ಬೆಂಗಳೂರು: ಕೊರೊನಾ ಸೋಂಕು ತಗುಲಿರುವ ನಗರದ ಕಂಟೈನ್ಮೆಂಟ್ ಹಾಗೂ ಸೀಲ್ ಡೌನ್ ಪ್ರದೇಶಗಳಲ್ಲಿ ಅವಶ್ಯಕತೆ ಇರುವವರಿಗೆ ಆಹಾರ ಮತ್ತು ಇತರೆ ಜೀವನಾವಶ್ಯಕ ವಸ್ತುಗಳನ್ನು ಪೂರೈಸುವುದು ಬಿಬಿಎಂಪಿ ಕರ್ತವ್ಯ. ಇದನ್ನು ಪಾಲಿಸದಿದ್ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೈಕೋರ್ಟ್ ಪಾಲಿಕೆಗೆ ಎಚ್ಚರಿಸಿದೆ.
ಆಹಾರ ಪೂರೈಸದಿದ್ದರೆ ಕಠಿಣ ಕ್ರಮ: ಬಿಬಿಎಂಪಿಗೆ ಹೈಕೋರ್ಟ್ ಎಚ್ಚರಿಕೆ - ಬಿಬಿಎಂಪಿಗೆ ಹೈಕೋರ್ಟ್
ಕೊರೊನಾ ಮಹಾಮಾರಿಗೆ ಸಿಲುಕಿ ಆಹಾರದ ಕೊರತೆಯಿಂದಾಗಿ ಬಳಲುತ್ತಿರುವ ಜನರಿಗೆ ಹಾಗೂ ಆಯಾ ಏರಿಯಾಗಳಿಗೆ ಆಹಾರ ಪೂರೈಸುವುದು ಬಿಬಿಎಂಪಿಯ ಕರ್ತವ್ಯ. ಒಂದೊಮ್ಮೆ ಬಿಬಿಎಂಪಿಯಿಂದ ಆಹಾರ ಪೂರೈಸಲು ಸಾಧ್ಯವಾಗದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಕೊರೊನಾ ನಿಯಂತ್ರಣದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲಗಳ ಕುರಿತು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ, ಪಾಲಿಕೆಗೆ ಈ ಎಚ್ಚರಿಕೆ ನೀಡಿದೆ. ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ಪಾಲಿಕೆ ಆಯುಕ್ತರು ಸಿದ್ಧಪಡಿದ್ದ ಪ್ರಮಾಣಪತ್ರ ಸಲ್ಲಿಸಿ, ನಿರ್ಬಂಧಿತ ವಲಯಗಳಲ್ಲಿರುವ ಜನರಿಗೆ ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆ ಇಲ್ಲ. ಈ ಪ್ರದೇಶಗಳಲ್ಲಿ ಸಂಪೂರ್ಣ ಸೀಲ್ ಡೌನ್ ಮಾಡಿಲ್ಲ. ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶವಿದೆ ಎಂದು ತಿಳಿಸಿದರು.
ಇದಕ್ಕೆ ಅರ್ಜಿದಾರರ ಪರ ವಕೀಲರು ಅಕ್ಷೇಪಿಸಿ, ತಮ್ಮ ಅರ್ಜಿದಾರರು ನಿರ್ಬಂಧಿತ ವಲಯದಲ್ಲಿ ವಾಸವಿದ್ದಾರೆ. ಬಿಬಿಎಂಪಿ ಹೇಳುವಂತೆ ದಿನಸಿ ಪದಾರ್ಥಗಳು ದೊರಕುತ್ತಿಲ್ಲ ಎಂದು ಸಮಸ್ಯೆಗಳ ಕುರಿತು ವಿವರಿಸಿದರು. ಆಹಾರ ಪೂರೈಕೆ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ಪಾಲಿಕೆ ಆಯುಕ್ತರ ಪ್ರಮಾಣಪತ್ರದಲ್ಲಿರುವ ಸಮಜಾಯಿಷಿ ಉಡಾಫೆಯಿಂದ ಕೂಡಿದೆ. ನಿರ್ಬಂಧಿತ ವಲಯಗಳಲ್ಲಿ ಇರುವವರಿಗೆ ಆಹಾರ ಪೂರೈಸುವುದು ಪಾಲಿಕೆ ಜವಾಬ್ದಾರಿ. ತಪ್ಪಿದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿತು.