ಬೆಂಗಳೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶೈವ ಸಂಪ್ರದಾಯದಂತೆ ಶಿವರಾತ್ರಿ ಆಚರಣೆ ಮಾಡಲು ಅವಕಾಶ ನೀಡಿ ಮುಜರಾಯಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ತಡೆ ನೀಡಿದೆ. ಅಲ್ಲದೇ ಈ ಹಿಂದಿನ ಸಂಪ್ರದಾಯದಂತೆಯೇ ಶಿವರಾತ್ರಿ ಆಚರಿಸುವಂತೆ ಸೂಚಿಸಿದೆ.
ಶೈವ ಸಂಪ್ರದಾಯದಂತೆ ಪೂಜೆ ನಡೆಸಲು ಅವಕಾಶ ಕಲ್ಪಿಸಿ ಮುಜರಾಯಿ ಇಲಾಖೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ ದೇವಾಲಯದ ಭಕ್ತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಈ ಆದೇಶ ಹೊರಡಿಸಿದೆ. ಶಿವರಾತ್ರಿ ಆಚರಣೆಗೆ ಹೊಸ ಪದ್ಧತಿ ಮತ್ತು ಆಚರಣೆಗಳನ್ನು ಅಳವಡಿಸದಂತೆ ಸೂಚಿಸಿರುವ ಪೀಠ, ಈ ಹಿಂದಿನ ವರ್ಷಗಳಲ್ಲಿ ನಡೆಸಿಕೊಂಡು ಬಂದಿರುವ ಪದ್ಧತಿಯನ್ನೇ ಅನುಸರಿಸುವಂತೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಶಿವನ ಪುತ್ರನಾಗಿರುವ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯದಲ್ಲಿ ಮಹಾಶಿವರಾತ್ರಿಯನ್ನು ಮಾಧ್ವ ಸಂಪ್ರದಾಯದಂತೆಯೇ ಆಚರಿಸಬೇಕು. ಈ ಹಿಂದೆ ದೇವಸ್ಥಾನ ಶೃಂಗೇರಿ ಮಠದ ವ್ಯಾಪ್ತಿಯಲ್ಲಿದ್ದಾಗ ಮಾಧ್ವ ಸಂಪ್ರದಾಯದಲ್ಲೇ ಪೂಜೆ ನಡೆಯುತ್ತಿತ್ತು. ಹೀಗಾಗಿ ಮಾಧ್ವ ಸಂಪ್ರದಾಯದಲ್ಲಿ ಪೂಜೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದಿದ್ದ ಮಾಧ್ವ ಸಂಪ್ರದಾಯದ ಭಕ್ತರು, ಈ ಸಂಬಂಧ ಮುಜರಾಯಿ ಇಲಾಖೆಗೂ ಪತ್ರದ ಮೂಲಕ ಮನವಿ ಮಾಡಿದ್ದರು. ಇದೇ ವಿಚಾರವಾಗಿ ಶೈವ-ಮಾಧ್ವ ಸಂಪ್ರದಾಯದ ಭಕ್ತರ ನಡುವೆ ವಿವಾದ ಏರ್ಪಟ್ಟಿತ್ತು.
ಓದಿ:ಕುಕ್ಕೆ ಸುಬ್ರಹ್ಮಣ್ಯ ಶಿವರಾತ್ರಿ ಆಚರಣೆ ವಿವಾದ ಅಂತ್ಯ
ವಿವಾದ ಬಗೆಹರಿಸುವುದಾಗಿ ಹೇಳಿದ್ದ ಧಾರ್ಮಿಕ ದತ್ತಿ ಇಲಾಖೆ ಶೈವ ಸಂಪ್ರದಾಯದಂತೆ ಶಿವರಾತ್ರಿ ಆಚರಣೆ ಮಾಡಲು ಅನುಮತಿ ನೀಡಿ ಆದೇಶಿಸಿತ್ತು. ಅದರಂತೆ ದೇವಸ್ಥಾನದಲ್ಲಿ ಬಿಲ್ವಾರ್ಚನೆ, ರುದ್ರ ಪಾರಾಯಣ, ಭಸ್ಮಾರ್ಚನೆ, ಜಾಗರಣೆ ಹಮ್ಮಿಕೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ಮಾಧ್ವ ಸಂಪ್ರದಾಯದ ಭಕ್ತರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಮಾಧ್ವ ಸಂಪ್ರದಾಯದಂತೆ ಶಿವರಾತ್ರಿ ಆಚರಣೆ ಮಾಡಲು ಅವಕಾಶ ನೀಡಿ ಮುಜರಾಯಿ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.