ಕರ್ನಾಟಕ

karnataka

By

Published : Oct 8, 2021, 5:18 PM IST

Updated : Oct 8, 2021, 5:52 PM IST

ETV Bharat / state

ವಸಿಷ್ಠ ಕೋ ಆಪರೇಟಿವ್ ಸೊಸೈಟಿ ಕೂಡಲೇ ಸೂಪರ್ ಸೀಡ್ ಮಾಡಿ: ಶಂಕರ್ ಗುಹಾ ದ್ವಾರಕನಾಥ್

ವಸಿಷ್ಠ ಕ್ರೆಡಿಟ್ ಕೊ - ಆಪರೇಟಿವ್ ಸೊಸೈಟಿಯಿಂದ 450 ರಿಂದ 500 ಕೋಟಿ ರೂ. ವಂಚನೆ ನಡೆದಿದೆ ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಶಂಕರ್ ಗುಹಾ ದ್ವಾರಕನಾಥ್ ಆರೋಪಿಸಿದ್ದಾರೆ.

shanker-guha-dwarakanath-outrage-against-vasishta-credit-co-operative-society
ಪ್ರೆಸ್ ಕ್ಲಬ್​​ನಲ್ಲಿ ವಂಚನೆಗೆ ಒಳಗಾದ ಹೂಡಿಕೆದಾರರಿಂದ ಸುದ್ದಿಗೋಷ್ಠಿ

ಬೆಂಗಳೂರು: ವಸಿಷ್ಠ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣ ಬೆಳಕಿಗೆ ಬಂದು ಸುಮಾರು 6 ತಿಂಗಳು ಕಳೆದರೂ ಈವರೆಗೂ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ. ಹೀಗಾಗಿ, ರಾಜ್ಯ ಸರ್ಕಾರ ಕೂಡಲೇ ಸೊಸೈಟಿ ಸೂಪರ್ ಸೀಡ್ ಮಾಡಬೇಕು. ಇಂಡಿಪೆಂಡೆಂಟ್ ಸಂಸ್ಥೆಯಿಂದ ವಸಿಷ್ಠ ಸೊಸೈಟಿ ಆಡಿಟ್ ಮಾಡಬೇಕು ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಶಂಕರ್ ಗುಹಾ ದ್ವಾರಕನಾಥ್ ಆಗ್ರಹಿಸಿದರು.

ನಗರದ ಪ್ರೆಸ್ ಕ್ಲಬ್​​ನಲ್ಲಿ ವಂಚನೆಗೆ ಒಳಗಾದ ಹೂಡಿಕೆದಾರರಿಂದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ ಅವರು, ಈ ಸೊಸೈಟಿಯಲ್ಲಿ ಠೇವಣಿ ಇಟ್ಟಿರುವವರಲ್ಲಿ ಬಹುತೇಕರು 70 ವರ್ಷ ಮೇಲ್ಪಟ್ಟವರಾಗಿದ್ದಾರೆ. ಹಿರಿಯ ನಾಗರಿಕರು ತಮ್ಮ ಹಣ ವಾಪಸ್ ಸಿಗತ್ತೋ, ಇಲ್ಲವೋ ಎನ್ನುವ ಆತಂಕದಲ್ಲಿದ್ದಾರೆ ಎಂದರು.

ಡಾ. ಶಂಕರ್ ಗುಹಾ ದ್ವಾರಕನಾಥ್

ವಸಿಷ್ಠ ಕ್ರೆಡಿಟ್ ಕೊ - ಆಪರೇಟಿವ್ ಸೊಸೈಟಿಯಿಂದ 450 ರಿಂದ 500 ಕೋಟಿ ವಂಚನೆ ನಡೆದಿದೆ. ಬ್ಯಾಂಕ್ ಅಧ್ಯಕ್ಷರೇ ತಮ್ಮ ಕುಟುಂಬಕ್ಕೆ 100 ಕೋಟಿಗೂ ಹೆಚ್ಚಿನ ಸಾಲ ನೀಡಿದ್ದಾರೆ. ಬ್ಯಾಂಕ್ ಅಧ್ಯಕ್ಷರ ಮಗನ ಹೆಸರಲ್ಲೇ ಅನೇಕ ರೀತಿಯ ಲೋನ್​ಗಳನ್ನ ನೀಡಲಾಗಿದೆ. ನೂರಾರು ಕೋಟಿ ಲೋನ್ ನೀಡಿದರೂ, ಯಾವುದೇ ದಾಖಲೆಗಳನ್ನು ಪಡೆದಿಲ್ಲ. ಹನುಮಂತ ನಗರ ಬ್ಯಾಂಕ್ ಕಟ್ಟಡದಲ್ಲೇ ಇರುವ ಚಿಕ್ಕ ಪ್ರಿಂಟಿಂಗ್ ಕಚೇರಿಗೆ ಸುಮಾರು 37 ಕೋಟಿ ಲೋನ್ ನೀಡಲಾಗಿದೆ ಎಂದು ಆರೋಪಿಸಿದರು.

