ಬೆಂಗಳೂರು: ಸಿಡಿ ಪ್ರಕರಣದ ವಿಚಾರದಲ್ಲಿ ವಿಶೇಷ ತನಿಖಾ ತಂಡ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದ್ದು, ತನಿಖೆಯಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಯುವತಿ ಹಾಗೂ ಅವರ ಪೋಷಕರಿಗೆ ಅಗತ್ಯ ರಕ್ಷಣೆ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶೇಷ ತನಿಖಾ ತಂಡದ ತನಿಖೆಯಲ್ಲಿ ಮಧ್ಯಪ್ರವೇಶ ಮಾಡಲ್ಲ ಎಂದು ಈಗಾಗಲೇ ಹೇಳಿದ್ದೇನೆ. ತಂಡ ರಚನೆಯಾಗಿರುವುದರಿಂದ ಏನೂ ಹೇಳುವುದಿಲ್ಲ. ಯಾವುದೇ ಒಂದು ಪ್ರಕರಣದ ತನಿಖೆ ಆಗುವಾಗ ಹಲವಾರು ಬೆಳವಣಿಗೆಗಳು, ಹಲವಾರು ತಿರುವುಗಳು ಪಡೆಯುತ್ತವೆ. ಅವೆಲ್ಲದಕ್ಕೂ ಪ್ರತಿಕ್ರಿಯೆ ಮಾಡುವುದು ಸೂಕ್ತವಲ್ಲ ಎಂದು ಪ್ರಸ್ತುತ ಸಿಡಿ ತನಿಖಾ ಹಂತದ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿದರು.
ಈಗಾಗಲೇ ನಮ್ಮ ತನಿಖಾ ತಂಡದ ಮುಖ್ಯಸ್ಥರು ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. ಯಾರು ಏನೇ ಹೇಳಲಿ ನಾವು ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದ್ದೇವೆ. ಅದಕ್ಕಾಗಿ ರಮೇಶ್ ಜಾರಕಿಹೊಳಿ ಅವರನ್ನು ವಿಚಾರಣೆ ಮಾಡಿದ್ದೇವೆ ಮತ್ತು ಆ ಯುವತಿಯ ಹೇಳಿಕೆ ಪಡೆಯಲು ಸಿದ್ಧರಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ ಆ ಮಹಿಳೆಗೆ ರಕ್ಷಣೆ ಕೊಡಲು ಸಿದ್ಧರಿದ್ದೇವೆ. ಅವರು ಎಲ್ಲಿದ್ದಾರೆ ಎಂದು ಹೇಳಿದರೆ ಅಲ್ಲಿಯೇ ರಕ್ಷಣೆ ಒದಗಿಸುತ್ತೇವೆ. ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಕಳುಹಿಸಿಕೊಡಲಾಗುತ್ತದೆ. ಪೊಲೀಸ್ ರಕ್ಷಣೆಯಲ್ಲಿ ಅವರು ಹೇಳಿಕೆ ಕೊಡಬಹುದು ಅಥವಾ ಇಲ್ಲಿಗೆ ಬಂದು ಹೇಳಿಕೆ ದಾಖಲಿಸಬಹುದು. ಇಲ್ಲಿಗೆ ಬರಲು ಕೂಡ ರಕ್ಷಣೆ ಒದಗಿಸುತ್ತೇವೆ ಎಂದರು.