ್ಷ ಪ್ರಕರಣಗಳಿಂದ 9.24 ಕೋಟಿ ರೂ.ಗೂ ಹೆಚ್ಚು ದಂಡ ಪಾವತಿಯಾಗಿದೆ.
ಜುಲೈ ತಿಂಗಳಲ್ಲಿ 1,23,178 ಲಕ್ಷ ಕೇಸ್ಗಳಿಂದ 3,89 ಕೋಟಿ ರೂ. ಸಂಗ್ರಹವಾಗಿದೆ. ಆಗಸ್ಟ್ನಲ್ಲಿ 86,587 ಪ್ರಕರಣಗಳಿಂದ 2.82 ಕೋಟಿ ರೂ. ಕಲೆಕ್ಷನ್ ಆಗಿದೆ. ಸೆಪ್ಟೆಂಬರ್ 9ಕ್ಕೆ ಕೊನೆಗೊಂಡಂತೆ 83 ಸಾವಿರ ಕೇಸ್ಗಳಿಂದ 2.82 ಕೋಟಿ ರೂಪಾಯಿ ಸೇರಿದಂತೆ ಒಟ್ಟು 9 ಕೋಟಿ ರೂ.ಗೂ ಹೆಚ್ಚು ದಂಡ ಪಾವತಿಸಿಕೊಳ್ಳಲಾಗಿದೆ ಎಂದು ಸಂಚಾರಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಿಂಗಳು | ಪ್ರಕರಣಗಳು | ಒಟ್ಟು ದಂಡ |
ಜುಲೈ | 1,23,178 | 3,89 ಕೋಟಿ ರೂ. |
ಆಗಸ್ಟ್ | 86,587 | 2.82 ಕೋಟಿ ರೂ. |
ಸೆಪ್ಟೆಂಬರ್ | 83,000 | 2.82 ಕೋಟಿ ರೂ. |