ಬೆಂಗಳೂರು :ವಿಧಾನಸಭಾ ಚುನಾವಣೆ-2023ರ ಮತ ಎಣಿಕಾ ಕಾರ್ಯ ನಾಳೆ ನಡೆಯಲಿದ್ದು ಬೆಂಗಳೂರು ನಗರದ ನಾಲ್ಕು ಹಾಗೂ ಬೆಂಗಳೂರು ಜಿಲ್ಲೆಯ ಒಂದು ಕೇಂದ್ರದ ಸಹಿತ 05 ಮತ ಎಣಿಕೆ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಣಿಕೆ ದಿನದಂದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದಾದ್ಯಂತ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ 144 ಸೆಕ್ಷನ್ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
1 - ಕೆಆರ್ ಪುರ,ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಪುಲಿಕೇಶಿನಗರ, ಸರ್ವಜ್ಞ ನಗರ ಹಾಗೂ ಸಿವಿ ರಾಮನ್ ನಗರ ಕ್ಷೇತ್ರಗಳ ಮತ ಎಣಿಕಾ ಕಾರ್ಯ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆಯಲಿದ್ದು, ಪೂರ್ವ ಹಾಗೂ ಕೇಂದ್ರ ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ ಭದ್ರತೆ ಇರಲಿದೆ.
2- ಆನೇಕಲ್, ಬೆಂಗಳೂರು ದಕ್ಷಿಣ ಮಹದೇವಪುರ, ಬ್ಯಾಟರಾಯನಪುರ ಯಲಹಂಕ ಹಾಗೂ ದಾಸರಹಳ್ಳಿ ಕ್ಷೇತ್ರಗಳ ಮತ ಎಣಿಕಾ ಕಾರ್ಯ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ನಲ್ಲಿ ನಡೆಯಲಿದ್ದು ಸಿಸಿಬಿಯ ಅಪರಾಧ ವಿಭಾಗದ ಡಿಸಿಪಿ ಹಾಗೂ ವೈಟ್ ಫೀಲ್ಡ್ ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ ಭದ್ರತೆ ಇರಲಿದೆ.
3 - ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಿಕ್ಕಪೇಟೆ, ಚಾಮರಾಜಪೇಟೆ, ಆರ್.ಆರ್.ನಗರ ಹಾಗೂ ಶಿವಾಜಿನಗರ ಕ್ಷೇತ್ರಗಳ ಮತ ಎಣಿಕೆ ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ನಡೆಯಲಿದ್ದು ದಕ್ಷಿಣ ವಿಭಾಗದ ಡಿಸಿಪಿ ಹಾಗೂ ಕಮ್ಯಾಂಡ್ ಸೆಂಟರ್ ಡಿಸಿಪಿಗಳ ನೇತೃತ್ವದಲ್ಲಿ ಭದ್ರತೆ ಇರಲಿದೆ.