ಸರ್ವಜ್ಞನಗರ ಕ್ಷೇತ್ರ: ಸ್ಥಳೀಯರ ಅಭಿಪ್ರಾಯ ಬೆಂಗಳೂರು:2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯ ಬಳಿಕ ಅಸ್ವಿತ್ವಕ್ಕೆ ಬಂದಿರುವ ಸರ್ವಜ್ಞ ನಗರ ಕ್ಷೇತ್ರದಲ್ಲಿ ಈವರೆಗೆ ನಡೆದ ಸತತ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ಜೆ.ಜಾರ್ಜ್ ಜಯಭೇರಿ ಬಾರಿಸಿದ್ದಾರೆ. ಪ್ರಸಕ್ತ ವರ್ಷದ ಚುನಾವಣೆಲ್ಲಿ ಬಿಜೆಪಿಯಿಂದ ಪದ್ಮನಾಭ ರೆಡ್ಡಿ ಎದುರಾಳಿಯಾಗಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ನೇರ ಹಣಾಹಣಿ ನಡೆಯುತ್ತಿದೆ.
ಎರಡೂ ಪಕ್ಷಗಳ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಧರ್ಮಗಳ ಮತದಾರರು ನೆಲೆಸಿದ್ದಾರೆ. ಮೂರು ಚುನಾವಣೆಗಳಲ್ಲಿ ಗೆದ್ದು ತನ್ನ ಭದ್ರಕೋಟೆಯಾಗಿ ಮಾಡಿಕೊಂಡಿರುವ ಜಾರ್ಜ್‌ಗೆ ಈ ಬಾರಿಯ ಚುನಾವಣೆಯಲ್ಲಿ ಪದ್ಮನಾಭ ರೆಡ್ಡಿ ಪ್ರಬಲ ಪೈಪೋಟಿ ನೀಡಲಿದ್ದಾರೆ.
ಕ್ಷೇತ್ರ ಪುನರ್‌ವಿಂಗಡಣೆಯಾದ ಬಳಿಕ ನಡೆದ ಚುನಾವಣೆಗಳಲ್ಲಿ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುತ್ತಿರುವ ಜಾರ್ಜ್ ಕ್ಷೇತ್ರದಲ್ಲಿ ಹೊಂದಿರುವ ಹಿಡಿತಕ್ಕೆ ಸಾಕ್ಷಿಯಾಗಿದೆ. 2008ರಲ್ಲಿ ಅವರು ಇಲ್ಲಿಂದ ಮೊದಲ ಬಾರಿಗೆ ಗೆದ್ದಾಗ ಮತಗಳ ಅಂತರ 22,608 ಇತ್ತು. 2013ರಲ್ಲಿ 22,853 ಏರಿಕೆಯಾದರೆ, 2018ರಲ್ಲಿ 53,355 ಆಗಿತ್ತು.
ಕ್ಷೇತ್ರದಲ್ಲಿ ಶಾಲೆಗಳು, ಆಸ್ಪತ್ರೆ, ಕೌಶಲ ಅಭಿವೃದ್ಧಿ ಕೇಂದ್ರಗಳವರೆಗೆ ಕ್ಷೇತ್ರದಾದ್ಯಂತ ಜನರ ಆಕಾಂಕ್ಷೆಗಳನ್ನು ಅವರು ಪೂರೈಸಿದ್ದಾರೆ. ಶಾಸಕರ ನಿಧಿ ಮತ್ತು ಸರ್ಕಾರಿ ಯೋಜನೆಗಳ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಹೊರತುಪಡಿಸಿ, ತಮ್ಮ ಒಡೆತನದ ಕಂಪನಿಯ ಸಿಎಸ್‌ಆರ್ ನಿಧಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಮತದಾರರು ಹೇಳಿದ್ದಾರೆ.
