ಬೆಂಗಳೂರು:ರಾಜ್ಯದ ಗ್ರಾಮ ಪಂಚಾಯಿತಿಗಳ ಅವಧಿ ವಿಸ್ತರಣೆ, ಮಾತೃಶ್ರೀ ಮತ್ತು ಸಾಂತ್ವಾನ ಯೋಜನೆಗಳನ್ನು ಮುಂದುವರಿಸಿ ಕೊಂಡು ಹೋಗುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಈ ಕುರಿತು ಎರಡು ಪ್ರತ್ಯೇಕ ಪತ್ರಬರೆದಿರುವ ಸಿದ್ದರಾಮಯ್ಯ, ಗ್ರಾಮ ಪಂಚಾಯಿತಿ ಅವಧಿ ವಿಸ್ತರಣೆಯನ್ನು ಪ್ರಸ್ತಾಪಿಸಿದ್ದಾರೆ. ಗ್ರಾ. ಪಂ.ಗಳಿಗೆ ಆಯ್ಕೆಯಾಗುವ ಸದಸ್ಯರು ಯಾವುದೇ ಪಕ್ಷ, ಬಣಗಳಿಗೆ ಸೇರದೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಸಂವಿಧಾನದ ಮೂಲ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಅನ್ನು ಜಾರಿಗೆ ತರಲಾಯಿತು. 5 ವರ್ಷಗಳ ಹಿಂದೆ ರಾಜ್ಯದ 6,024 ಗ್ರಾ. ಪಂ.ಗಳಿಗೆ ನಡೆದ ಚುನಾವಣೆಗಳಲ್ಲಿ 9,7060 ಸದಸ್ಯರು ಆಯ್ಕೆಯಾಗಿದ್ದಾರೆ. ಬರ, ಪ್ರವಾಹ ಕಠಿಣ ಪರಿಸ್ಥಿತಿಯನ್ನು ಹಾಗೂ ಗ್ರಾಮೀಣ ಅಭಿವೃದ್ಧಿಯನ್ನು ಸುಸೂತ್ರವಾಗಿ ನಿಭಾಯಿಸುವುದರ ಮೂಲಕ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಕೋವಿಡ್-19 ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಹೀಗಾಗಿ, ಗ್ರಾಮೀಣ ಭಾಗದಲ್ಲಿ ಈ ಸೋಂಕು ತೀವ್ರವಾಗಿ ಹರಡುತ್ತಿಲ್ಲ. ನಗರಗಳಿಂದ ವ್ಯಾಪಕವಾಗಿ ಜನರು ಹಳ್ಳಿಗಳಿಗೆ ವಲಸೆ ಹೋದರೂ ಈ ಬೇಸಿಗೆಯಲ್ಲಿ ಕುಡಿಯುವ ನೀರು, ನೈರ್ಮಲ್ಯ ಮುಂತಾದ ಸಮಸ್ಯೆಗಳು ಸೃಷ್ಟಿಯಾಗದಂತೆ ಗ್ರಾ.ಪಂ.ಗಳು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿವೆ. ಈ ಸದಸ್ಯರುಗಳ ಅವಧಿ ಮುಂದಿನ ಒಂದೆರಡು ತಿಂಗಳಲ್ಲಿ ಮುಗಿಯುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸಂವಿಧಾನದ ಅನುಚ್ಛೇದ 243ರ ಪ್ರಕಾರ, ಚುನಾವಣೆಗಳನ್ನು ನಿಗಧಿತ ಅವಧಿಯೊಳಗೆ ಕಡ್ಡಾಯವಾಗಿ ನಡೆಸಬೇಕಾಗಿರುತ್ತದೆ. ಕೊರೊನ ಹೆಸರು ಹೇಳಿಕೊಂಡು ಸರ್ಕಾರ ಚುನಾವಣೆಗಳನ್ನು ಮುಂದೂಡಲು ಪ್ರಯತ್ನಿಸುತ್ತಿದೆ. ಹೀಗೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಹಿಂದೆ ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಸಹ ನಿಗಧಿ ಪಡಿಸಿದ ಅವಧಿಯ ಒಳಗೆ ಚುನಾವಣೆಗಳನ್ನು ನಡೆಸುವಂತೆ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡಿವೆ. ಕೊರೊನಾ ಬಿಕ್ಕಟ್ಟಿನ ನೆಪದಲ್ಲಿ ಚುನಾವಣೆಗಳನ್ನು ನಡೆಸದೆ ಜಿಲ್ಲಾಧಿಕಾರಿಗಳ ಮೂಲಕ ಆಡಳಿತಾಧಿಕಾರಿಗಳನ್ನು ಮತ್ತು ನಾಮ ನಿರ್ದೇಶಿತ ಆಡಳಿತ ಸಮಿತಿಗಳನ್ನು ರಚಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.
ಸರ್ಕಾರ ಒಂದು ವೇಳೆ ಹೀಗೆ ಮಾಡಿದ್ದೆಯಾದರೆ ಅದು ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಆಶಯಗಳಿಗೆ ಸಂಪೂರ್ಣ ವಿರುದ್ಧವಾಗುತ್ತದೆ. ಗ್ರಾ.ಪಂ.ಗಳ ಕಾರ್ಯ ವೈಖರಿಯ ಬಗ್ಗೆ ಏನೇನೂ ತಿಳಿವಳಿಕೆ ಇಲ್ಲದವರನ್ನು, ನಿರ್ಧಿಷ್ಠ ಸಿದ್ಧಾಂತಗಳ ಹಿನ್ನೆಲೆಯವರನ್ನು ಸೇರಿಸಿ ಆಡಳಿತ ಸಮಿತಿ ರಚಿಸಿದರೆ ಕೊರೊನಾದಂತಹ ಬಿಕ್ಕಟ್ಟನ್ನು ನಿಭಾಯಿಸಲು ಕಷ್ಟವಾಗುತ್ತದೆ. ಇದರಿಂದ ಗ್ರಾಮೀಣ ಕರ್ನಾಟಕ ಅನ್ಯಾಯಕ್ಕೆ ತುತ್ತಾಗುತ್ತದೆ ಎಂದು ಬೇಸರ ಹೊರ ಹಾಕಿದ್ದಾರೆ.