ಬೆಂಗಳೂರು:ಅನಾರೋಗ್ಯದ ಹಿನ್ನೆಲೆ ರಾಜ್ಯದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಂಬಂಧ ನಿನ್ನೆ ಟ್ವೀಟ್ ಮಾಡಿರುವ ಅವರು, ಉತ್ತರ ಕರ್ನಾಟಕ ಭಾಗದ ಪ್ರವಾಹ ಸಂತ್ರಸ್ತರನ್ನು ಕಂಡು ಮನಸ್ಸು ಮರುಗುತ್ತಿದೆ. ಇಂತಹ ಸಂದರ್ಭದಲ್ಲಿ ಅವರೊಂದಿಗೆ ಇರಬೇಕಿತ್ತು ಎನಿಸಿದರೂ ವೈದ್ಯರ ಸಲಹೆ ಮೇರೆಗೆ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಬೇಕಾಗಿದೆ ಎಂದಿದ್ದಾರೆ.
ನನ್ನ ಕ್ಷೇತ್ರ ಬಾದಾಮಿಯಲ್ಲಿ ಸಹ ಪ್ರವಾಹ ಭೀತಿ ಎದುರಾಗಿದ್ದು, ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸುರಕ್ಷಿತ ತಾಣಕ್ಕೆ ತೆರಳುವವರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಅಧಿಕಾರಿಗಳ ತಂಡ ಸಜ್ಜಾಗಿದೆ. ಈ ಸಂಬಂಧ ಬಾದಾಮಿ ತಹಶೀಲ್ದಾರ್, ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದು ವಿವರಿಸಿದ್ದಾರೆ.
ಕ್ಷೇತ್ರದ ಜನತೆಗೆ ಯಾವ ತೊಂದರೆಯೂ ಆಗದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸುವ ಹೊಣೆ ನಮ್ಮದು. ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಹಾಗೂ ಸಂತ್ರಸ್ತರಿಗೆ ಪರಿಹಾರ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸ್ಥಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದಿದ್ದಾರೆ. ನವಿಲುತೀರ್ಥ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುವುದರಿಂದ ಮಲಪ್ರಭಾ ನದಿ ದಡದ ಗ್ರಾಮಗಳಲ್ಲಿ ಪ್ರವಾಹ ಉಂಟಾಗಲಿದೆ. ಆದ್ದರಿಂದ ಗ್ರಾಮಸ್ಥರು ಸುರಕ್ಷಿತ ತಾಣಕ್ಕೆ ತೆರಳಬೇಕೆಂದು ಈ ಮೂಲಕ ಮನವಿ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.