ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಡಯಾಲಿಸಿಸ್ ಘಟಕಗಳ ಸಿಬ್ಬಂದಿ ಇಂದು ತಮ್ಮ ಬಾಕಿ ವೇತನ ವಿಳಂಬ ಮತ್ತು ಇಎಸ್ ಐ, ಭವಿಷ್ಯನಿಧಿ ಹಣಕ್ಕಾಗಿ ಮುಷ್ಕರ ನಡೆಸಲಿದ್ದಾರೆ. ಇದರಿಂದ ಸರಕಾರಿ ಆಸ್ಪತ್ರೆಗಳಲ್ಲಿರುವ ಡಯಾಲಿಸಿಸ್ ಘಟಕಗಳ ಸೇವೆಯಲ್ಲಿ ಇಂದು ವ್ಯತ್ಯಯ ಉಂಟಾಗಲಿದೆ.
ಬಿಆರ್ಎಸ್ ಸಂಸ್ಥೆ, ಸರ್ಕಾರಿ ಆಸ್ಪತ್ರೆಗಳ ಡಯಾಲಿಸಿಸ್ ಘಟಕಗಳ ನಿರ್ವಹಣೆಯ ಗುತ್ತಿಗೆ ಪಡೆದಿದ್ದ ಬಿಆರ್ಎಸ್ ಸಂಸ್ಥೆ, ಘಟಕದಲ್ಲಿ ಕೆಲಸಮಾಡುತ್ತಿದ್ದಂತಹ ಸಿಬ್ಬಂದಿಗೆ ವೇತನ ನೀಡದೇ ಬಾಕಿ ಉಳಿಸಿಕೊಂಡಿದೆ. ಅಲ್ಲದೇ ಇಎಸ್ಐ, ಭವಿಷ್ಯನಿಧಿ ಹಣ ಪಾವತಿ ಮಾಡಿಲ್ಲ ಎಂದು ಆರೋಪಿಸಿ ಸಿಬ್ಬಂದಿಗಳು ರಾಜ್ಯದ್ಯಂತ ಮುಷ್ಕರ ನಡೆಸಲು ಮುಂದಾಗಿದ್ಧಾರೆ.
ಅಲ್ಲದೇ ತಮ್ಮ ಸಮಸ್ಯೆಯ ಕುರಿತು ರಾಜ್ಯ ಸರ್ಕಾರ ಮದ್ಯ ಪ್ರವೇಶಿಸಬೇಕು ಮತ್ತು ಬಾಕಿ ವೇತನ ಹಾಗೂ ಇಎಸ್ಐ, ಭವಿಷ್ಯನಿಧಿ ಹಣ ಪಾವತಿಗೆ ಸೂಕ್ತ ಕ್ರಮ ಕೈತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಈ ಮುಷ್ಕರ ನಡೆಸಲಾಗುತ್ತಿದೆ. ಈ ಹಿಂದೆ ಗುತ್ತಿಗೆ ಪಡೆದಿದ್ದಂತಹ ಬಿಆರ್ ಎಸ್ ಸಂಸ್ಥೆ, ಸಮರ್ಪಕವಾಗಿ ಡಯಾಲಿಸಿಸ್ ಘಟಕಗಳನ್ನು ನಡೆಸುತ್ತಿಲ್ಲವೆಂದು ಆರೋಗ್ಯ ಇಲಾಖೆ ಗುತ್ತಿಗೆಯ ಒಪ್ಪಂದವನ್ನು ಹಿಂಪಡೆದಿತ್ತು. ಬಳಿಕ ಸಂಜೀವಿನಿ ಸಂಸ್ಥೆಗೆ ಹೊರ ಗುತ್ತಿಗೆಯನ್ನು ನೀಡಲಾಗಿತ್ತು. ಆದರೆ ಈ ಸಂಸ್ಥೆಯು ಸಹ ಸಮರ್ಪಕವಾದ ನಿರ್ವಹಣೆ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 165 ಡಯಾಲಿಸಿಸ್ ಘಟಕಗಳು ಸರ್ಕಾರಿ ಆಸ್ಪತ್ರೆಗಳಲ್ಲಿದ್ದು, 900 ಸಿಬ್ಬಂದಿ ಇವುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ:ಕಡಬ ಶಾಲಾ ಮಕ್ಕಳಿಗೆ ಚಿಕನ್ ಫಾಕ್ಸ್... ಶಾಲೆಗೆ ಒಂದು ವಾರ ರಜೆ ಘೋಷಣೆ