ಕರ್ನಾಟಕ

karnataka

ETV Bharat / state

ರಾಜ್ಯಾದ್ಯಂತ ವಿವಿಧ ಅಧಿಕಾರಿಗಳಿಗೆ ಲೋಕಾ ಶಾಕ್​: ಬೆಂಗಳೂರು ಸೇರಿ 90 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ತೀವ್ರ ಶೋಧ ಕಾರ್ಯ..

ರಾಜ್ಯಾದ್ಯಂತ ಬೆಳ್ಳಂ ಬೆಳಗ್ಗೆ ವಿವಿಧೆಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ 90 ಕಡೆಗಳಲ್ಲಿ ಲೋಕಾ ಅಧಿಕಾರಿಗಳಿಂದ ಕಡತಗಳ ಶೋಧ ಕಾರ್ಯ ಕೈಗೊಂಡಿದ್ದಾರೆ.

Search by Lokayukta officials
ರಾಜ್ಯಾದ್ಯಂತ ವಿವಿಧ ಅಧಿಕಾರಿಗಳಿಗೆ ಲೋಕಾ ಶಾಕ್

By ETV Bharat Karnataka Team

Published : Oct 30, 2023, 10:56 AM IST

Updated : Oct 30, 2023, 12:07 PM IST

ಬೆಂಗಳೂರು:ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇಂದು (ಸೋಮವಾರ) ಬೆಳ್ಳಂ ಬೆಳಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಬರೋಬ್ಬರಿ 90 ಕಡೆಗಳಲ್ಲಿ ವಿವಿಧ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು, ಚಿತ್ರದುರ್ಗ, ಕಲಬುರಗಿ, ರಾಯಚೂರು, ಹಾಸನ, ಬೀದರ್, ದೇವದುರ್ಗ ಸೇರಿದಂತೆ ಹಲವು ಜಿಲ್ಲೆಗಳ ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಆದಾಯಕ್ಕೂ ಮೀರಿ ಅಧಿಕ ಗಳಿಕೆ, ಅಕ್ರಮ ಆಸ್ತಿ ಸಂಗ್ರಹಣೆ ಆರೋಪದಡಿ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಾಕಾಲಕ್ಕೆ ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ.

ಬೆಂಗಳೂರಿನ 11 ಕಡೆ ಲೋಕಾ ದಾಳಿ: ಬೆಂಗಳೂರಿನ 11 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಬಿಬಿಎಂಪಿ ಹೆಗ್ಗನಹಳ್ಳಿ ವಾರ್ಡ್ ನ ಆರ್.ಆರ್. ನಗರ ವಲಯಾಧಿಕಾರಿಗೆ ಸೇರಿದ ಕೆ.ಆರ್‌.ಪುರದಲ್ಲಿನ ಮನೆ ಸೇರಿದಂತೆ ಮೂರು ಕಡೆ ದಾಳಿ ಮಾಡಿ, ಶೋಧ ನಡೆಸುತ್ತಿದ್ದಾರೆ. ಈ ಹಿಂದೆ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಇವರು ಲೋಕಾಯುಕ್ತ ಟ್ರ್ಯಾಪ್​ಗೆ ಒಳಗಾಗಿದ್ದರು. ಅದರ ಮುಂದುವರಿದ ಭಾಗವಾಗಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ಮಾಡಿ ಶೋಧ ಕಾರ್ಯ ಮುಂದುವರಿಸಿದೆ.

ಅಲ್ಲದೇ, ಕೈಗಾರಿಕಾ ಮತ್ತು ಸುರಕ್ಷತಾ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಮನೆ ಮೇಲೆಯೂ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಸದ್ಯ ದಾವಣಗೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯ ಬೆಂಗಳೂರಿನ ಉಪಕಾರ್ ಲೇಔಟ್, ಆಧ್ರಹಳ್ಳಿ ಹಾಗೂ ಚಾಮರಾಜನಗರದ ಕೊಳ್ಳೆಗಾಲದಲ್ಲಿರುವ ಮನೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಪರಿಶೀಲಿಸುತ್ತಿದ್ದಾರೆ.

