ಬೆಂಗಳೂರು: ''ಮುಂಬರಲಿರುವ ಲೋಕಸಭಾ ಚುನಾವಣಾ ಸಿದ್ಧತಾ ಕಾರ್ಯಗಳ ಕುರಿತು ಕೇಂದ್ರದ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದು, ಚುನಾವಣೆಗೆ ರೋಡ್ ಮ್ಯಾಪ್ ಸಿದ್ಧವಾಗಿದೆ. ಆದಷ್ಟು ಬೇಗ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಸ್ಥಾನಗಳ ಹಂಚಿಕೆ ಕಾರ್ಯ ಮುಗಿಯಲಿದೆ'' ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
ಜಾಲಹಳ್ಳಿ ನಿವಾಸದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ''ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಭೇಟಿಗೆ ಸೂಚನೆ ನೀಡಿದ್ದರು. ಅದರಂತೆ ಎರಡು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡು ನಡ್ಡಾ ಸೇರಿದಂತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದೆ. ಪ್ರತಿಪಕ್ಷ ನಾಯಕನಾಗಿ ಹೇಗೆ ಕಾರ್ಯನಿರ್ವಹಿಸಬೇಕು ಅಂತ ಸೂಚನೆ ನೀಡಿದರು. ಜೊತೆಗೆ ಲೋಕಸಭಾ ಚುನಾವಣೆ ಗೆಲ್ಲುವ ವಿಚಾರ ಚರ್ಚೆಯಾಗಿದೆ. ಕೇಂದ್ರದ ಯೋಜನೆಗಳನ್ನು ಮನೆ ಬಾಗಿಲಿಗೆ ಮುಟ್ಟಿಸುವ ಬಗ್ಗೆ ಚರ್ಚೆಯಾಯಿತು'' ಎಂದರು.
''ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಕುರಿತು ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಒಂದಷ್ಟು ಚರ್ಚೆಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ನಾನೂ ಕೆಲವು ಮನವಿ ಮಾಡಿದ್ದೇನೆ. ವರಿಷ್ಠರು ಸಹ ಮೈತ್ರಿ ಬಗ್ಗೆ ಕೆಲವು ತೀರ್ಮಾನಗಳನ್ನು ಮಾಡಿದ್ದಾರೆ. ಕೇಂದ್ರದ ನಾಯಕರು ಜೆಡಿಎಸ್ ಜೊತೆ ಸೀಟು ಹಂಚಿಕೆ ಕುರಿತು ಶೀಘ್ರವೇ ನಿರ್ಧಾರ ಮಾಡಲಿದ್ದಾರೆ. ಲೋಕಸಭಾ ಚುನಾವಣೆಗೆ ರೋಡ್ ಮ್ಯಾಪ್ ಮಾಡಿದ್ದಾರೆ. ಹೇಗೆ ಕೆಲಸ ಮಾಡಬೇಕು ಅಂತ ಸೂಚನೆ ನೀಡಿದ್ದಾರೆ. ಕ್ಲಸ್ಟರ್‌ಗೆ ನಾಯಕರ ನೇಮಕ ಮಾಡಲಿದ್ದಾರೆ. ಬೂತ್ ಮಟ್ಟದಲ್ಲಿ ಕೆಲಸ ಮಾಡಲು ಸೂಚಿಸಿದ್ದಾರೆ. ಲೋಕಸಭೆ ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಗಳ ನೇಮಕ ಆಗಲಿದೆ ವಿಧಾನಸಭೆ ಕ್ಷೇತ್ರಗಳಿಗೂ ಉಸ್ತುವಾರಿಗಳ ನೇಮಕ ಆಗಲಿದೆ'' ಎಂದು ಮಾಹಿತಿ ನೀಡಿದರು.
''ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನೂ ಭೇಟಿ ಮಾಡಿದೆ. ರಾಜ್ಯ ರಾಜಕಾರಣ ಬಗ್ಗೆ ಚರ್ಚೆಯಾಗಿದೆ. ಕೇಂದ್ರದ ಮಂತ್ರಿಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಕರ್ನಾಟಕದ ಸಮಸ್ಯೆ, ಅನುದಾನಗಳ ಬಗ್ಗೆ ಮಾತಾಡಿದ್ದೇನೆ, ಪಕ್ಷದ ಹಿತದೃಷ್ಟಿಯಿಂದ ಹಿರಿಯ ನಾಯಕರ ಜೊತೆ ಚರ್ಚೆ ಮಾಡಿ ಬಂದಿದ್ದೇನೆ'' ಎಂದರು.
