ಕರ್ನಾಟಕ

karnataka

ETV Bharat / state

ಮಳೆ ಹಾನಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ: ಸಿಎಂ ಬೊಮ್ಮಾಯಿ - rain effects

ಮಳೆ ಹಾನಿಯ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮಳೆ ಕಡಿಮೆಯಾದ ನಂತರ ನಷ್ಟದ ವರದಿ ತರಿಸಿಕೊಂಡು ಪರಿಹಾರ ವಿತರಣೆ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

CM Basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By

Published : Jul 8, 2022, 7:30 PM IST

Updated : Jul 8, 2022, 7:50 PM IST

ಬೆಂಗಳೂರು: ಮಳೆಹಾನಿ ಪರಿಹಾರ ಕಾರ್ಯಾಚರಣೆಗಾಗಿ ಎಲ್ಲ ಜಿಲ್ಲಾಧಿಕಾರಿಗಳ ಬಳಿ ಇರುವ ಹಣ ಸೇರಿ ಒಟ್ಟು 735 ಕೋಟಿ ಹಣ ಇದ್ದು, ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮಳೆ ಕಡಿಮೆಯಾದ ನಂತರ ನಷ್ಟದ ವರದಿ ತರಿಸಿಕೊಂಡು ಪರಿಹಾರ ವಿತರಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಗೃಹ ಕಚೇರಿ ಕೃಷ್ಣಾದಲ್ಲಿ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಧಾರಾಕಾರ ಮಳೆ ಹಿನ್ನೆಲೆ ಜಿಲ್ಲಾಡಳಿತಗಳ ಜೊತೆ ವಿಡಿಯೋ ಸಂವಾದ ನಡೆಸಿದ್ದೇನೆ. ಈಗಿರುವ ಮಾಹಿತಿ ಪ್ರಕಾರ 13 ಜಿಲ್ಲೆಗಳ 13 ತಾಲೂಕುಗಳಲ್ಲಿ ಹಾನಿ ಜಾಸ್ತಿಯಾಗಿದೆ. ಜೂನ್ 1ರಿಂದ ಈವರೆಗೂ 12 ಜನರು ಸಾವನ್ನಪ್ಪಿದ್ದಾರೆ. 65 ಜಾನುವಾರುಗಳು ಮೃತಪಟ್ಟಿದೆ ಎಂದು ಮಾಹಿತಿ ನೀಡಿದರು.

ಪರಿಹಾರ ಕೊಡಲು ತೀರ್ಮಾನ: ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ವಿಡಿಯೋ ಸಂವಾದ ನಡೆಸಿದ್ದೇನೆ. ಎಲ್ಲೆಲ್ಲಿ ಭೂ ಕುಸಿತ ಸಂಭವಿಸಿದೆಯೋ ಅಲ್ಲಿರುವ ಜನರ ಸ್ಥಳಾಂತರಕ್ಕೆ ಆದೇಶ ಕೊಟ್ಟಿದ್ದೇನೆ. ಇನ್ನೂ ಕೆಲವು ಕಡೆ ಸಂಪೂರ್ಣವಾಗಿ ಭೂಕುಸಿತ ಸಂಭವಿಸಿಲ್ಲ, ರಸ್ತೆಗಳ ಮೇಲೆ ಮಣ್ಣು ಬಿದ್ದಿದೆ. ಅದನ್ನು ಸರಿಪಡಿಸಲು ಆದೇಶ ಕೊಟ್ಟಿದ್ದೇನೆ.

ಇನ್ನು ಮನೆ ಹಾನಿಯಾದ ಸಂದರ್ಭದಲ್ಲಿ ತಕ್ಷಣವೇ 10 ಸಾವಿರ ಹಣ ನೀಡುವಂತೆ ಸೂಚಿಸಿದ್ದು, ನಂತರದಲ್ಲಿ ಹಾನಿ ಎಷ್ಟು ಪ್ರಮಾಣದಲ್ಲಿ ಆಗಿದೆ ಎಂದು ಜಿಲ್ಲಾ ಪಂಚಾಯತಿಯ ಇಂಜಿನಿಯರ್​ಗಳ ಮೂಲಕ ವರದಿ ತರಿಸಿಕೊಂಡು ಈ ಹಿಂದೆ ಪರಿಹಾರ ನೀಡಿದಂತೆ ಎ, ಬಿ, ಸಿ ಮಾದರಿಯಲ್ಲಿ ಪರಿಹಾರ ಕೊಡಲು ತೀರ್ಮಾನ ಮಾಡಿದ್ದೇವೆ ಎಂದರು.

ಹಾನಿ ವರದಿಗೆಸೂಚನೆ: ಮಳೆ ಸ್ವಲ್ಪ ಕಡಿಮೆಯಾದ ನಂತರ ಬೆಳೆ ಹಾನಿ ವರದಿಗೆ ಸೂಚಿಸಿದ್ದೇನೆ. ರಾಜ್ಯ ಮತ್ತು ಕೇಂದ್ರದ ವಿಪತ್ತು ನಿರ್ವಹಣಾ ತಂಡಗಳು ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿವೆ. ರಸ್ತೆಗಳ ಹಾನಿ ಬಗ್ಗೆ ಸಹ ವರದಿಯನ್ನು ಕೊಡಲೇ ಕೊಡುವಂತೆ ಸೂಚಿಸಿದ್ದೇನೆ. ಇದರ ಜೊತೆಗೆ ವಿದ್ಯುತ್ ಕಂಬಗಳು ಮಳೆ - ಗಾಳಿಗೆ ಬಿದ್ದಿರುತ್ತವೆ. ಕೂಡಲೇ ಅವುಗಳನ್ನು ಸರಿಪಡಿಸುವಂತೆ ಹೆಸ್ಕಾಂಗೆ ಸೂಚನೆ ಕೊಟ್ಟಿದ್ದೇನೆ ಎಂದರು.

