ಬೆಂಗಳೂರು: ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಮತ ಉದ್ಭವವಾಗಿಲ್ಲ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಶಾಸಕ ವಿಶ್ವನಾಥ್ ನಡುವೆ ಅಭಿಪ್ರಾಯ ಬೇಧವಿದೆಯೇ ಹೊರತು ಭಿನ್ನಮತವಲ್ಲ, ಯಡಿಯೂರಪ್ಪ ಇಂದು ಬೆಳಗಾವಿಗೆ ತೆರಳುತ್ತಿದ್ದು, ಎಲ್ಲವನ್ನೂ ಸರಿಪಡಿಸಲಿದ್ದಾರೆ. ಇಂದು ರಾತ್ರಿಯೇ ಈ ಸಮಸ್ಯೆ ಪರಿಹಾರವಾಗಲಿದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.
ಕುಮಾರಕೃಪಾ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಭಿನ್ನಮತವಿಲ್ಲ. ಅಭಿಪ್ರಾಯದಲ್ಲಿ ಭಿನ್ನನಿಲುವುಗಳಿವೆ ಅಷ್ಟೆ. ಯಡಿಯೂರಪ್ಪ ಬೆಳಗಾವಿಗೆ ಹೋಗುತ್ತಿದ್ದಾರೆ. ಅಲ್ಲಿ ಎಲ್ಲವೂ ಸರಿಯಾಗಲಿದೆ. ಸಣ್ಣಪುಟ್ಟ ವ್ಯತ್ಯಾಸಗಳು ಸರಿಯಾಗಲಿವೆ. ಅವರೆಲ್ಲಾ ಸದನದ ಒಳಗೆ ಹೋರಾಟ ನಡೆಸಲಿ, ನಾವು ಹೊರಗೆ ಹೋರಾಡಲಿದ್ದೇವೆ. ಅಶೋಕ್, ವಿಶ್ವನಾಥ್ ನಡುವೆ ಏನೇ ಸಮಸ್ಯೆ ಇದ್ದರೂ ಅದು ಸಮನ್ವಯತೆ ಕೊರತೆ ಮಾತ್ರ ಭಿನ್ನಮತವಲ್ಲ. ಇಂದು ರಾತ್ರಿಯೇ ಈ ಸಮಸ್ಯೆ ಪರಿಹಾರವಾಗಲಿದೆ ಎಂದರು.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದು ಹಾಗೂ ಕೆಲ ತಪ್ಪು ನಿರ್ಧಾರಗಳಿಂದಾಗಿ ಬಿಜೆಪಿ ಸೋಲಿಗೆ ಕಾರಣವಾಯಿತು, ಇದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ದೊಡ್ಡವರಾಗಿಬಿಡುತ್ತೀರಾ? ಉತ್ತರ ಕರ್ನಾಟಕದ ಜನ ವಿಜಯೇಂದ್ರ ಆಯ್ಕೆ ಸ್ವಾಗತ ಮಾಡಿದ್ದಾರೆ. ಯಡಿಯೂರಪ್ಪ ಆ ಭಾಗಕ್ಕೆ ಹೋದಲ್ಲಿ ಜನ ಸ್ವಾಗತ ಮಾಡುತ್ತಾರೆ ವಿನಾಃ ಕಾರಣ ಯಡಿಯೂರಪ್ಪ ಕುಟುಂಬದ ವಿರುದ್ಧ ಆರೋಪ ಮಾಡುವುದನ್ನು ಕೈಬಿಡಬೇಕು. ಇದು ಸರಿಯಲ್ಲ. ಇದನ್ನು ನಿಲ್ಲಿಸಬೇಕು, ಇಲ್ಲದೇ ಇದ್ದಲ್ಲಿ, ನಾವೂ ಸಭೆ ಸೇರುತ್ತೇವೆ, ನಮಗೂ ಗೊತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಎಚ್ಚರಿಕೆ ನೀಡಿದರು.
