ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಪದಗ್ರಹಣ ಸಮಾರಂಭಕ್ಕೆ ಸಜ್ಜಾಗುತ್ತಿದ್ದಾರೆ. ನಿನ್ನೆ ಇಬ್ಬರು ನಾಯಕರು ದೆಹಲಿಗೆ ತೆರಳಿ ಸಚಿವ ಸಂಪುಟಕ್ಕೆ ಸದಸ್ಯರ ಸೇರ್ಪಡೆ ಸಂಬಂಧ ಸಮಲೋಚಿಸಿದ್ದರು. ಇದರ ಫಲವಾಗಿ 8 ಮಂದಿ ಹಿರಿಯ ಸದಸ್ಯರು ಸಿಎಂ ಹಾಗೂ ಡಿಸಿಎಂ ಜತೆ ಇಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್, ಸಚಿವರಾಗಿ ಎಂ.ಬಿ ಪಾಟೀಲ್, ಜಮೀರ್ ಅಹಮದ್ ಖಾನ್, ರಾಮಲಿಂಗಾ ರೆಡ್ಡಿ, ಡಾ. ಜಿ ಪರಮೇಶ್ವರ್, ಕೆ. ಹೆಚ್ ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ ಮತ್ತು ಕೆ. ಜೆ ಜಾರ್ಜ್ ಇಂದು ಮಧ್ಯಾಹ್ನ 12:30ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲದಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನಿನ್ನೆ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ತಡ ರಾತ್ರಿಯೇ ಬೆಂಗಳೂರಿಗೆ ಹಿಂದಿರುಗಿದ್ದು, ಡಿಕೆಶಿ ಇದೀಗ ಬೆಂಗಳೂರಿಗೆ ಆಗಮಿಸಬೇಕಿದೆ. ನಿನ್ನೆ ತಡರಾತ್ರಿ ದೆಹಲಿಯಿಂದ ಹೊರಟು ಶಿವಾನಂದ ವೃತ್ತ ಸಮೀಪ ಇರುವ ತಮ್ಮ ಸರ್ಕಾರಿ ನಿವಾಸಕ್ಕೆ ಆಗಮಿಸಿರುವ ಸಿದ್ದರಾಮಯ್ಯ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಬೆಳಗ್ಗೆ ಕೊಂಚ ತಡವಾಗಿ ಎದ್ದು ಪದಗ್ರಹಣ ಸಮಾರಂಭಕ್ಕೆ ಸಜ್ಜಾಗಲಿರುವ ಅವರು ಹೊರಡುವ ಮುನ್ನ ತಮ್ಮ ಅಭಿಮಾನಿಗಳನ್ನ ಭೇಟಿ ಮಾಡಿ ಶುಭಾಶಯ ಸ್ವೀಕರಿಸಲಿದ್ದಾರೆ.
ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಮೈಸೂರಿನಿಂದ ಆಗಮಿಸಿದ ಸಿದ್ದರಾಮಯ್ಯ ಕುಟುಂಬಸ್ಥರು ಬೆಂಗಳೂರು ತಲುಪಿದ್ದಾರೆ. ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ ಶಿವಾನಂದ ವೃತ್ತ ಸಮೀಪವಿರುವ ಸಿದ್ದರಾಮಯ್ಯ ನಿವಾಸಕ್ಕೆ ತಲುಪಿದ್ದಾರೆ. ಇನ್ನು ನಿಯೋಜಿತ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಇಂದು ಬೆಳಗಿನ ಜಾವ ದೆಹಲಿಯಿಂದ ಪ್ರಯಾಣ ಬೆಳೆಸಿದ್ದಾರೆ.
ಮತ್ತೆ ದೆಹಲಿಗೆ:ಇಂದು ಮಧ್ಯಾಹ್ನ 12:30ಕ್ಕೆ ಪದಗ್ರಹಣ ಸಮಾರಂಭ ಬಳಿಕ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಮತ್ತೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ನಿನ್ನೆ ತಡರಾತ್ರಿ ಸಾಕಷ್ಟು ಪ್ರಯತ್ನದ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ನಿವಾಸದಲ್ಲಿ 8 ಸಚಿವರ ಪದಗ್ರಹಣಕ್ಕೆ ಪಟ್ಟಿ ಅಂತಿಮಗೊಳಿಸಲಾಗಿದೆ.