ಬೆಂಗಳೂರು:ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿ ತಿಂಗಳಾದ್ರೂ ಸಿಸಿಬಿ ಪೊಲೀಸರಿಗೆ ಆರು ಮಂದಿ ಆರೋಪಿಗಳ ಸುಳಿವು ಸಿಕ್ಕಿಲ್ಲ.
ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಶಿವಪ್ರಕಾಶ್, ಆದಿತ್ಯಾ ಅಳ್ವಾ, ಪ್ರಶಾಂತ್ ರಾಜು, ಅಭಿಸ್ಚಾಮಿ, ಅಶ್ವಿನ್ ಬೂಗಿ, ವಿನಯ್ ತಲೆಮರೆಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಈ ಆರೋಪಿಗಳ ಪಾತ್ರ ಬಹಳಷ್ಟಿದ್ದು, ಆರೋಪಿಗಳಾದ ಶಿವಪ್ರಕಾಶ್, ಆದಿತ್ಯಾ ಆಳ್ವಾ ನಿವಾಸಗಳ ಮಾಹಿತಿ ಸಿಸಿಬಿ ಬಳಿಯಿದೆ. ಆದರೆ ಆರೋಪಿಗಳು ವಿಳಾಸದ ಸ್ಥಳದಲ್ಲಿಲ್ಲದೆ ಬೇರೆಡೆ ತಲೆಮರೆಸಿಕೊಂಡಿದ್ದಾರೆ. ಇನ್ನು, ವಿನಯ್, ಪ್ರಶಾಂತ್ ರಾಜ್, ಅಶ್ವಿನ್ ಬೂಗಿ, ಅಭಿಸ್ವಾಮಿ ಮೂಲ ವಿಳಾಸ ಟ್ರೇಸ್ ಔಟ್ ಆಗಿಲ್ಲ. ಹೀಗಾಗಿ ಈ ನಾಲ್ವರ ಅಸಲಿ ವಿಳಾಸಗಳು ಯಾವುದು ಅನ್ನೋದೇ ಪೊಲೀಸರಿಗೆ ದೊಡ್ಡ ತಲೆನೋವು.
ಈ ನಾಲ್ವರು ಆರೋಪಿಗಳು ಡ್ರಗ್ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರಲ್ಲದೆ, ಡ್ರಗ್ ಸಪ್ಲೈ ಮಾಡ್ತಿದ್ರು ಅನ್ನೋ ಆರೋಪ ಕೇಳಿಬಂದಿದೆ. ಆದ್ರೆ ಬಂಧಿತ ಆರೋಪಿಗಳಿಗೂ ಈ ನಾಲ್ವರ ಅಡ್ರೆಸ್ ಅಥವಾ ಇವರು ಎಲ್ಲಿಂದ ಬಂದಿದ್ರು ಅನ್ನೋ ನಿಖರ ಮಾಹಿತಿ ಇಲ್ಲ. ಆರೋಪಿಗಳು, ಬಂಧಿತರನ್ನು ಬಿಟ್ಟು ಬೇರೆ ಯಾರ ಜೊತೆ ಲಿಂಕ್ ಹೊಂದಿದ್ದರು ಅನ್ನೋದ್ರ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಶೋಧ ಮುಂದುವರೆಸಿದ್ದಾರೆ.