ಒಟ್ಟಾಗಿ ಹೋರಾಟ ಮಾಡೋಣ:ಸದನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಮಾತನಾಡಿ ಒಟ್ಟಾಗಿ ಒಂದಾಗಿ ಹೋರಾಟ ಮಾಡೋಣ. ನೀವು ಸದನದ ಒಳಗೆ ಹೋರಾಡಿ ನಾವು ಹೊರಗೆ ಹೋರಾಡುತ್ತೇವೆ. ಅದನ್ನು ಬಿಟ್ಟು ಯಡಿಯೂರಪ್ಪ ಕುಟುಂಬದ ಬಗ್ಗೆ ಅನಗತ್ಯ ಆರೋಪ ಬೇಡ ಎಂದು ಸಲಹೆ ನೀಡಿದರು.
ಬಸನಗೌಡ ಪಾಟೀಲ್ ಯತ್ನಾಳ್ ಹಿರಿಯ ಶಾಸಕರು, ಉತ್ತರ ಕರ್ನಾಟಕ್ಕೆ ಅನ್ಯಾಯವಾಗಿದೆ ಎನ್ನುತ್ತೀರಿ, ಸಚಿವ ಸ್ಥಾನ ಕೊಡಲಿಲ್ಲ ಎಂದು ಯಡಿಯೂರಪ್ಪ ವಿರುದ್ಧ ನಿರಂತರವಾಗಿ ಮಾತನಾಡಿದಿರಿ, ಆ ಸಂದರ್ಭದಲ್ಲಿ ವರಿಷ್ಠರು ಕರೆದು ಬುದ್ಧಿವಾದ ಹೇಳಬೇಕಿತ್ತು. ಆದರೆ, ಅದಾಗದ ಕಾರಣ ಇದು ಮುಂದುವರೆದು ಧಾರಾವಾಹಿ ರೀತಿ ಮಾತನಾಡುವಂತಾಗಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಅಲ್ಲಿನ ಜನ ಮಾತನಾಡಿಲ್ಲ. ಬರ, ನೆರೆ ವೇಳೆ ಕೇಂದ್ರವನ್ನು ಕಾಯದೆ ಯಡಿಯೂರಪ್ಪ, ಬೊಮ್ಮಾಯಿ ಉತ್ತರ ಕರ್ನಾಟಕಕ್ಕೆ ನೆರವು ನೀಡಿದ್ದರು. ಇಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಇನ್ನು ಮುಂದಾದರೂ ಯಡಿಯೂರಪ್ಪ ಕುಟುಂಬದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ನಮಗೂ ಸಭೆ ಮಾಡಲು ಬರಲಿದೆ. ಹಿಂದೆ ನಾನೂ ಮಾತನಾಡಿದ್ದೆ, ಸೋಲಿನ ಕಾರಣ, ವೈಫಲ್ಯ ಮುಂದಿಟ್ಟಿದ್ದೆ ಅಷ್ಟೆ, ಸಚಿವರಾಗಲಿಲ್ಲ. ಪ್ರತಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಆಗಲಿಲ್ಲ ಎಂದು ಹೀಗೆ ಆರೋಪ ಮಾಡುವುದು ಸರಿಯಲ್ಲ, ಯತ್ನಾಳ್ಗೆ ರಾಜ್ಯಾಧ್ಯಕ್ಷ ಸ್ಥಾನ, ಪ್ರತಿಪಕ್ಷ ನಾಯಕನ ಸ್ಥಾನ ನೀಡಲು ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರೋಧ ವ್ಯಕ್ತಪಡಿಸಿರಲಿಲ್ಲ. ನಿಮ್ಮದು ಒಂದೇ ಅಜೆಂಡಾ, ಯಡಿಯೂರಪ್ಪ ವಿಜಯೇಂದ್ರ ಬಿಟ್ಟು ಏನು ಮಾತನಾಡುತ್ತೀರಿ? ಇನ್ನಾದರೂ ಇದನ್ನು ಬದಲಿಸಿಕೊಳ್ಳಿ ಎಂದು ಸಲಹೆ ನೀಡಿದರು.