ಬೆಂಗಳೂರು : ರಾಜ್ಯದಲ್ಲಿ ಜನ ಮಳೆ ಇಲ್ಲವೆಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದರೆ, ಇತ್ತ ಮಲ್ಲೇಶ್ವರಂ ಬಳಿಯ ದತ್ತಾತ್ರೇಯ ದೇವಸ್ಥಾನ ವಾರ್ಡ್ನ ವೃಷಭಾವತಿ ವ್ಯಾಲಿ ರಾಜಕಾಲುವೆಯ ಅಕ್ಕಪಕ್ಕದ ನಿವಾಸಿಗಳು ಮಳೆಯಿಂದ ಭಯಭೀತರಾಗಿದ್ದಾರೆ.
ರಾಜಕಾಲುವೆ ದುರಸ್ತಿ ಕಾರ್ಯ ಆರಂಭವಾಗಿ ಎರಡು ವರ್ಷ ಮುಗಿದ್ರೂ, ಕೋಟಿ ಕೋಟಿ ರೂಪಾಯಿ ಸುರಿದ್ರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಕೇವಲ ಎರಡು ಕಿಲೋ ಮೀಟರ್ ರಾಜಕಾಲುವೆಗೆ ಎರಡೂ ಬದಿ ಕಾಂಕ್ರೀಟ್ ನಿರ್ಮಾಣ ಹಾಗೂ ಹೂಳು ತೆಗೆಯಲು ಬರೋಬ್ಬರಿ ಹತ್ತು ಕೋಟಿ ರೂಪಾಯಿ ವೆಚ್ಚ ಮಾಡಲಾಗ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಅಧಿಕಾರಿಗಳು ಬರೀ ದುಡ್ಡಿನ ದಂಧೆ ಮಾಡ್ತಾರೆ : ಮೇಯರ್ಗೆ ಸ್ಥಳೀಯರ ದೂರು ಕಾಮಗಾರಿಗೆ ಆರು ಕೋಟಿ ರೂಪಾಯಿ ಖರ್ಚು ಮಾಡಿದ್ರು ಕಾಮಗಾರಿ ನಡೆದಿದೆ ಎಂದು ಊಹಿಸಲೂ ಅಸಾಧ್ಯವಾಗಿದೆ. ತಂತಿಬೇಲಿಯೂ ಕಿತ್ತುಹೋಗಿದೆ. ತಡೆಗೋಡೆ ನಿರ್ಮಾಣವೂ ವ್ಯವಸ್ಥಿತವಾಗಿ ಆಗದೆ ರಸ್ತೆ ಹಾಗೂ ಗೋಡೆ ಮಧ್ಯೆ ಜಾಗ ಬಿಡಲಾಗಿದೆ. ಹೀಗೆ ಕಳಪೆಯಾಗಿ ಕಾಮಗಾರಿ ನಡೆಸಿದ್ರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳಕ್ಕಾಗಮಿಸಿದ್ದ ಮೇಯರ್ ಗಂಗಾಂಬಿಕೆ ಅವರಿಗೆ ದೂರು ನೀಡಿದರು.
ಸ್ಥಳೀಯರ ದೂರಿನ ಹಿನ್ನೆಲೆ ರಾಜಕಾಲುವೆ ಕಾಮಗಾರಿ ನೋಡಲು ಬಂದ ಮೇಯರ್ ಗಂಗಾಂಬಿಕೆ ಅವರ ಬಳಿ ಸ್ಥಳೀಯರು ಈ ವಿಷಯ ತಿಳಿಸಿದ್ರು. ಅಲ್ಲದೆ, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ದುಡ್ಡು ಹೊಡೆಯೋ ದಂಧೆ ಮಾಡ್ತಿದ್ದಾರೆ, ಆದ್ರೆ ಕೆಲಸ ಮಾಡ್ತಿಲ್ಲ. ಎರಡು ಕಿಲೋಮೀಟರ್ ಉದ್ದದ ರಾಜಕಾಲುವೆಗೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ, ಹೂಳು ತೆಗೆಯುವುದಕ್ಕಾಗಿ ಹತ್ತು ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದರಲ್ಲಿ ಈಗಾಗಲೇ ಆರು ಕೋಟಿ ರೂ. ಬಿಲ್ ಪಾವತಿಯೂ ಆಗಿದೆ. ಆದ್ರೆ ಗುತ್ತಿಗೆದಾರ ಮಾತ್ರ ಕೆಲಸ ಮಾಡದೆ ನಾಪತ್ತೆಯಾಗಿದ್ದಾನೆ ಎಂದು ಆರೋಪಿದರು.
ಗುತ್ತಿಗೆದಾರನನ್ನ ಮೇಯರ್ ಗಂಗಾಂಬಿಕೆ ಪ್ರಶ್ನಿಸಿದಾಗ, ಕೆಲಸ ಮಾಡ್ತೀವಿ, ಈ ತಿಂಗಳಲ್ಲಿ ಮುಗಿಸ್ತೀವಿ ಅಂತೆಲ್ಲಾ ತಡಬಡಾಯಿಸ್ಕೊಂಡು ಉತ್ತರ ಕೊಟ್ರು. ಆದ್ರೆ, ರಾಜಕಾಲುವೆ ಕೆಲಸದ ಕೌಶಲವೇ ಇಲ್ಲದ ವ್ಯಕ್ತಿಗೆ ಗುತ್ತಿಗೆ ನೀಡಲಾಗಿದೆ. ಕೇವಲ ದುಡ್ಡು ಹೊಡೆಯುವುದಕ್ಕಾಗಿ ಈ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಅಧಿಕಾರಿಗಳೂ ಶಾಮೀಲಾಗಿರೋದರಿಂದ ಬರೀ ದುಡ್ಡಿನ ದಂಧೆ ನಡೆಯುತ್ತಿದೆ ಎಂದು ಸ್ಥಳೀಯರಾದ ರಂಗಸ್ವಾಮಿ ದೂರಿದರು.