ರಾಮನಗರದಲ್ಲಿ ಲೋಕಾಯುಕ್ತ ದಾಳಿ: ಚನ್ನಪಟ್ಟಣದಲ್ಲಿ ಲೋಕಾ‌ಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಆರ್​ಡಿಎಲ್ ಇಂಜಿನಿಯರ್ ಅವರ ಸಂಬಂಧಿಕರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿ ಕೆಆರ್‌ಡಿಎಲ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಅಧಿಕಾರಿಯ ಸಂಬಂಧಿಕರ ಮನೆ ಮೇಲೆ ಲೋಕಾ ದಾಳಿ ಮಾಡಲಾಗಿದ್ದು, ಚನ್ನಪಟ್ಟಣ ನಗರದ ವಿವೇಕಾನಂದ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆದಿದೆ.

ಇನ್ಸ್​​​ಪೆಕ್ಟರ್​ ಕೃಷ್ಣಯ್ಯ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿಯಾಗಿದ್ದು, ಬೆಳಗ್ಗೆ 8 ಗಂಟೆಯಿಂದ ಅಧಿಕಾರಿಗಳ ತಂಡ ಶೋಧ ನಡೆಸುತ್ತಿದ್ದಾರೆ. ಕೆಆರ್​ಡಿಎಲ್ ಇಂಜಿನಿಯರ್ ಮನೆಯಲ್ಲಿ‌ ಲೆಕ್ಕಪತ್ರ, ದಾಖಲೆ ಪರಿಶೀಲನೆ‌ ನಡೆಸುತ್ತಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಅಧಿಕಾರಿ ವಾಸವಾಗಿದ್ದಾರೆ. ಈ ಅಧಿಕಾರಿ ಮೂಲತಃ ಮದ್ದೂರು ತಾಲೂಕಿನ‌ ಬೆಳ್ಳೂರು ಗ್ರಾಮದ ನಿವಾಸಿಯಾಗಿದ್ದಾರೆ.

ಕೊಳ್ಳೇಗಾಲದಲ್ಲೂ ಲೋಕಾಯುಕ್ತ ದಾಳಿ: ಬೆಂಗಳೂರಿನ ಕಾರ್ಮಿಕ ಇಲಾಖೆ ಉಪನಿರ್ದೇಶಕರಿಗೆ ಸೇರಿದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಫಾರಂ ಹೌಸ್, ಅಧಿಕಾರಿ ಸಂಬಂಧಿಕರ ಮನೆ ಸೇರಿದಂತೆ 9 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಕೊಳ್ಳೇಗಾಲದ ಉಪ್ಪಾರ ಮೋಳೆಯಲ್ಲಿರುವ ಫಾರಂ ಹೌಸ್, ಕೊಳ್ಳೇಗಾಲದ ಮನೆ ಹಾಗೂ ಸಂಬಂಧಿಕರ ಮನೆಯಲ್ಲಿರುವ ಕಡತಗಳು, ಆಸ್ತಿಪತ್ರಗಳನ್ನು ಹುಡುಕಾಡುತ್ತಿದ್ದು, ಎರಡು ಕಾರಿನಲ್ಲಿ ಲೋಕಾಯುಕ್ತ ಸಿಬ್ಬಂದಿ ಬಂದಿದ್ದು, ಆರಕ್ಕೂ ಹೆಚ್ಚು ಸಿಬ್ಬಂದಿಯಿಂದ ದಾಖಲೆಗಳ‌ ಪರಿಶೀಲನೆ ನಡೆದಿದೆ.

