ಬೆಂಗಳೂರು: 2018ರ ಮೇ 15 ರಂದು ವಿಧಾನಸಭೆ ಚುನಾವಣೆ ನಡೆದ ದಿನದಿಂದಲೂ ರಾಜ್ಯ ರಾಜಕಾರಣ ಒಂದಲ್ಲೊಂದು ರೀತಿಯಲ್ಲಿ ರಾಷ್ಟ್ರಮಟ್ಟದವರೆಗೂ ಸುದ್ದಿಯಾಗಿತ್ತು. ಆದ್ರೆ, ಅಂದಿನಿಂದಲೂ ಒಂದಿಲ್ಲೊಂದು ರೀತಿಯ ಕಂಟಕಗಳನ್ನು ಎದುರಿಸಿಕೊಂಡೇ ಬರುತ್ತಿದೆ.
ರಾಜ್ಯದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗಲಿಲ್ಲ. ಆದರೆ, ಅತಿ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ ಸರ್ಕಾರ ರಚನೆ ಮಾಡಲು ಮುಂದಾಯಿತು. ಮೇ 17 ರಂದು ಬೆಳಗ್ಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಸರ್ಕಾರ ರಚಿಸುವಂತೆ ಬಿಜೆಪಿಗೆ ಆಹ್ವಾನ ನೀಡಿದ್ದ ರಾಜ್ಯಪಾಲ ವಿ.ಆರ್. ವಾಲಾ ಅವರ ನಿರ್ಧಾರ ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ವಿಶ್ವಾಸಮತ ಸಾಬೀತುಪಡಿಸುವವರೆಗೂ ಯಡಿಯೂರಪ್ಪ ಯಾವುದೇ ಆಡಳಿತಾತ್ಮಕ ತೀರ್ಮಾನ ತೆಗೆದುಕೊಳ್ಳಬಾರದು ಎಂದು ತಿಳಿಸಿತ್ತು.
ಬಹುಮತವಿಲ್ಲದ ಕಾರಣ ಕಾಂಗ್ರೆಸ್-ಜೆಡಿಎಸ್ ಪಕ್ಷ ಸುಪ್ರೀಂ ಕೋರ್ಟ್ ಮೊರೆ ಹೋಯಿತು. ವಿಚಾರಣೆ ನಡೆಸಿದ ಕೋರ್ಟ್, ಮೇ 19 ರಂದು ಸಂಜೆ 4 ಗಂಟೆ ವೇಳೆಗೆ ವಿಶ್ವಾಸಮತ ಸಾಬೀತುಪಡಿಸಬೇಕೆಂದು ಆದೇಶಿಸಿತ್ತು. ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಎಲ್ಲ ಶಾಸಕರು ಪ್ರಮಾಣ ವಚನ ಸ್ವೀಕರಿಸಬೇಕೆಂದು ಸೂಚಿಸಿತ್ತು.
ಹಾಗಾಗಿ, ರಾಜ್ಯಪಾಲರು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ್ದರು.
ಬೋಪಯ್ಯ ಅವರ ನೇಮಕವನ್ನು ಕಾಂಗ್ರೆಸ್ ವಿರೋಧಿಸಿತ್ತು. ಬಹುಮತವಿಲ್ಲದೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಮೇ 19 ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಬಗ್ಗೆ ಮಾತನಾಡಿ ನಂತರ ವಾಪಸ್ ಪಡೆದು ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಿದರು. ಜೆಡಿಎಸ್ ಸರ್ಕಾರ ರಚನೆಗೆ ಕಾಂಗ್ರೆಸ್ ಪೂರ್ಣ ಬೆಂಬಲ ಸೂಚಿಸಿ ಮೇ 15 ರಂದೇ ಮೈತ್ರಿ ಸರ್ಕಾರ ರಚನೆ ಸಂಬಂಧ ರಾಜ್ಯಪಾಲರಿಗೆ ಉಭಯ ಪಕ್ಷದ ಮುಖಂಡರು ಮನವಿ ಸಲ್ಲಿಸಿದ್ದರು.
ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ ನಂತರ ಕುಮಾರಸ್ವಾಮಿ ಅವರು 15 ದಿನಗಳಲ್ಲಿ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಆದೇಶಿಸಿ ಮೈತ್ರಿ ಸರ್ಕಾರ ರಚನೆಗೆ ಅವಕಾಶ ನೀಡಿದರು. ಹಾಗಾಗಿ, ಹೆಚ್.ಡಿ.ಕುಮಾರಸ್ವಾಮಿ ಅವರು 2018 ಮೇ 23 ರಂದು ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಡಾ.ಜಿ. ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಿದರು.
ಈ ಸಮಾರಂಭಕ್ಕೆ ರಾಷ್ಟ್ರನಾಯಕರು ಆಗಮಿಸಿದ್ದು ವಿಶೇಷವಾಗಿತ್ತು. ಆ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂತು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ಸಂಪುಟ ರಚನೆಯಾಯಿತು. ಜೂನ್ 6 ರಂದು ಕಾಂಗ್ರೆಸ್ ನಿಂದ 15 ಹಾಗೂ ಜೆಡಿಎಸ್ ನಿಂದ 10 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಉಳಿದ ಸಚಿವ ಸ್ಥಾನ ತುಂಬುವಷ್ಟರಲ್ಲೇ ಮೈತ್ರಿಯಲ್ಲಿ ಬಿರುಕು ಮೂಡಿತ್ತು.
ರಾಜ್ಯ ರಾಜಕಾರಣದ ದಿಢೀರ್ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಭಾವುಟ ಹಾರಿಸಿರುವ 13 ಶಾಸಕರು ಸರ್ಕಾರಕ್ಕೆ ಮುಳುವಾಗಿದ್ದು, ಮತ್ತೊಬ್ಬರು ರಾಜೀನಾಮೆ ನೀಡುವ ಮೂಲಕ ರಾಜೀನಾಮೆ ನೀಡಿದವರ ಸಂಖ್ಯೆ 14 ಕ್ಕೆ ಏರಿದೆ.
ಮತ್ತೊಂದೆಡೆ ರಾಜೀನಾಮೆ ನೀಡಿರುವ ಶಾಸಕರ ಈ ನಿರ್ಧಾರಕ್ಕೆ ಕಾರಣಗಳೇನೆಂಬುದು ಸಹ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಆರಂಭಗೊಂಡ ರಮೇಶ್ ಜಾರಕಿಹೊಳಿ ರಾಜಕೀಯ ವೈರುಧ್ಯ 14 ಶಾಸಕರ ರಾಜೀನಾಮೆವರೆಗೂ ಬಂದಿದ್ದು, ಈ ಅವಧಿಯ ಬೆಳವಣಿಗೆಗಳು ಶಾಸಕರ ರಾಜೀನಾಮೆಗೆ ಪ್ರಮುಖ ಕಾರಣವಾಗಿದೆ.
ಕಾರಣಗಳೇನು?
ಪ್ರಮುಖವಾಗಿ ಬಂಡಾಯ ಶಾಸಕರ ನಾಯಕತ್ವವಹಿಸಿದ್ದ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಗೆ ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರದಲ್ಲಿ ರಮೇಶ್ ವಿರುದ್ಧ ನಿಂತ ಸಚಿವ ಡಿಕೆ ಶಿವಕುಮಾರ್ ಮೊದಲ ಕಾರಣ ಎನ್ನಲಾಗಿದೆ. ಅಲ್ಲದೇ ಇದೇ ವೇಳೆ ಸಚಿವ ಸ್ಥಾನದಿಂದ ಕಿತ್ತು ಹಾಕಿ ಅವಮಾನ ಮಾಡಿದ್ದು, ಪಿಎಲ್ಡಿಪಿ ಬ್ಯಾಂಕ್ ವಿಚಾರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮೇಲುಗೈ ಸಾಧಿಸಿದ್ದು ಕೂಡ ರಮೇಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ನಿಂದ ದೂರ ಮಾಡಿತ್ತು.
