ಬೆಂಗಳೂರು:ಪೌರಕಾರ್ಮಿಕರ ಬೇಡಿಕೆ ಈಡೇರಿಸಲು, ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸದ ಹಿನ್ನೆಲೆ ನಾಳೆಯಿಂದ ಸಂಪೂರ್ಣವಾಗಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸುವಂತೆ ಪೌರಕಾರ್ಮಿಕರು ಕರೆ ನೀಡಿದ್ದಾರೆ. ರಾಜಧಾನಿಯ ಫ್ರೀಡಂ ಪಾರ್ಕ್ ಸೇರಿದಂತೆ ರಾಜ್ಯದ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಕಳೆದ ಎರಡು ದಿನಗಳಿಂದ ಕರ್ನಾಟಕ ರಾಜ್ಯದ ನಗರಪಾಲಿಕೆ, ಪುರಸಭೆ, ನಗರಸಭೆ, ಪೌರಕಾರ್ಮಿಕ ಮಹಾಸಂಘ ನೇತೃತ್ವದಲ್ಲಿ ಪೌರ ಕಾರ್ಮಿಕರು ಪ್ರತಿಭಟನೆ ಮಾಡುತ್ತಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರಕಾರ್ಮಿಕರ ಮುಷ್ಕರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಆಶ್ವಾಸನೆಯನ್ನು ಲಿಖಿತ ರೂಪದಲ್ಲಿ ಹೊರಡಿಸಿಲ್ಲವೆಂದು ಆರೋಪಿಸಿ, ಪ್ರತಿಭಟನೆ ಮುಂದುವರೆಸಿದ್ದಾರೆ. ಭಾನುವಾರ ಸಂಜೆವರೆಗೂ ಆದೇಶ ಕೈಸೇರದಿದ್ದರೆ, ನಾಳೆಯಿಂದ (ಸೋಮವಾರ) ಸಂಪೂರ್ಣ ಕಸ ವಿಲೇವಾರಿ ಸ್ಥಗಿತಗೊಳ್ಳಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಬೇಡಿಕೆಗಳೇನು?:
- ಬೆಂಗಳೂರು ನಗರ ಮೇಸ್ತ್ರಿಯನ್ನು ಖಾಯಂ ಮಾಡಬೇಕು.
- ಬೆಂಗಳೂರು ನಗರ ಆಟೋಚಾಲಕರು, ಲಾರಿ ಚಾಲಕರು, ಲೋಡರ್ಸ್ ಸಹಾಯಕರನ್ನು ಖಾಯಂ ಮಾಡಬೇಕು.
- ದಿವಂತಗ ಐ.ಡಿ.ಪಿ. ಸಾಲಪ್ಪ ವರದಿಯನ್ನು ಜಾರಿಗೆ ತರಬೇಕು.
- ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನು ಖಾಯಂ ಮಾಡಬೇಕು.
ಶಿವಮೊಗ್ಗದಲ್ಲಿ ಮೂರನೇ ದಿನಕ್ಕೆ ಕಾಲಿಟ್ಟ ಮುಷ್ಕರ:ನೇರಪಾವತಿ ಪೌರ ಕಾರ್ಮಿಕರು, ಹೊರಗುತ್ತಿಗೆ ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಹೆಲ್ಪರ್ಸ್ ಹಾಗೂ ಮನೆಮನೆ ಕಸ ಸಂಗ್ರಹಿಸುವ ಪೌರ ಕಾರ್ಮಿಕರು ಸೇರಿದಂತೆ ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ಏಕಕಾಲಕ್ಕೆ ಖಾಯಂಗೊಳಿಸಬೇಕು ಎಂದು ಒತ್ತಾಯಿಸಿ ಹಮ್ಮಿಕೊಂಡಿರುವ ಮುಷ್ಕರ ಇಂದಿಗೆ ಮೂರನೇ ದಿನಕ್ಕೆ ತಲುಪಿದೆ.
ಇದನ್ನೂ ಓದಿ:ಪೌರ ಕಾರ್ಮಿಕರ ಬೇಡಿಕೆ ಈಡೇರಿಕೆ.. ಭರವಸೆ ಸಾಲದು, ಅಧಿಕೃತ ಆದೇಶ ಹೊರಡಿಸಿ ಎಂದ ಸಿದ್ದರಾಮಯ್ಯ
ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ನಲ್ಲಿ ಮುಷ್ಕರ ನಡೆಸುತ್ತಿರುವ ಪೌರ ಕಾರ್ಮಿಕರಿಗೆ ಜಿಲ್ಲಾ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಪ್ರಗತಿಪರ ಸಂಘಟನೆ, ದಲಿತ ಸಂಘಟನೆಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪೌರ ಕಾರ್ಮಿಕರಿಗಾಗಿ ಜಾರಿ ಮಾಡಿರುವ ಗೃಹ ಭಾಗ್ಯ ಯೋಜನೆಯನ್ನು ಕೇವಲ ಖಾಯಂ ಕಾರ್ಮಿಕರಿಗೆ ಸೀಮಿತ ಮಾಡಿ ಶೇ.85 ರಷ್ಟು ಸ್ವಚ್ಛತಾ ಕಾರ್ಮಿಕರಿಗೆ ತಾರತಮ್ಯ ಮಾಡಲಾಗಿದೆ. ಕೂಡಲೇ ನೇರಪಾವತಿ ಪೌರ ಕಾರ್ಮಿಕರು ಸೇರಿದಂತೆ ಎಲ್ಲಾ ವಿಧದ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.