ಎಲ್ಲ ಸದಸ್ಯರಿಗೂ ನೋಟಿಸ್​ ಜಾರಿ

ಸುಮಾರು 450 ಕೋಟಿ ರೂಪಾಯಿಯ ಈ ಹಗರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 30 ರಂದು ರಿಜಿಸ್ಟ್ರಾರ್ ಆಫ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರನ್ನು ಸೇರಿಸಿ ವ್ಯವಸ್ಥಾಪಕ ಮಂಡಳಿಯ ಎಲ್ಲಾ ಸದಸ್ಯರಿಗೂ ನೋಟಿಸ್ ಜಾರಿ ಆಗಿರುತ್ತದೆ.

ಈ ನೋಟಿಸ್​ನ ಸೆಕ್ಷನ್ ನಂ.21 ರಲ್ಲಿ ಉಲ್ಲೇಖಿಸಿರುವಂತೆ ಕೋಟ್ಯಂತರ ರೂಪಾಯಿ ಹಣವನ್ನು ಸಾಲ ಖಾತೆಗಳಲ್ಲಿ ಸಾಲಗಾರರ ಅರ್ಜಿ ಇಲ್ಲದೇ ಸಾಲ ನೀಡಿರುವುದು, ಸಾಲಗಾರರ ಆಸ್ತಿಯು ಆಧಾರವಾಗಿಟ್ಟುಕೊಳ್ಳದೆ ಸಾಲ ನೀಡಲಾಗಿದೆ. ಯಾವುದೇ ದಾಖಲಾತಿಗಳಿಲ್ಲದೆ ಸಾಲ ನೀಡಿರುವುದು ವ್ಯವಸ್ಥಾಪಕ ಮಂಡಳಿಯ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ ಎಂದು ಶಂಕರ್ ಗುಹಾ ವಿವರಿಸಿದರು.

ಗ್ರಾಹಕರ ನಂಬಿಕೆಗೆ ದ್ರೋಹ ಆರೋಪ

ಠೇವಣಿದಾರರು ಕಷ್ಟಪಟ್ಟು ತಮ್ಮ ಜೀವಮಾನವಿಡೀ ದುಡಿದ ಹಣವನ್ನು ಈ ರೀತಿ ತಮಗೆ ಅನುಕೂಲವಾಗುವವರಿಗೆ ಸಾಲ ನೀಡಿ ಗ್ರಾಹಕರ ನಂಬಿಕೆಗೆ ದ್ರೋಹ ಮಾಡಲಾಗಿದೆ. ಈ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಈ ಹಿಂದೆ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಹಗರಣವನ್ನು ಸಹ ಸಿಐಡಿಗೆ ನೀಡಿದ್ದನ್ನು ಗಮನಿಸಬಹುದು. ಆದರೆ, ಆ ಪ್ರಕರಣದಂತೆ ಇದು ಸಹ ರಾಜಕೀಯ ಒತ್ತಡಗಳಿಂದಾಗಿ ಸರಿಯಾದ ದಿಕ್ಕಿನಲ್ಲಿ ಸಾಗುವ ಸಾಧ್ಯತೆ ಕಡಿಮೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಕೂಡಲೇ ಸಿಬಿಐ ಬ್ಯಾಂಕ್ ಫ್ರಾಡ್ಸ್ ಇನ್ವೆಸ್ಟಿಗೇಶನ್ ಗೆ ವಹಿಸಬೇಕು ಎಂದು ಆಗ್ರಹಿಸಿದರು.

ನಮ್ಮ ರಾಜ್ಯದ ಪೊಲೀಸರ ಬಗ್ಗೆ ನಂಬಿಕೆ ಮತ್ತು ಗೌರವವಿದ್ದರೂ ಆಡಳಿತ ಪಕ್ಷದವರು ಒತ್ತಡ ಹೇರಿ ಕೆಲಸಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇರುವುದರಿಂದ ಈ ಹಗರಣವನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು. ರಾಜ್ಯ ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಗ್ರಾಹಕರಿಗೆ ಅವರ ಹಣವನ್ನು ಸಂಪೂರ್ಣವಾಗಿ ಕೊಡಿಸುವ ಜವಾಬ್ದಾರಿಯನ್ನು ವಹಿಸಬೇಕು. ಇದರ ಜೊತೆಗೆ ಸೊಸೈಟಿಯ ಇಂಡಿಪೆಂಡೆಂಟ್ ಆಡಿಟಿಂಗ್ ನಡೆಸಬೇಕು. ಸೊಸೈಟಿಯನ್ನು ಸೂಪರ್‌ಸೀಡ್ ಮಾಡಬೇಕು ಎಂದು ವಂಚನೆಗೆ ಒಳಗಾದವರ ಪರವಾಗಿ ಡಾ. ಶಂಕರ್ ಗುಹಾ ದ್ವಾರಕನಾಥ್ ಒತ್ತಾಯಿಸಿದರು.

ಓದಿ:ಕೇಂದ್ರ ಆರೋಗ್ಯ ಸಚಿವರ ಭೇಟಿಯಾದ ಸಿಎಂ: ವಿವಿಧ ವಿಷಯಗಳ ಕುರಿತು ಚರ್ಚೆ..!

Last Updated : Oct 8, 2021, 5:52 PM IST

ABOUT THE AUTHOR

...view details