ಸಿಎಂ ಆಗಿ ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಂದುವರಿಯೋ ಬಗ್ಗೆ ಅವರ ಪುತ್ರ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ''ಜನ ದೇಶದ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರೆಯುವ ವಿಚಾರ ಜನಕ್ಕೆ ಬೇಕಾಗಿಲ್ಲ, ಅದು ಅವರ ಪಕ್ಷದ ಆಂತರಿಕ ವಿಚಾರವಾಗಿದೆ. ಲೋಕಸಭೆ ಚುನಾವಣೆ ಗೆಲ್ಲಿಸೋದು ಜನ. ಆದರೆ, ಜನ ಮತ್ತೆ ಪ್ರಧಾನಿಯಾಗಿ ಮೋದಿಯವರನ್ನು ಗೆಲ್ಲಿಸುವ ಯೋಚನೆಯಲ್ಲಿದ್ದಾರೆ. ಯತೀಂದ್ರ ಪಕ್ಷದ ವಿಚಾರಗಳನ್ನು ನಿರ್ಣಯ ಮಾಡುವ ಸ್ಥಾನದಲ್ಲಿ ಇಲ್ಲ. ಈ ಹೇಳಿಕೆ ಮೂಲಕ ತಂದೆ ಮೇಲೆ ಯತೀಂದ್ರ ಕುರುಡು ಪ್ರೇಮ ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಒಡಕಿದೆ, ಡಿಕೆ ಶಿವಕುಮಾರ್ ಗೆ ಒಂದು ಬಣ ಜೈ ಅನ್ನುತ್ತಿದೆ, ಸಿದ್ದರಾಮಯ್ಯ ಪರ ಇನ್ನೊಂದು ಬಣ ಇದೆ. ಅದಕ್ಕಾಗಿಯೇ ಇಂತಹ ಹೇಳಿಕೆ ಬಂದಿದೆ'' ಎಂದರು.
ಸರ್ಕಾರದ ವಿರುದ್ಧ ಗರಂ:ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಶೋಕ್, ''ಬರಗಾಲ ಇದ್ದೂ ಪರಿಹಾರ ಹಣ ಬಿಡುಗಡೆ ಮಾಡಿಲ್ಲ ನಮ್ಮದು ಪಾಪರ್ ಸರ್ಕಾರ ಅಂತ ಸಿದ್ದರಾಮಯ್ಯ ಘೋಷಣೆ ಮಾಡಲಿ. ಸರ್ಕಾರದ ಖಜಾನೆ ಖಾಲಿ ಆಗಿದೆ ಸರ್ಕಾರ ದಿವಾಳಿ ಆಗಿದೆ. ಅಭಿವೃದ್ಧಿ ಕುಂಠಿತ ಆಗಿದೆ.ಹೀಗೇ ಮುಂದುವರೆದರೆ ಜನ ಕಷ್ಟ ಪಡುವ ಕಾಲ ಬರಲಿದೆ'' ಎಂದ ಅವರು, ''ಕೇಂದ್ರದ ಬಳಿ ಬರ ಪರಿಹಾರ ಕೇಳುವ ವಿಚಾರದಲ್ಲಿ ಈಗಾಗಲೇ ನಾವು ಕೇಂದ್ರಕ್ಕೆ ವಿನಂತಿ ಮಾಡಿದ್ದೇವೆ. ನಮ್ಮ ರಾಜ್ಯದಲ್ಲಿ ಮಾತ್ರ ಅಲ್ಲ, ಬೇರೆ ರಾಜ್ಯದಲ್ಲಿ ಕೂಡ ಬರ ಇದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಸರ್ಕಾರ ಪರಿಹಾರ ಕೊಟ್ಟಿದೆ. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಾವು ಕೇಂದ್ರವನ್ನು ಕಾಯದೆ ಪರಿಹಾರ ಕೊಟ್ಟಿದ್ದೆವು. ಹಿಂದೆ ಮನಮೋಹನ್ ಸಿಂಗ್ ಇದ್ದಾಗ ಪರಿಹಾರ ಕೊಟ್ಟಿರಲಿಲ್ಲ. ಆಗ ಇದೇ ಕಾಂಗ್ರೆಸ್ ಸರ್ಕಾರ ಇತ್ತು. ಯಾಕೆ ಕೇಳಲಿಲ್ಲ? ಈಗ ಕೇಂದ್ರದಲ್ಲಿ ಬೇರೆ ಸರ್ಕಾರ ಇದೆ ಅಂತ ಹೀಗೆ ಹೇಳಿದ್ದಾರೆ. ನನ್ನ ಬಳಿ ದಾಖಲೆ ಇದೆ ಬೇಕಾದರೆ ಕೊಡುತ್ತೇನೆ. ಹಿಂದಿನ ಮನಮೋಹನ್ ಸಿಂಗ್ ಅವರಿಗಿಂತ ಹೆಚ್ಚು ಹಣ ಎನ್.ಡಿ.ಎ ಸರ್ಕಾರ ನೀಡಿದೆ. ಅವರು ಮೂರು ಸಾವಿರ ಕೋಟಿ ಕೊಟ್ಟಿದೆ. ನಮ್ಮ ಸರ್ಕಾರ ಹನ್ನೊಂದು ಸಾವಿರ ಕೋಟಿ ಹಣ ಕೊಟ್ಟಿದೆ'' ಎಂದು ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ನೀಡಿದರು.
ಪ್ರಧಾನಿ ನಿದ್ದೆ ಮಾಡೋ ರೀತಿ ಸಿಎಂ ಫೋಟೋ ಟ್ವೀಟ್ ಮಾಡಿದ್ದಾರೆ. ನಾನು ಚಾಲೆಂಜ್ ಮಾಡುತ್ತೇನೆ. ಮೋದಿ ಅವರು ಮಲಗಿರೋದು ಒಂದು ದಾಖಲೆ ಕೊಡಿ, ಸಿದ್ದರಾಮಯ್ಯ ಅವರು ಮಲಗಿರೋದು ಸಾಕ್ಷಿ ಇದೆ. ಇತರರು ಬಂದು ಎದ್ದೇಳಣ್ಣೋ ಸಿದ್ರಾಮಣ್ಣ ಅಂತ ಎಚ್ಚರಿಸಿದ್ದಾರೆ. ಮೋದಿ ಮಲಗಿರೋದು ಒಂದು ತೋರಿಸಿ ಎಂದು ಕಾಂಗ್ರೆಸ್ ಗೆ ಸವಾಲು ಹಾಕಿದರು. ಮೋದಿ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ. ನೀವು ಐದು ಗಂಟೆ ಕೆಲಸ ಮಾಡಲ್ಲ. ನಿಮಗ ಅಭಿವೃದ್ಧಿ ಮಾಡಲಾಗಿಲ್ಲ. ಅಭಿವೃದ್ಧಿ ಮಾಡೋರನ್ನ ಟೀಕೆಮಾಡ್ತಾರೆ. ಮಲಗಿರೋ ಒಂದು ಫೋಟೋ ನಿಮ್ಮ ಮನೆಯಲ್ಲಿ ಹಾಕಿಕೊಳ್ಳಿ. ನಿದ್ದೆ ರಾಮಯ್ಯ ಅಂತಾನೆ ನಿಮಗೆ ಹೆಸರಿದೆ. ನಿದ್ದೆರಾಮಯ್ಯ ಅಂತ ನಿಮಗೆ ಹೆಸರಿದೆಯೋ ಅಥವಾ ಮೋದಿಗೋ? ನಿದ್ದೆ ಮಾಡೋದಕ್ಕೆ ನೀವೇ ಬ್ರಾಂಡ್ ಅಂಬಾಸಿಡರ್. ಜನ ನಿಮ್ಮನ್ನು ಮುಂದೆ ನಿದ್ರೆಗೆ ಬ್ರಾಂಡ್ ಮಾಡ್ತಾರೆ ನೋಡಿ'' ಎಂದು ಅಶೋಕ್ ಲೇವಡಿ ಮಾಡಿದರು.
ಇದನ್ನೂ ಓದಿ:'ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಸಿದ್ದರಾಮಯ್ಯ 5 ವರ್ಷ ಅಡೆತಡೆ ಇಲ್ಲದೇ ಸಿಎಂ'