ಕರ್ನಾಟಕ

karnataka

ಹೋಟೆಲ್​ ಮಾಲೀಕನ ಮಗನ ಅಪಹರಣ: 12 ಗಂಟೆಯಲ್ಲಿ ಬಾಲಕನನ್ನ ಸೇಫ್ ಆಗಿ ಕರೆತಂದ ಬೆಂಗಳೂರು ಪೊಲೀಸರು!

ಹೋಟೆಲ್​ನಲ್ಲಿ ಕೆಲಸ ಮಾಡುವವನಿಂದಲೇ ತನ್ನ ಮಾಲೀಕನ ಮಗನ ಅಪಹರಣಕ್ಕೆ ಸುಪಾರಿ. ಪ್ರಕರಣ ದಾಖಲಾದ 12 ಗಂಟೆಯೊಳಗೆ ಬಾಲಕನ ರಕ್ಷಿಸುವ ಮೂಲಕ ಬೆಂಗಳೂರಿನ ಪೊಲೀಸರು ಪ್ರಕರಣ ಭೇದಿಸಿದ್ದಾರೆ.

By

Published : Dec 1, 2019, 10:11 AM IST

Published : Dec 1, 2019, 10:11 AM IST

The boy's kidnapping team arrested in bangalore
ಅಪಹರಿಸಿದ್ದ ಆರೋಪಿಗಳ ಬಂಧನ

ಬೆಂಗಳೂರು: ಬಾಣಸವಾಡಿ ನಗರದ ಕಡಾಯಿ ಹೋಟೆಲ್ ಮಾಲೀಕನ 13 ವರ್ಷದ ಮಗನನ್ನು ಅಪಹರಣ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ.

ದೂರು ದಾಖಲಿಸಿದ 12 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಪೂರ್ವ ವಿಭಾಗದ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಕಡಾಯಿ ಹೋಟೆಲ್ ಮಾಲೀಕನ ಮಗನನ್ನು ಆರೋಪಿಗಳು ಅಪಹರಿಸಿ ನ.30 ರಂದು ಮಧ್ಯಾಹ್ನ ಬಾಲಕನ ತಂದೆಗೆ ಕರೆ ಮಾಡಿ 50 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಡಿಸಿಪಿ ಡಾ.ಶರಣಪ್ಪ

ಬಾಲಕನ ತಂದೆ ತಕ್ಷಣ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರ ಬಳಿ ದೂರು ಸಲ್ಲಿಸಿದ್ರು. ಬಾಣಸವಾಡಿ ಎಸಿಪಿ ರವಿ ಪ್ರಸಾದ್, ಬಾಣಸವಾಡಿ ಇನ್​ಸ್ಪೆಕ್ಟರ್ ಜಯರಾಜ್ ಮತ್ತು ಕೆ.ಜಿ ಹಳ್ಳಿ ಇನ್​ಸ್ಪೆಕ್ಟರ್ ಅಜಯ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳಿಗೆ ಬಲೆ ಬೀಸಿದ್ದರು.

ಆರೋಪಿಗಳು ಹೆಣ್ಣೂರು ಬಳಿಯ ಸಾರಾಯಿಪಾಳ್ಯ ಬಳಿ ಇರುವ ಮಾಹಿತಿ ಆಧರಿಸಿ ಬಾಲಕನ ರಕ್ಷಣೆಗೆ ಮುಂದಾಗಿದ್ದರು.ಕೆ.ಜಿ.ಹಳ್ಳಿ ಇನ್​ಸ್ಪೆಕ್ಟರ್ ಅಜಯ್ ಸಾರತಿ ಶರಣಾಗಲು ಆರೋಪಿಗೆ ಎಚ್ಚರಿಸಿದ್ದರು. ಈ ವೇಳೆ ಬಾಣಸವಾಡಿ ಪೊಲೀಸ್ ಪೇದೆ ನಾಯಕ್ ಎಂಬುವವರ ಮೇಲೆ ಪ್ರಮುಖ ಆರೋಪಿ ಮುಬಾರಕ್ ಚಾಕುವಿನಿಂದ ಹಲ್ಲೆ ನಡೆಸಿದ್ದ. ನಂತರ ಆತ್ಮರಕ್ಷಣೆಗಾಗಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಮುಬಾರಕ್ ಕಾಲಿಗೂ ಗುಂಡು ಹೊಡೆದು, ಬಾಲಕನನ್ನು ರಕ್ಷಿಸಿದ್ದಾರೆ. ಜೊತೆಗೆ ಆರೋಪಿ ಮುಬಾರಕ್ ಜೊತೆಗಿದ್ದ ಮೊಯಿನ್ ಹಾಗೂ ಅಯಾಜ್ ಅನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳು ಪೇದೆ ಹಾಗೂ ಆರೋಪಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಕನ ತಂದೆಯ ಹೋಟೆಲ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಅಪಹರಣಕ್ಕೆ ಸುಪಾರಿ ನೀಡಿದ್ದ ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ಪ್ರಮುಖ ಆರೋಪಿ ಮುಬಾರಕ್ ಗುಣಮುಖನಾದ ನಂತರ ತನಿಖೆ ಚುರುಕುಗೊಳ್ಳಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ABOUT THE AUTHOR

...view details