ತುಮಕೂರಿನಲ್ಲಿ ಲೋಕಾ ದಾಳಿ: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಸಹಾಯಕ ಎಂಜಿನಿಯರ್​ ಮನೆ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಡಿವೈಎಸ್​ಪಿ ಮಂಜುನಾಥ್ ಹಾಗೂ ಹರೀಶ್ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಕಚೇರಿ‌, ಮನೆ ಹಾಗೂ ಪಾರ್ಮಹೌಸ್ ಮೇಲೂ ದಾಳಿ ಮಾಡಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮಂಡ್ಯದಲ್ಲೂ ಲೋಕಾ ಬಿಸಿ: ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಮಂಡ್ಯ ಜಿಲ್ಲೆಯ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಮದ್ದೂರು ತಾಲೂಕಿನ ತೈಲೂರು ಗ್ರಾಮದಲ್ಲೂ ಕೂಡ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನ ಕೆಐಎಡಿಬಿ ಇಂಜಿನಿಯರ್ ಅವರ ಮನೆ ಹಾಗೂ ತೋಟದ ಮನೆಗಳಿಗೆ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿ ಪರಿಶೀಲಿಸುತ್ತಿದ್ದಾರೆ. ಮಳವಳ್ಳಿ ತಾಲೂಕಿನ ನಂಜೇಗೌಡನದೊಡ್ಡಿಯ ಕೊಳಚೆ ನಿರ್ಮೂಲನಾ ಮಂಡಳಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ದಾವಣಗೆರೆಯಲ್ಲಿ ಬಾಯ್ಲರ್ಸ್​ಗಳ ಉಪ ನಿರ್ದೇಶಕ ಕಚೇರಿ ಮೇಲೆ ದಾಳಿ:ಲೋಕಾಯುಕ್ತ ಅಧಿಕಾರಿಗಳು ದಾವಣಗೆರೆಯ ಬಾಯ್ಲರ್ಸ್​ಗಳ ಉಪನಿರ್ದೇಶಕ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಇಲ್ಲಿನ ಪಿಬಿ ರಸ್ತೆಯಲ್ಲಿರುವ ಬಾಯ್ಲರ್ಸ್​ಗಳ ಉಪ ನಿರ್ದೇಶಕರ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡಿದರು. ಬೆಂಗಳೂರಿನಿಂದ ಆಗಮಿಸಿದ ಡಿವೈಎಸ್ಪಿ ರಾಮಕೃಷ್ಣ ನೇತೃತ್ವದ 7 ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಚಿತ್ರದುರ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ:ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದ ಅಧಿಕಾರಿಗಳ ತಂಡವು ಅರಣ್ಯ ಇಲಾಖೆ ಎಸಿಎಫ್ ಮನೆ ಮೇಲೆ ದಾಳಿ ನಡೆಸಿದೆ. ಹಿರಿಯೂರು ಪಟ್ಟಣದ ಚಂದ್ರಾ ಲೇಔಟ್​ನಲ್ಲಿರುವ ಮನೆ ಹಾಗೂ ತವಂದಿ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಲಾಗುತ್ತಿದೆ. ಇನ್ನೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಅವರ ಹಿರಿಯೂರು ಪಟ್ಟಣದ ಕುವೆಂಪು ನಗರದ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಎಸಿಎಫ್ ಮನೆಯಲ್ಲಿ ಹಾಗೂ ಚಿತ್ರದುರ್ಗದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಮನೆಯಲ್ಲಿ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ಪತ್ತೆಯಾಗಿದೆ.

ಇದನ್ನೂ ಓದಿ:ಮಾಜಿ ಮುಖ್ಯಮಂತ್ರಿಗಳು, ಮಂತ್ರಿಗಳ ಮಕ್ಕಳಿಗೆ ಅಧಿಕಾರ ಕೊಟ್ಟರೆ ನಾವೇನು ಮಾಡಬೇಕು : ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶ್ನೆ

Last Updated : Oct 30, 2023, 12:07 PM IST

ABOUT THE AUTHOR

...view details