ಬೆಂಗಳೂರು:ದೇವನಹಳ್ಳಿ ಬಳಿಯ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಿಗೆ ಎರಡು ದಿನಗಳ 'ನವ ಸಂಕಲ್ಪ ಶಿಬಿರ' ಆಯೋಜಿಸಲಾಗಿದೆ. ರಾಜಸ್ಥಾನದ ಉದಯಪುರದಲ್ಲಿ ಇತ್ತೀಚೆಗೆ ಎಐಸಿಸಿ ಆಯೋಜಿಸಿದ್ದ ಚಿಂತನ್ ಶಿಬಿರ ಮಾದರಿಯಲ್ಲೇ ರಾಜ್ಯ ಕಾಂಗ್ರೆಸ್ನಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಆದರೆ, ಶಿಬಿರದಲ್ಲಿ ಪ್ರಮುಖರಾದ ಎಸ್.ಆರ್. ಪಾಟೀಲ್, ಜಮೀರ್ ಅಹಮದ್, ಮುದ್ದಹನುಮೇಗೌಡ, ಬಿ.ಎಲ್ ಶಂಕರ್, ಎಂ.ಆರ್ ಸೀತಾರಾಂ ಗೈರು ಹಾಜರಾಗಿರುವುದು ಕಂಡು ಬಂತು.
ರಾಜ್ಯಸಭೆ ಇಲ್ಲವೇ ಪರಿಷತ್ ಟಿಕೆಟ್ ಕೂಡ ಎರಡನೇ ಬಾರಿ ಕೈತಪ್ಪಿದ್ದಕ್ಕೆ ಮುನಿಸಿಕೊಂಡಿರುವ ಎಸ್.ಆರ್ ಪಾಟೀಲ್ ಇಂದಿನ ಸಭೆಗೆ ಆಗಮಿಸಲಿಲ್ಲ. ಪಕ್ಷದ ಬೆಳವಣಿಗೆಗಳ ಬಗ್ಗೆ ಕೊಂಚ ಅಸಮಾಧಾನ ಹೊಂದಿರುವ ಜಮೀರ್ ಅಹಮದ್, ಪರಿಷತ್ ಟಿಕೆಟ್ ಸಿಗದಿದ್ದಕ್ಕೆ ಸಿದ್ದರಾಮಯ್ಯ ಮುಂದೆ ಅಸಮಾಧಾನ ಹೊರಹಾಕಿರುವ ಮಾಜಿ ಸಚಿವ ಎಂ.ಆರ್ ಸೀತಾರಾಂ ಕೂಡ ಗೈರಾಗಿದ್ದರು.
ಲೋಕಸಭೆಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಹಿನ್ನೆಲೆ ಹೆಚ್.ಡಿ ದೇವೇಗೌಡರಿಗೆ ಟಿಕೆಟ್ ತ್ಯಾಗ ಮಾಡಿದ್ದ ಮುದ್ದಹನುಮೇಗೌಡ ರಾಜ್ಯಸಭೆ ಇಲ್ಲವೇ ಪರಿಷತ್ಗೆ ಟಿಕೆಟ್ ಸಿಗುವ ನಿರೀಕ್ಷೆ ಹೊಂದಿದ್ದರು. ಆದರೆ, ಅವಕಾಶ ಸಿಗದ ಮೇಲೆ ಬೇಸರಗೊಂಡಿದ್ದರು. ಈ ಕಾರಣಗಳಿಂದಲೇ ಇವರೆಲ್ಲ ಸಭೆಗೆ ಗೈರಾಗಿದ್ದರು ಎನ್ನಲಾಗಿದೆ.