ಬೆಂಗಳೂರು:ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಜ.8ಕ್ಕೆ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಐಕ್ಯತಾ ಸಮಾವೇಶ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಮ್ಮ ಸಮಸ್ಯೆಯನ್ನು ಸರ್ಕಾರ ಹಾಗೂ ಜನತೆಯ ಗಮನಕ್ಕೆ ತರಲು ತೀರ್ಮಾನಿಸಿದ್ದೇವೆ ಎಂದು ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ನಾಯಕರೆಲ್ಲಾ ಸೇರಿ ಸಭೆ ನಡೆಸಿದ್ದೇವೆ. ನಮ್ಮನ್ನು ಒಡೆಯಲು ಪ್ರಯತ್ನವನ್ನು ಹಲವರು ನಡೆಸಿದ್ದಾರೆ. 1.5 ಕೋಟಿ ನಮ್ಮ ಜನಸಂಖ್ಯೆ ಇದೆ. ನಮ್ಮ ಸಮುದಾಯದವರು ಶೇ.22ರಷ್ಟು ಮಂದಿ ರಾಜ್ಯದಲ್ಲಿ ಇದ್ದೇವೆ. ನಮ್ಮ ಸಮಸ್ಯೆಯನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದೇವೆ.
ಸಮಾವೇಶ ನಡೆಸಲು ತೀರ್ಮಾನ: ನಾವೆಲ್ಲಾ ಸೇರಿ ಚರ್ಚಿಸಿ ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದ್ದೇವೆ. ಜನರಿಗೆ ಬರಲು ಅನುಕೂಲವಾಗಲಿ ಎಂದು ಮಧ್ಯ ಕರ್ನಾಟಕದಲ್ಲಿ ಮಾಡುತ್ತಿದ್ದೇವೆ. ಜನವರಿ 8 ರಂದು ಸಮಾವೇಶ ನಡೆಯಲಿದೆ. ನಮ್ಮ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ಸಮುದಾಯದವರಾಗಿರುವ ಅವರಿಗೆ ಸನ್ಮಾನ ಮಾಡುತ್ತೇವೆ ಎಂದು ಹೇಳಿದರು
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಪಾಲ್ಗೊಳ್ಳುತ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಲ್ಲವೇ ಪ್ರಿಯಂಕಾ ಗಾಂಧಿಯಲ್ಲಿ ಒಬ್ಬರು ಪಾಲ್ಗೊಳ್ಳಬೇಕು ಎಂದು ಬಯಸುತ್ತಿದ್ದೇವೆ. ಆ ಸಂದರ್ಭದಲ್ಲಿ ಯಾರು ಪಾಲ್ಗೊಳ್ಳಲು ಸಾಧ್ಯವೋ ಅವರನ್ನು ಸ್ವಾಗತಿಸಲು ಸಿದ್ಧತೆ ನಡೆಸಿದ್ದೇವೆ ಎಂದರು.
ಮೀಸಲಾತಿ ಅನಿವಾರ್ಯ: ನಮ್ಮ ಸಮುದಾಯದ ಜನರಿಗೆ ಸಾಕಷ್ಟು ಸಮಸ್ಯೆ ಇದೆ. ಇದನ್ನು ಸರ್ಕಾರಕ್ಕೆ ಹಾಗೂ ಬೇರೆ ಸಮುದಾಯದ ಜನರಿಗೆ ತಿಳಿಸುವ ಯತ್ನ ಮಾಡುತ್ತೇವೆ. ಮೀಸಲಾತಿ ಎನ್ನುವುದು ನಮ್ಮ ಹಕ್ಕು ಎನ್ನುವುದನ್ನು ಜನರಿಗೆ ತಿಳಿಸುವುದು ಉದ್ದೇಶವಾಗಿದೆ. ಮೀಸಲಾತಿ ಬಗ್ಗೆ ಜನರ ಭಿನ್ನಾಭಿಪ್ರಾಯ ಕೇಳಿ ಬರುತ್ತಿದೆ. ತುಳಿತಕ್ಕೆ ಒಳಗಾದ ಜನರು ಮುಖ್ಯವಾಹಿನಿಗೆ ತರಲು ಮೀಸಲಾತಿ ಅನಿವಾರ್ಯ. ಬಿ.ಆರ್. ಅಂಬೇಡ್ಕರ್ ಅವರು ಮೊದಲ 10 ವರ್ಷದಲ್ಲಿ ಇದು ಸಾಧ್ಯವಾಗಬಹುದು ಎಂದು ಮಿತಿ ಹೇರಿದ್ದರು. ಆದರೆ ಇದು ಸಾಧ್ಯವಾಗದೇ ಇಂದಿಗೂ ಮೀಸಲಾತಿ ಮುಂದುವರೆದಿದೆ ಎಂದು ವಿವರಿಸಿದರು.
ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧಾರ: ಹಿಂದೆ ಕಾಂಗ್ರೆಸ್ ಸರ್ಕಾರ ನಮ್ಮ ಸಮುದಾಯದವರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಅನುದಾನ ಮೀಸಲಿಡಬೇಕೆಂಬ ಕಾನೂನು ತಂದಿತ್ತು. ಮೀಸಲಿಟ್ಟ ಹಣ ಖಾಲಿ ಆಗದಿದ್ದರೆ ಅದನ್ನು ಮುಂದಿನ ಅವಧಿಗೆ ಮುಂದುವರಿಸಬೇಕು ಎಂದು ಹೇಳಲಾಗಿತ್ತು. ಕಾಂಗ್ರೆಸ್ ಸರ್ಕಾರ ಈ ಕಾನೂನು ತಂದಿತ್ತು. ನಮ್ಮ ಪಾಲಿಗೆ ಶೇ 24ರಷ್ಟು ಅನುದಾನ ಮೀಸಲಿಡಬೇಕಿತ್ತು.