ಕರ್ನಾಟಕ

karnataka

By

Published : Sep 21, 2020, 7:41 PM IST

ETV Bharat / state

ಮಡಿಕೇರಿಯಲ್ಲಿ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ತಡೆಯಲು ನಗರಸಭೆಗೆ ಹೈಕೋರ್ಟ್ ತಾಕೀತು

ವಾದ ಪ್ರತಿವಾದ ಆಲಿಸಿದ ಪೀಠ, ಸ್ಟೋನ್‌ಹಿಲ್ ಮೇಲೆ ಅಕ್ರಮವಾಗಿ ಕಸ ಸುರಿಯುವುದನ್ನು ನಿಲ್ಲಿಸುವುದಾಗಿ ಒಂದು ವಾರದೊಳಗೆ ನಗರಸಭೆ ಪ್ರಮಾಣಪತ್ರ ಸಲ್ಲಿಸಬೇಕು. ಹಾಗೆಯೇ, ತ್ಯಾಜ್ಯ ವಿಲೇವಾರಿಗೆ ಬದಲಿ ಜಾಗ ಲಭ್ಯತೆ ಕುರಿತಂತೆ ಜಿಲ್ಲಾಧಿಕಾರಿ ಜೊತೆ ಸಮಾಲೋಚಿಸಬೇಕು ಎಂದು ನಿರ್ದೇಶಿಸಿತು..

High Court
ಹೈಕೋರ್ಟ್

ಬೆಂಗಳೂರು :ಮಡಿಕೇರಿಯ ಕರ್ಣಂಗೇರಿ ಗ್ರಾಮದ ಸ್ಟೋನ್ ಹಿನ್ ಪ್ರದೇಶದಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯುವುದನ್ನು ತಡೆಗಟ್ಟಲು ಕ್ರಮಕೈಗೊಳ್ಳುವಂತೆ ನಗರಸಭೆಗೆ ನಿರ್ದೇಶಿಸಿರುವ ಹೈಕೋರ್ಟ್, ಒಂದು ವೇಳೆ ಕ್ರಮ ಜರುಗಿಸದಿದ್ರೆ ಈ ಸಂಬಂಧ ಆದೇಶ ಹೊರಡಿಸುವುದಾಗಿ ಎಚ್ಚರಿಸಿದೆ.

ಮಡಿಕೇರಿ ನಗರ ಸಮೀಪದ ಐತಿಹಾಸಿಕ ಪ್ರದೇಶ ಸ್ಟೋನ್‌ಹಿಲ್ ಗುಡ್ಡದ ಮೇಲೆ ನಗರಸಭೆ ಅನಧಿಕೃತ ಮತ್ತು ಅವೈಜ್ಞಾನಿಕ ತ್ಯಾಜ್ಯ ಸುರಿಯುತ್ತಿರುವ ಕ್ರಮ ಪ್ರಶ್ನಿಸಿ ಎಸ್‌ಆರ್‌ವಿಕೆ ಹೆಸರಿನ ಸ್ಥಳೀಯ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಸ್ಟೋನ್‌ಹಿಲ್ ಮೇಲೆ ಅವೈಜ್ಞಾನಿಕವಾಗಿ ಕಸ ಸುರಿಯುತ್ತಿದ್ದು, ಕೂಡಲೇ ಅದನ್ನು ನಿಲ್ಲಿಸಬೇಕಿದೆ. ಆ ಸಂಬಂಧ ಪರಿಸರ ಸಂರಕ್ಷಣೆ ಕಾಯ್ದೆ ಸೆಕ್ಷನ್ 15ರ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ. ಆರೋಪಿತರ ವಿರುದ್ಧ ಸದ್ಯದಲ್ಲೇ ಕ್ರಮ ಜರುಗಿಸಲಿದ್ದೇವೆ ಎಂದರು.

ನಗರಸಭೆ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ಅನಧಿಕೃತವಾಗಿ ತ್ಯಾಜ್ಯ ಸುರಿಯುತ್ತಿರುವುದನ್ನು ನಿಲ್ಲಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಪರ ವಕೀಲರು, ಸದ್ಯಕ್ಕೆ ತ್ಯಾಜ್ಯ ವಿಲೇವಾರಿಗೆ ಯಾವುದೇ ಬದಲಿ ಜಾಗವಿಲ್ಲ. ಹೀಗಾಗಿ, ಈ ಬಗ್ಗೆ ಆಯುಕ್ತರಿಂದ ಮಾಹಿತಿ ಪಡೆದು ತಿಳಿಸಲಾಗುವುದು ಎಂದರು.

ಅರ್ಜಿದಾರರ ಪರ ವಕೀಲೆ ಅನು ಚೆಂಗಪ್ಪ ವಾದಿಸಿ, ತ್ಯಾಜ್ಯ ವಿಲೇವಾರಿ ಮಾಡಲು ಸಾಕಷ್ಟು ಜಾಗವಿದೆ. ಈ ಹಿಂದೆ ಕೆಲ ಸರ್ವೆ ನಂಬರ್​​ಗಳಲ್ಲಿ ಬದಲಿ ಸ್ಥಳಗಳನ್ನು ಗುರುತಿಸಲಾಗಿತ್ತು. ಆದರೆ, ನಗರಸಭೆ ಈ ಬಗ್ಗೆ ಮುಂದಾಗಿಲ್ಲ ಎಂದರು.

ವಾದ ಪ್ರತಿವಾದ ಆಲಿಸಿದ ಪೀಠ, ಸ್ಟೋನ್‌ಹಿಲ್ ಮೇಲೆ ಅಕ್ರಮವಾಗಿ ಕಸ ಸುರಿಯುವುದನ್ನು ನಿಲ್ಲಿಸುವುದಾಗಿ ಒಂದು ವಾರದೊಳಗೆ ನಗರಸಭೆ ಪ್ರಮಾಣಪತ್ರ ಸಲ್ಲಿಸಬೇಕು. ಹಾಗೆಯೇ, ತ್ಯಾಜ್ಯ ವಿಲೇವಾರಿಗೆ ಬದಲಿ ಜಾಗ ಲಭ್ಯತೆ ಕುರಿತಂತೆ ಜಿಲ್ಲಾಧಿಕಾರಿ ಜೊತೆ ಸಮಾಲೋಚಿಸಬೇಕು ಎಂದು ನಿರ್ದೇಶಿಸಿತು. ಇಲ್ಲದಿದ್ದಲ್ಲಿ ಈ ಸಂಬಂಧ ನ್ಯಾಯಾಲಯವೇ ಸೂಕ್ತ ಆದೇಶ ಹೊರಡಿಸಲಿದೆ ಎಂದು ತಿಳಿಸಿ, ವಿಚಾರಣೆಯನ್ನು ಅಕ್ಬೋಬರ್ 1ಕ್ಕೆ ಮುಂದೂಡಿತು.

ABOUT THE AUTHOR

...view details