ರಾಜೀನಾಮೆ ನಡೆಯಲ್ಲಿ ಅಚ್ಚರಿ ಮೂಡಿಸಿದ್ದ ಕಾಂಗ್ರೆಸ್ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ ಅವರಿಗೆ ರಾಜೀನಾಮೆಗೆ ಪ್ರಮುಖ ಕಾರಣ ಬೆಂಗಳೂರಿನಲ್ಲಿ ಕಿರಿಯರಿಗೆ ಮಣೆ ಹಾಕಿ ಸಚಿವ ಸ್ಥಾನ ನಿರಾಕರಿಸಿದ್ದು.ಈ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇಷ್ಟಾದರು ಸಿದ್ದರಾಮಯ್ಯ ಹಾಗೂ ಪರಮೇಶ್ವರ್, ದಿನೇಶ್ ಗುಂಡೂರಾವ್ ಅವರು ನಿರ್ಲಕ್ಷ್ಯ ಮಾಡಿದ್ದರು. ಅಸಮಾಧಾನವಾಗಿದ್ದರೂ ಮನವೊಲಿಸಲು ಹೈಕಮಾಂಡ್ ಯಾವುದೇ ಪ್ರಯತ್ನ ಮಾಡಿಲ್ಲ. ಇದರಿಂದ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಬಿಜೆಪಿಯಲ್ಲಿ ನನಗೆ ಮತ್ತು ಮಗಳಿಗೆ ಭವಿಷ್ಯ ಇದೆ ಎನ್ನುವ ಲೆಕ್ಕಾಚಾರ ಹಾಗೂ ಸಿದ್ದರಾಮಯ್ಯ ಆ್ಯಂಡ್ ಟೀಂಗೆ ಬಿಸಿ ಮುಟ್ಟಿಸಲು ರಾಜೀನಾಮೆ ನೀಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷರಾಗಿದ್ದ ಹೆಚ್ ವಿಶ್ವನಾಥ್ ರಾಜೀನಾಮೆ ಜೆಡಿಎಸ್ ವರಿಷ್ಠರಿಗೆ ಶಾಕ್ ನೀಡಿದೆ. ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿ ರಾಜೀನಾಮೆಗೆ ನಿರ್ಧಾರ ಮಾಡಿರುವ ವಿಶ್ವನಾಥ್, ಸಮನ್ವಯ ಸಮಿತಿಯಿಂದ ದೂರ ಇಟ್ಟಿದ್ದಕ್ಕೆ ಅಸಮಾಧಾನಗೊಂಡಿದ್ದರು. ಪಕ್ಷದ ಅಧ್ಯಕ್ಷರಾದರೂ ಪದೇ ಪದೇ ಅವರಿಗೆ ಅವಮಾನ ಎದುರಾಗಿತ್ತು. ಇದರಿಂದ ಬೇಸತ್ತು ಪದತ್ಯಾಗ ನಿರ್ಧಾರ ಮಾಡಿದ್ದರು. ಅಲ್ಲದೇ ತಮ್ಮ ಮತ್ತು ಮಗನ ಭವಿಷ್ಯಕ್ಕಾಗಿ ಬಿಜೆಪಿ ಸೇರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಮೂರು ಬಾರಿ ಸಂಪುಟ ವಿಸ್ತರಣೆ ಆದರೂ ಸಚಿವ ಸ್ಥಾನ ಆಸೆ ಹೊಂದಿದ್ದ ಬಿ ಸಿ ಪಾಟೀಲ್ ಅವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ದೋಸ್ತಿಗಳು ಮಂತ್ರಿಗಿರಿ ನೀಡದ ಕಾರಣ ಬಿ.ಸಿ ಪಾಟೀಲ್ ರಾಜೀನಾಮೆ ನಿರ್ಧಾರಕ್ಕೆ ಮುಂದಾಗಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್ನಿಂದ ಒಂದು ಕಾಲು ಹೊರಗೇ ಇಟ್ಟಿರುವ ಬಿ ಸಿ ಪಾಟೀಲ್ ಅವರಿಗೆ ನಿಗಮ ಮಂಡಳಿಯಲ್ಲೂ ಯಾವುದೇ ಸ್ಥಾನಮಾನ ಸಿಕ್ಕಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಅವರು, ರಾಜೀನಾಮೆ ನೀಡಿದ್ದಾರೆ.