ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಹೆಚ್ಎಎಲ್ ಜಮೀನಿಗೆ ನಕಲಿ ದಾಖಲೆ ಸೃಷ್ಟಿ ಮಾಡಿ ಬೇರೆಯವರಿಗೆ ಲೀಸ್‌ಗೆ ಕೊಟ್ಟು ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದ ಏಳು ಮಂದಿ ವಂಚಕರನ್ನು ಹೆಚ್ಎಎಲ್ ಪೊಲೀಸರು ಸೆರೆ ಹಿಡಿದಿದ್ದಾರೆ. ಸೈಯದ್ ಮುನ್ನಾವರ್ ಸಾಬ್ರಿ, ಪ್ರತಾಪ್, ಸೈಯದ್ ಅಫ್ರೋಜ್, ರಾಜ್ ಕುಮಾರ್, ಶ್ರೀನಿವಾಸ ಮೂರ್ತಿ ಹಾಗೂ ವೈಜಯಂತ್ ಬಂಧಿತರು. ಹೆಚ್ಎಎಲ್ ಅಧಿಕಾರಿ ಈ ಕುರಿತು ದೂರು ನೀಡಿದ್ದರು.
ಆರೋಪಿಗಳು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕೇಂದ್ರ ಸರ್ಕಾರಕ್ಕೆ ಸೇರಿರುವ 833 ಎಕರೆ ಜಾಗಕ್ಕೆ ನಕಲಿ ದಾಖಲಾತಿ ಸಿದ್ಧಪಡಿಸಿ ಲೀಸ್‌ಗೆ ಪಡೆದಿರುವುದಾಗಿ ದಾಖಲೆಗಳನ್ನು ರೆಡಿ ಮಾಡಿಕೊಂಡಿದ್ದರು. ಇದಕ್ಕೆ ಹೆಚ್ಎಎಲ್‌ನ ಲೆಟರ್‌ಹೆಡ್, ಅಧಿಕಾರಿಗಳ ಸೀಲ್ ಮತ್ತು ಸಹಿ ನಕಲಿಸಿದ್ದಾರೆ. ಹೀಗೆ ನಕಲಿಸಿದ ದಾಖಲೆಯಿಂದ ಆರೋಪಿಗಳು ಮೂರನೇ ವ್ಯಕ್ತಿಗಳಿಗೆ ಗಾಳ ಹಾಕುತ್ತಿದ್ದರು. ತಾವು ತಯಾರಿಸಿದ್ದ ದಾಖಲಾತಿ ತೋರಿಸಿ ನಾವು ಹೆಚ್ಎಎಲ್‌ನಿಂದ 30 ವರ್ಷಕ್ಕೆ ಜಾಗ ಲೀಸ್ ಪಡೆದಿದ್ದೇವೆ. ನಿಮಗೆ ಬೇಕಾದರೆ ವಾಣಿಜ್ಯ ವ್ಯವಹಾರಕ್ಕಾಗಿ ಲೀಸ್ ಮತ್ತು ಬಾಡಿಗೆಗಾಗಿ ನೀಡ್ತೀವಿ ಎಂದು ಹಣ ಪಡೆಯುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಹೀಗೆ ಇಬ್ಬರಿಂದ ಒಂದು ಕೋಟಿ ರೂ ಪಡೆದು ವಂಚನೆ ಮಾಡಿದ್ದಾರೆ. ಪ್ರಕರಣ ತಿಳಿದು ಹೆಚ್ಎಎಲ್ ಅಧಿಕಾರಿಗಳು ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಮುಖ ಆರೋಪಿ ಬಿನಿಷ್ ಥಾಮಸ್ ತಲೆಮರೆಸಿಕೊಂಡಿದ್ದಾನೆ.