ಬೆಂಗಳೂರು : ಸದನದಲ್ಲಿ ಮಾಧ್ಯಮಗಳ ನಿಷೇಧ ಸರಿಯಲ್ಲ. ಸದನ ಪಾರದರ್ಶಕವಾಗಿರಬೇಕು ಎಂದು ಪ್ರತಿಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಮಾಧ್ಯಮಗಳ ನಿಷೇಧಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದನವನ್ನು ಇಡೀ ರಾಜ್ಯದ ಜನ ನೋಡಬೇಕು. ಎಲ್ಲರೂ ಪತ್ರಿಕೆ ಓದುವುದಿಲ್ಲ. ಟಿವಿ ಮೂಲಕ ಸದನದ ಕಲಾಪವನ್ನು ತಿಳಿದುಕೊಳ್ಳುತ್ತಿದ್ದಾರೆ. ಆದರೆ, ಟಿವಿ ಕ್ಯಾಮರಾ ನಿಷೇಧ ಮಾಡಿದ್ದು ಏಕೆ?. ಇಲ್ಲಿದ್ದ ಸದಸ್ಯರಿಗೆ ಎಚ್ಚರಿಕೆ ಇರುತ್ತಿತ್ತು. ಕೆಲವರಿಗೆ ಕ್ಯಾಮರಾ ಕಂಡು ಹುಮ್ಮಸ್ಸು ಬರುತ್ತಿತ್ತು ಎಂದು ಹೇಳಿದರು.
ಸದನದ ಪಾರದರ್ಶಕತೆಗೆ ಮಾಧ್ಯಮಗಳು ಅವಶ್ಯಕ. ಮಾಧ್ಯಮಗಳ ನಿಷೇಧದ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೆ ಇಷ್ಟವಿಲ್ಲ. ಅದರ ಬಗ್ಗೆ ಸಿಎಂ ಟ್ವೀಟ್ ಮಾಡಿ ಅಳಿಸಿಬಿಟ್ಟರು.
ನಿಮ್ಮ ತೀರ್ಮಾನ ಮರು ಪರಿಶೀಲಿಸಿ. ನಿನ್ನೆ ಮಾಧ್ಯಮಗಳು ಪ್ರತಿಭಟನೆ ನಡೆಸಿವೆ. ನೀವು ನಿರ್ಧಾರ ತೆಗೆದುಕೊಳ್ಳುವ ಮುನ್ನ ವಿಪಕ್ಷಗಳ ಜೊತೆ ಚರ್ಚಿಸಿಲ್ಲ ಎಂದರು.
ನನ್ನ ಕಾಲದಲ್ಲಿ ಸರ್ಕಾರದ ಚಾನೆಲ್ ಮಾಡಲು ತೀರ್ಮಾನಿಸಿದ್ದೆವು. ಆದರೆ ಮಾಡಲಿಲ್ಲ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಮಾಧ್ಯಮವೂ ಪ್ರಮುಖ ಅಂಗ. ಮಾಧ್ಯಮಗಳ ನಿರ್ಬಂಧಿಸಿದರೆ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಆಗುತ್ತದ ಎಂದು ಸಿದ್ದರಾಮಯ್ಯ ಹೇಳಿದರು.