ಬೆಂಗಳೂರು:ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಸ್ಪಷ್ಟ ಸರ್ಕಾರಿ ಆದೇಶವಿಲ್ಲದೆ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಒಬ್ಬ ಕಿಡಿಗೇಡಿ ಟ್ರೋಲರ್ಗೆ ಅವಕಾಶ ನೀಡಿ, ಈಗ ಆತ ಮಾಡಿಟ್ಟಿರುವ ಕೊಳಕುಗಳನ್ನೆಲ್ಲ ತಲೆಮೇಲೆ ಇಟ್ಟುಕೊಂಡು ಸಮರ್ಥಿಸುತ್ತಿರುವ ಬೇಜವಾಬ್ದಾರಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಕ್ಷಣ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ಶೈಕ್ಷಣಿಕ, ಸಾಮಾಜಿಕ, ಸಾಹಿತ್ತಿಕ ಕ್ಷೇತ್ರವನ್ನು ಕಲುಷಿತಗೊಳಿಸಿರುವ ಪಠ್ಯಪುಸ್ತಕ ಪರಿಷ್ಕರಣೆಯ ಅದ್ವಾನಕ್ಕೆ ಕಾರಣಕರ್ತರಾಗಿರುವ ಇಂತಹ ಬೇಜವಾಬ್ದಾರಿ ಶಿಕ್ಷಣ ಸಚಿವರನ್ನು ಮುಖ್ಯಮಂತ್ರಿಗಳು ಇನ್ನೂ ಸಮರ್ಥಿಸಿಕೊಳ್ಳಲು ಹೊರಡುವುದಾದರೆ ಅವರೇ ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಸರ್ಕಾರ ಮಕ್ಕಳ ಭವಿಷ್ಯ ಬಲಿಕೊಡಲು ಹೊರಟಿದೆ:ಪಠ್ಯಪುಸ್ತಕ ಪರಿಷ್ಕರಣೆಯಂತಹ ಅತ್ಯಂತ ಜವಾಬ್ದಾರಿಯುತ ಕೆಲಸವನ್ನು ಸ್ವಭಾವತಃ ವಿಕೃತನಾದ ಒಬ್ಬ ಯಕಶ್ಚಿತ್ ಟ್ರೋಲರ್ಗೆ ಒಪ್ಪಿಸಿ, ಅವನು ಮಾಡುವ ಅವಾಂತರಗಳಿಗೆ ಅವನೇ ಹೊಣೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಿ, ಈಗ ಆತ ಮಾಡಿಟ್ಟಿರುವ ರಾಡಿಗಳನ್ನೆಲ್ಲ ಸಮರ್ಥಿಸುತ್ತ ಕೂತಿರುವ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವ ನೈತಿಕತೆ ಇದೆ? ಪಠ್ಯಪುಸ್ತಕ ಪರಿಷ್ಕರಣೆಗೆ ಅವಸರದಲ್ಲಿ ಮೌಖಿಕ ಸೂಚನೆ ನೀಡಿ ಘಟನೋತ್ತರ ಅನುಮತಿ ನೀಡಲು ಇದೇನು 40% ಕಮಿಷನ್ ಬಾಚುವ ರಸ್ತೆ ಕಾಮಗಾರಿಯೇ? ಇಂತಹ ಮೌಖಿಕ ಸೂಚನೆಯಲ್ಲಿ ಕೆಲಸಮಾಡಿಸಿ ಅಮಾಯಕ ಗುತ್ತಿಗೆದಾರನನ್ನು ಬಲಿ ಪಡೆದಿರುವ ಈ ಸರ್ಕಾರ ಈಗ ಎಳೆಯ ಮಕ್ಕಳ ಭವಿಷ್ಯವನ್ನೇ ಬಲಿಕೊಡಲು ಹೊರಟಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.