ಸ್ಥಳೀಯರ ಅಭಿಪ್ರಾಯವೇನು?: "15 ವರ್ಷಗಳ ಜಾರ್ಜ್ ಆಳ್ವಿಕೆಯಲ್ಲಿ ಕ್ಷೇತ್ರ ಯಾವುದೇ ಅಭಿವೃದ್ಧಿ ಕಂಡಿಲ್ಲ. ಅವರ ವಿರುದ್ಧ ಪ್ರಬಲವಾದ ಆಡಳಿತ ವಿರೋಧಿ ಅಲೆಯಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದ ಬಾಣಸವಾಡಿ, ಕಮ್ಮನಹಳ್ಳಿ, ಹೆಚ್‌ಬಿಆರ್ ಬಡಾವಣೆಯಂಥ ವಸತಿ ಪ್ರದೇಶಗಳು ವಾಣಿಜ್ಯಿಕವಾಗಿ ಸ್ವಾವಲಂಬಿ ಪ್ರದೇಶಗಳಾಗಿ ಅಭಿವೃದ್ಧಿ ಹೊಂದುತ್ತಿವೆ. ದೊಡ್ಡಮಟ್ಟದ ವ್ಯಾಪಾರ ವಹಿವಾಟಿಗೆ ಈ ಕ್ಷೇತ್ರ ಸಾಕ್ಷಿಯಾಗಿದ್ದು, ನೆರೆಯ ರಾಜ್ಯಗಳಿಂದ ಕೆಲಸ ಅರಸಿ ಬರುವ ಹೆಚ್ಚಿನ ಮಂದಿ ಇಲ್ಲಿ ಆಶ್ರಯ ಪಡೆದಿದ್ದಾರೆ. ಈ ಕಾರಣಕ್ಕಾಗಿಯೇ ತಮಿಳು ಮತ್ತು ಉರ್ದು ಭಾಷಿಕರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ. ಇನ್ನುಳಿದಂತೆ ಇತ್ತ ಮುಖ ಮಾಡುವುದಿಲ್ಲ.
ಅಲ್ಲದೇ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ರಸ್ತೆ ಅವ್ಯವಸ್ಥೆ, ಚರಂಡಿ ದುರಾವಸ್ಥೆ, ಅಸಮರ್ಪಕ ಕಸ ವಿಲೇವಾರಿ, ಆಡಳಿತ ಯಂತ್ರ ಚುರುಕುಗೊಳ್ಳದಿರುವುದು, ಅಪರಾಧ ಚಟುವಟಿಕೆಗಳು ಹೆಚ್ಚಾಗಿರುವುದು, ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದ ಕ್ಷೇತ್ರವಾಗಿ ಗೋಚರಿಸುತ್ತಿದೆ. ಕುಡಿಯುವ ನೀರಿನ ಸಮಸ್ಯೆ, ಸಂಚಾರ ದಟ್ಟಣೆ ನಗರದ ಇತರೆ ಕ್ಷೇತ್ರಗಳಿಗೆ ಇರುವಂತೆ ಇಲ್ಲಿಯೂ ಇದೆ. ಇದೇ ಕಾರಣದಿಂದ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ" ಎನ್ನುವುದು ಮತದಾರರ ಅಭಿಪ್ರಾಯ.
ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಮುಂದಾದ ಬಿಜೆಪಿ ಅಭ್ಯರ್ಥಿ:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನಾಗವಾರ, ಹೆಚ್‌ಬಿಆರ್ ಬಡಾವಣೆ, ಬಾಣಸವಾಡಿ, ಕಮ್ಮನಹಳ್ಳಿ, ಕಾಚರಕನಹಳ್ಳಿ, ಕಾಡುಗೊಂಡನಹಳ್ಳಿ, ಲಿಂಗರಾಜಪುರ ಮತ್ತು ಮಾರುತಿ ಸೇವಾ ನಗರ ಸೇರಿ 8 ವಾರ್ಡ್‌ಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಕಾಂಗ್ರೆಸ್ ಸಾಂಪ್ರದಾಯಿಕ ಮತ ಬ್ಯಾಂಕ್ ಎಂದೇ ಪರಿಗಣಿಸಲಾದ ಮುಸ್ಲಿಮರು, ತೆಲುಗು, ಮಲಯಾಳಿ, ತಮಿಳು ಭಾಷಿಕರು ಪ್ರತಿ ಚುನಾವಣೆಯಲ್ಲೂ ಜಾರ್ಜ್ ಬೆನ್ನಿಗೆ ನಿಲ್ಲುತ್ತಲೇ ಬಂದಿದ್ದಾರೆ. ಬಡ, ಮಧ್ಯಮ ವರ್ಗದವರೂ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾರೆ. ಜಾರ್ಜ್ ಅಧಿಪತ್ಯ ಕೊನೆಗಾಣಿಸಬೇಕೆಂದು ಬಿಜೆಪಿಯ ಪದ್ಮನಾಭ ರೆಡ್ಡಿ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಮುಂದಾಗಿದ್ದಾರೆ. ರೆಡ್ಡಿ 2013ರ ಚುನಾವಣೆಯಲ್ಲಿ ಅವರು ಜಾರ್ಜ್ ವಿರುದ್ಧ ಸೋಲು ಕಂಡಿದ್ದರು. ಜೆಡಿಎಸ್‌ನಿಂದ ಮೊಹಮ್ಮದ್ ಮುಸ್ತಫಾ, ಎಎಪಿಯಿಂದ ಮೊಹಮ್ಮದ್ ಇಬ್ರಾಹಿಂ, ಎಸ್‌ಡಿಪಿಐಯಿಂದ ಅಬ್ದುಲ್ ಹನ್ನಾನ್ ಸೇರಿ ಒಟ್ಟು 15 ಕಲಿಗಳು ಕಣದಲ್ಲಿದ್ದರೂ ಇಲ್ಲಿ ಜಾರ್ಜ್– ರೆಡ್ಡಿ ನಡುವೆಯೇ ನೇರ ಸ್ಪರ್ಧೆಯಿದೆ.
ಮತದಾರರ ವಿವರ:ಕ್ಷೇತ್ರದಲ್ಲಿ ಒಟ್ಟು 3,52,927 ಮತದಾರರಿದ್ದಾರೆ. ಇವರಲ್ಲಿ 1,78,183 ಪುರುಷ, 1,74,734 ಮಹಿಳೆಯರು ಹಾಗೂ 60 ಮಂದಿ ತೃತೀಯ ಲಿಂಗಿಗಳಿದ್ದಾರೆ. ಮುಸ್ಲಿಂ ಹಾಗೂ ಇತರೆ ಸಮುದಾಯದ ಮತಗಳು ನಿರ್ಣಾಯಕ. ಸಂಖ್ಯಾ ಬಲ ಗಮನಿಸಿದಾಗ ಮುಸಲ್ಮಾನರು 1,20,000, ಇತರೆ ಸಮುದಾಯದ ಮತಗಳು 56,420 ರಷ್ಟಿದೆ. ಎಸ್‌ಸಿ-ಎಸ್‌ಟಿ- 50,000, ಕ್ರಿಶ್ಚಿಯನ್ – 40,000, ಕುರುಬ – 30,000, ಒಕ್ಕಲಿಗ – 20,000 ಮತಗಳಿವೆ. ರೆಡ್ಡಿ ಸಮುದಾಯದ – 10 ಸಾವಿರ ವೋಟ್ ಇದ್ದರೆ, ಲಿಂಗಾಯತರ ಸಂಖ್ಯೆ 8 ಸಾವಿರದಷ್ಟಿದೆ.
ಇದನ್ನೂ ಓದಿ:ರಾಜರಾಜೇಶ್ವರಿಯ ಕೃಪಾಶೀರ್ವಾದ ಯಾರಿಗೆ?: ಕ್ಷೇತ್ರದಲ್ಲಿ ಕೈ-ಕಮಲ-ತೆನೆ ಪಕ್ಷಗಳ ಪೈಪೋಟಿ