ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಒಪ್ಪಲಿ ಬಿಡಲಿ, ರಾಜ್ಯದಲ್ಲಿ ಲವ್ ಜಿಹಾದ್ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಘೋಷಣೆ ಮಾಡಿದ್ದಾರೆ.
ಹೊಸಕೋಟೆಯಲ್ಲಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮಕ್ಕೂ ಮೊದಲು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷರು, ಲವ್ ಜಿಹಾದ್, ಗೋ ಹತ್ಯೆ ನಿಷೇಧ ಕಾಯ್ದೆಯ ಕುರಿತಂತೆ ಪುನರ್ ಉಚ್ಚರಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಒಪ್ಪಲಿ ಬಿಡಲಿ, ಲವ್ ಜಿಹಾದ್ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗೇ ಆಗುತ್ತದೆ. ಅದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ.
ಯಾವುದೇ ಕಾರಣಕ್ಕೂ ಲವ್ ಜಿಹಾದ್ ಸಹಿಸುವುದಿಲ್ಲ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಂದ ಕ್ರಾಸ್ ಬ್ರೀಡ್ ಎನ್ನುವ ಪದ ಬರಬಾರದಿತ್ತು. ಸಾರ್ವಜನಿಕರು ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ನೀವು ಕ್ರಾಸ್ ಆದವರು ಎಂದು ಹೇಳಬಹುದು ಎಂದು ಕಟೀಲ್ ವ್ಯಂಗ್ಯವಾಡಿದ್ದಾರೆ.
ಬಿಜೆಪಿಗೆ ಸೇರಿದ ಎಲ್ಲಾ ಶಾಸಕರೂ ಸಚಿವರಾಗಲು ಅರ್ಹರು. ಸಿಎಂ ಹಾಗೂ ಬಿಜೆಪಿ ವರಿಷ್ಠರ ಜೊತೆಗೆ ಚರ್ಚಿಸಿ ಸಚಿವ ಸ್ಥಾನ ನೀಡಲಾಗುತ್ತದೆ. ನಮ್ಮಲ್ಲಿ ಮೂಲ ಬಿಜೆಪಿಗರು, ವಲಸಿಗ ಬಿಜೆಪಿಗರು ಎಂಬ ಪ್ರಶ್ನೆಯೇ ಇಲ್ಲ. ನಾಯಕತ್ವ ಬದಲಾವಣೆಯಂತೂ ಇಲ್ಲವೇ ಇಲ್ಲ ಎಂದರು. ಎಲ್ಲಾರಿಗೂ ಒಳ್ಳೆಯ ಸ್ಥಾನ ಮಾನ ಕೊಡಲಾಗುತ್ತದೆ. ಮಂತ್ರಿಮಂಡಲ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.