ಕಡಲ ಕೊರೆತಕ್ಕೆ ಶಾಶ್ವತ ಪರಿಹಾರ: ಕಡಲ ಕೊರೆತ ಕೂಡ ಸಂಭವಿಸಿದ್ದು, ಎರಡು ರೀತಿಯ ಪರಿಹಾರಕ್ಕೆ ಸೂಚಿಸಿದ್ದೇನೆ. ಕಡಲ ಕೊರೆತದಿಂದ ಕೆಲವು ಕಡೆ ರಸ್ತೆಗಳ ಕೊರತೆಯೂ ಆಗಿದೆ ಅದನ್ನು ಸರಿಪಡಿಸಲು ತಿಳಿಸಿದ್ದೇನೆ ಮತ್ತು ಕಡಲ ಕೊರತಕ್ಕೆ ಶಾಶ್ವತ ಪರಿಹಾರಕ್ಕೆ ವಿಶೇಷವಾದ ಎಸ್ಟಿಮೇಟ್ ಮಾಡಿ ಕಳುಹಿಸಿ ಎಂದು ಸೂಚನೆ ಕೊಟ್ಟಿದ್ದೇನೆ. ಈ ಬಾರಿ ಬೇರೆ ತಂತ್ರಜ್ಞಾನ ಬಳಕೆ ಮಾಡಲಿದ್ದೇವೆ. ಶಾಶ್ವತವಾಗಿ ಈ ಸಮಸ್ಯೆ ಪರಿಹಾರಕ್ಕೆ ನಿರ್ಧರಿಸಿದ್ದೇವೆ ಎಂದರು.

ಗ್ರಾಮ ಮಟ್ಟದ ಕಾರ್ಯಪಡೆ: ಮಳೆಹಾನಿ ಪರಿಹಾರ ಕಾರ್ಯಕ್ಕೆ ಗ್ರಾಮ ಮಟ್ಟದ ಕಾರ್ಯಪಡೆ ರಚಿಸಲು ಸೂಚನೆ ಕೊಟ್ಟಿದ್ದೇನೆ. ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸೇರಿ ಸಂಬಂಧಿಸಿದ ಇಲಾಖೆಗಳು ಸಮನ್ವಯತೆಯಿಂದ ಕಾರ್ಯಪಡೆಗೆ ಸಹಕಾರ ನೀಡಿ ಕೆಲಸ ಮಾಡುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದರು. ಇನ್ನೂ ಕಳೆದ ಬಾರಿಯ ಮಳೆಯಿಂದ ಹಾನಿಗೊಳಗಾದ ಮನೆಗಳ ದುರಸ್ತಿ, ಮರುನಿರ್ಮಾಣಕ್ಕ ಯಾವುದೇ ತೊಂದರೆ ಆಗಿಲ್ಲ ಎಂದರು.

ಜಲಾಶಯಗಳ ನಡುವೆ ಸಮನ್ವಯತೆ:ಸದ್ಯಕ್ಕೆ ಮಹಾರಾಷ್ಟ್ರದ ಕೊಯ್ನಾ ಸೇರಿದಂತೆ ಇತರೆ ಜಲಾಶಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಬಂದಿಲ್ಲ. ನಮ್ಮ ಘಟಪ್ರಭಾ, ಮಲಪ್ರಭಾ, ಹಿಡಕಲ್ ಇತ್ಯಾದಿಗಳಲ್ಲಿ ಶೇಕಡ 50ರಷ್ಟು ನೀರು ತುಂಬಿದ್ದು, ಇನ್ನೂ ಐವತ್ತು ಪರ್ಸೆಂಟ್ ತುಂಬಿಲ್ಲ.

ಆದರೂ ಅಗತ್ಯ ನಿಗಾ ವಹಿಸುವಂತೆ ನಾನು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಎಲ್ಲ ಜಲಾಶಯಗಳ ಡ್ಯಾಮ್ ಇಂಜಿನಿಯರ್​ಗಳ ಸಂಪರ್ಕದಲ್ಲಿ ಇರಬೇಕೆಂದು ತಿಳಿಸಿದ್ದೇನೆ. ಅಂತಾರಾಜ್ಯ ಜಲಾಶಯ ಸಮಿತಿ ಇದೆ. ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಪರಸ್ಪರ ಸಮನ್ವಯತೆಯಿಂದ ಇದ್ದು, ಪರಿಸ್ಥಿತಿ ಮೇಲೆ ನಿಗಾ ಇರಿಸಿರಲಿದ್ದಾರೆ ಎಂದರು‌.

ಇದನ್ನೂ ಓದಿ:ಆರಿದ್ರಾ ಮಳೆಗೆ ತಂಪಾದ ಬಿಸಿಲನಗರಿ: ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ

Last Updated : Jul 8, 2022, 7:50 PM IST

ABOUT THE AUTHOR

...view details