ಕರ್ನಾಟಕ

karnataka

ETV Bharat / state

ಅಂಚೆ ಕಾರ್ಡ್, ಪತ್ರಿಕೆಯಲ್ಲಿ ಬಂದ ಮಾಹಿತಿಯನ್ನೇ ಪಿಐಎಲ್ ಆಗಿ ಪರಿಗಣಿಸಲು ಸಂವಿಧಾನದಲ್ಲಿ ಅವಕಾಶವಿದೆ: ನ್ಯಾ. ಕೃಷ್ಣ ಎಸ್ ದೀಕ್ಷಿತ್

ಬೆಂಗಳೂರಲ್ಲಿ ಭಾರತ ಮತ್ತು ಅಮೆರಿಕ ಸಂವಿಧಾನಗಳಲ್ಲಿನ ನ್ಯಾಯಾಂಗ ಸ್ವಾತಂತ್ರ್ಯದ ಬಗ್ಗೆ ಒಂದು ಇಣುಕು ನೋಟ ಸಂವಾದ ಕಾರ್ಯಕ್ರಮದಲ್ಲಿ ಉಭಯ ದೇಶಗಳ ಸಂವಿಧಾನದ ಕುರಿತು ಚರ್ಚೆ ನಡೆಯಿತು.

Etv Bharat
Etv Bharat

By ETV Bharat Karnataka Team

Published : Oct 7, 2023, 7:36 AM IST

ಬೆಂಗಳೂರು:ಸಣ್ಣ ಅಂಚೆ ಕಾರ್ಡ್‌ನಲ್ಲಿ ಬರೆದ ಅಹವಾಲು ಮತ್ತು ಪತ್ರಿಕೆಯಲ್ಲಿ ಪ್ರಕಟವಾದ ಪುಟ್ಟ ಲೇಖನವನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಿ ಶ್ರೀಸಾಮಾನ್ಯರ ದುಃಖಕ್ಕೆ ನೆರವಾಗುವ ಅವಕಾಶವನ್ನು ಭಾರತೀಯ ಸಂವಿಧಾನ ಕಲ್ಪಿಸಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ತಿಳಿಸಿದ್ದಾರೆ.

ವಕೀಲರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಭಾರತ ಮತ್ತು ಅಮೆರಿಕ ಸಂವಿಧಾನಗಳಲ್ಲಿನ ನ್ಯಾಯಾಂಗ ಸ್ವಾತಂತ್ರ್ಯದ ಬಗ್ಗೆ ಒಂದು ಇಣುಕು ನೋಟ ಎಂಬ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತದ ಸಂವಿಧಾನ ಮತ್ತು ನ್ಯಾಯಾಂಗವು ಈ ನೆಲದ ಮೇಲಿನ ಪ್ರತಿಯೊಂದು ಚರಾಚರ ಜೀವಿಗಳ ಬಗ್ಗೆ ಅಂತಃಕರುಣೆ ಹೊಂದಿದೆ. ದಯೆ ಮತ್ತು ಅವುಗಳ ಅಸ್ತಿತ್ವದ ಹಕ್ಕುಗಳ ರಕ್ಷಣೆ ಮಾಡುತ್ತಾ ಮುನ್ನಡೆಯುತ್ತಿದೆ ಎಂದು ವಿವರಿಸಿದರು. ಆದರೆ, ಅಮೆರಿಕದ ಸಂವಿಧಾನ ಮತ್ತು ನ್ಯಾಯಾಂಗವು ಮನುಷ್ಯ ಕೇಂದ್ರಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ, ದಾವೆಯ ಶಿಷ್ಟಾಚಾರಕ್ಕೆ ಒಗ್ಗಿ ಕೆಲಸ ಮಾಡುವ ಪ್ರವೃತ್ತಿ ಹೊಂದಿದೆ ಎಂದರು.

ದೇಶದ ಪರಿವರ್ತನೆಗೆ ಕಾರಣವಾದಂತಹ ತೀರ್ಪುಗಳನ್ನು ಬರೆದ ನ್ಯಾಯಮೂರ್ತಿಗಳು ಅತ್ಯಂತ ಸುರಕ್ಷಿತವಾಗಿ ಬಾಳಿ ಬದುಕುವಂತಹ ಮುಕ್ತ ವಾತಾವರಣ ಭಾರತದಲ್ಲಿದೆ. ಇದನ್ನು ಬೇರೆ ಯಾವ ಬೃಹತ್ ಪ್ರಜಾಪ್ರಭುತ್ವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಭಾರತದ ಸಂವಿಧಾನವು ನಾಗರಿಕ ಹಕ್ಕು, ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತ್ರವಲ್ಲದೇ ಈ ನೆಲದಲ್ಲಿ ಹರಿಯುವ ನದಿ, ಮರ ಗಿಡಗಳನ್ನು ಜೀವಂತ ವ್ಯಕ್ತಿಗೆ ಸಮನಾಗಿ ಪರಿಗಣಿಸಿದೆ. ಈ ಬಗೆಗಿನ ಕಾಳಜಿಯನ್ನು ದೇಶದ ಹಲವು ಹೈಕೋರ್ಟ್‌ಗಳು ತಮ್ಮ ತೀರ್ಪುಗಳಲ್ಲಿ ಉಲ್ಲೇಖಿಸಿವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ತಿಳಿಸಿದರು.

ಅಂಬೇಡ್ಕರ್ ಅವರು ನಮ್ಮ ಸಂವಿಧಾನ ರೂಪಿಸುವ ಮುನ್ನ ಅದರಲ್ಲಿ ಅಡಕಗೊಳಿಸಬಹುದಾದ ಬಹಳಷ್ಟು ಅಂಶಗಳನ್ನು ಅಮೆರಿಕದ ನೆಲದಲ್ಲೇ ಕುಳಿತು ರೂಪಿಸಿದ್ದರು ಎಂಬುದು ಅಮೆರಿಕ ಮತ್ತು ಭಾರತದ ಮಧ್ಯೆ ಇರುವ ಆರೋಗ್ಯಕರ, ಸೌಹಾರ್ದ ಸಂಬಂಧಕ್ಕೆ ಸಾಕ್ಷಿಯಾಗಿದೆ. ಆದಾಗ್ಯೂ, ಭಾರತದಲ್ಲಿರುವ ವರ್ಣರಹಿತ ಮತ್ತು ಜಾತಿರಹಿತ ಸಮಾನತೆ ಬೇರೆಲ್ಲೂ ಕಾಣಸಿಗದು ಎಂದು ಹೇಳಿದರು.

ಇದೇ ವೇಳೆ ಅಮೆರಿಕದ 10 ಜನ ಸುಪ್ರೀಂ ಕೋರ್ಟ್ ಮತ್ತು ಫೆಡರಲ್ ಕೋರ್ಟ್ ನ್ಯಾಯಮೂರ್ತಿಗಳ ಜೊತೆಗೆ ಅಮೆರಿಕ - ಭಾರತ ಸಂವಿಧಾನದ ಕುರಿತು ಚರ್ಚೆ ನಡೆಯಿತು. ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಪ್ರಸಾದ್, ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ನಿಕಟಪೂರ್ವ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ಹಾಜರಿದ್ದರು.

ಇದನ್ನೂ ಓದಿ: ಸಂವಿಧಾನ ನೀಡಿದ ಹಕ್ಕಿನಂತೆ ಪ್ರತಿಯೊಬ್ಬರು ಭೂಮಿಯನ್ನು ಹೊಂದಿದ್ದಾರೆಯೇ?

ABOUT THE AUTHOR

...view details