ಕರ್ನಾಟಕ

karnataka

ETV Bharat / state

ಗೆಲ್ಲುವ ಕಡೆ ಒಂದೇ ಅಭ್ಯರ್ಥಿ, ಬೇರೆ ಕಡೆ ಇಬ್ಬರು ಅಭ್ಯರ್ಥಿಗಳ ಬಗ್ಗೆ ಹೇಳಿದ್ದೇನೆ : ರಾಮಲಿಂಗರೆಡ್ಡಿ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಕಾಂಗ್ರೆಸ್​ ಸ್ಕ್ರೀನಿಂಗ್ ಕಮಿಟಿ ಸಭೆ - ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ತಿಳಿಸಿದ್ದೇವೆ- ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಮಾಹಿತಿ

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ

By

Published : Feb 12, 2023, 7:56 PM IST

ಬೆಂಗಳೂರು: ಪ್ರತಿ ಬಾರಿ ದೆಹಲಿಯಲ್ಲಿ ನಡೆಯುತ್ತಿದ್ದ ಸ್ಕ್ರೀನಿಂಗ್ ಕಮಿಟಿ ಸಭೆ ಈ ಬಾರಿ ಬೆಂಗಳೂರಿನಲ್ಲಿ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಅವರು ತಿಳಿಸಿದ್ದಾರೆ. ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷರ ಜೊತೆ ಪ್ರತ್ಯೇಕ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷರ ಜೊತೆ ಮೀಟಿಂಗ್ ಇತ್ತು. ಪ್ರತಿ ಬಾರಿ ದೆಹಲಿಯಲ್ಲಿ ಸಭೆ ನಡೀತಾ ಇತ್ತು. ಈ ಬಾರಿ ಬೆಂಗಳೂರಿಗೆ ಬಂದಿದ್ದಾರೆ. ಒಬ್ಬೊಬ್ಬರನ್ನು ಕರೆದು ಅಭಿಪ್ರಾಯ ಸಂಗ್ರಹ ಮಾಡ್ತಾ ಇದ್ದಾರೆ. ನನ್ನ ವಲಯದ ಮಾಹಿತಿ ಸಂಗ್ರಹ ಮಾಡಿದ್ದಾರೆ. ಗೆಲ್ಲುವ ಕಡೆ ಒಂದೇ ಅಭ್ಯರ್ಥಿ, ಬೇರೆ ಕಡೆ ಇಬ್ಬರು ಅಭ್ಯರ್ಥಿಗಳ ಬಗ್ಗೆ ಹೇಳಿದ್ದೇನೆ. ಇದೇ ರೀತಿಯಲ್ಲಿ ಬೇರೆ ವಲಯಗಳ ಮಾಹಿತಿ ಪಡೀತಾ ಇದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಪಕ್ಷದ ಹಿರಿಯರು ಕುಳಿತು ಟಿಕೆಟ್ ಫೈನಲ್ ಮಾಡ್ತಾರೆ ಎಂದರು.

ನೆರೆ, ಬರ ಬಂದಾಗ ರಾಜ್ಯಕ್ಕೆ ಬರ್ಲಿಲ್ಲ, ಈಗ ಬರ್ತಾ ಇದ್ದಾರೆ:ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್​​ ಶಾ ಭೇಟಿ ವಿಚಾರ ಮಾತನಾಡಿ, ಚುನಾವಣೆ ಇದ್ದಾಗ ವಾರಕ್ಕೆ ಒಂದು ಬಾರಿ ರಾಜ್ಯಗಳಿಗೆ ಭೇಟಿ ನೀಡ್ತಾರೆ. ನಾನು ಒಂದು‌ ಸಲಹೆ ಕೊಡ್ತೇನೆ, ಇಲ್ಲೇ ವಾಸ್ತವ್ಯ ಮಾಡಲಿ. ರಾಜ್ಯದ ಸಮಸ್ಯೆ ಇದ್ದಾಗ ಮೋದಿ ಗಮನಹರಿಸಲಿಲ್ಲ. ನೆರೆ, ಬರ ಬಂದಾಗ ಮೋದಿ ಬರಲಿಲ್ಲ. ಈಗ ಚುನಾವಣೆ ಇದೆ ಬರ್ತಾ ಇದ್ದಾರೆ. ಆಮೇಲೆ ಈ ಕಡೆ ತಲೆ ಹಾಕಿ‌ ಕೂಡ ಮಲಗಲ್ಲ. ಭ್ರಷ್ಟಾಚಾರದ ಬಗ್ಗೆ ಮೋದಿ ಮಾತನಾಡಲ್ಲ. ಜನರು ಬೆಲೆ ಏರಿಕೆಯಿಂದ ಕಷ್ಟದಲ್ಲಿ ಇದ್ದಾರೆ. ಭ್ರಷ್ಟಾಚಾರಕ್ಕೆ ಖ್ಯಾತಿ ಪಡೆದವರ ಬೆನ್ನುತಟ್ಟಿ ಹೋಗ್ತಾರೆ ಎಂದು ರಾಮಲಿಂಗರೆಡ್ಡಿ ಆರೋಪಿಸಿದರು.

ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಇಲ್ಲ:ತೆಲಂಗಾಣ, ಹಿಮಾಚಲ, ಬಂಗಾಳ ಎಲ್ಲ ಕಡೆ ಮೋದಿ ಹೋಗಿದ್ರು. ಅಲ್ಲಿ ಜನರು ಮತ ಹಾಕಿಬಿಟ್ರಾ..? ಸುಳ್ಳು ಹೇಳಿ ಅಧಿಕಾರಕ್ಕೆ ಮೋದಿ ಬಂದ್ರು. ಬೆಂಗಳೂರಿಗೆ ಬೊಮ್ಮಾಯಿ‌ ಏನು ಕೊಡುಗೆ ಕೊಟ್ಟಿದ್ದಾರೆ? ಒಂದೇ ಒಂದು ಯೋಜನೆ ತೋರಿಸಲಿ. ನಾವು ಮಾಡಿದ ಯೋಜನೆಯನ್ನು ಈಗ ಉದ್ಘಾಟನೆ ‌ಮಾಡ್ತಾ ಇದ್ದಾರೆ. ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಇಲ್ಲ. ಖಾಲಿ‌ ಕುರ್ಚಿ ಮುಂದೆ ಭಾಷಣ ಮಾಡಿ ಬರ್ತಾ ಇದ್ರು. ಹಾಗಾಗಿ ಮೋದಿ, ಅಮಿತ್​ ಶಾ ಅವರನ್ನು ಕರೆಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ರಾಮಲಿಂಗರೆಡ್ಡಿ ವಾಗ್ದಾಳಿ ನಡೆಸಿದರು.

ನಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಆದವರು: ರಾಣಿ ಅಬ್ಬಕ್ಕ ದೇವಿ ಬೆಂಬಲಿಗರಿಗೆ ಮತ ಹಾಕ್ತಿರಾ? ಟಿಪ್ಪು ಬೆಂಬಲಿಗರಿಗೆ ಮತ ಹಾಕುತ್ತಿರಾ? ಎಂಬ ಅಮಿತ್ ಶಾ ಹೇಳಿಕೆ ವಿಚಾರ ಕುರಿತು ಪ್ರಸ್ತಾಪ ಮಾಡಿದ ಅವರು, ನಿಜವಾದ ರಾಣಿ ಅಬ್ಬಕ್ಕನ ಬೆಂಬಲಿಗರು ನಾವು. ಯಾಕೆ ಅಂದರೆ ನಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಆದವರು. ಇವರು ಬಿಜೆಪಿ ಅವರು ಹೋರಾಟದಲ್ಲಿ ಭಾಗವಹಿಸಿದ್ದಾರಾ? ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದವರು. ಬಿಜೆಪಿ ಅವರ ಪೂರ್ವಜರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ರಾಮಲಿಂಗರೆಡ್ಡಿ ತಿರುಗೇಟು ನೀಡಿದರು.

ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್, ನಿನ್ನೆ ಸಂಜೆ ಬೆಂಗಳೂರಿಗೆ ಆಗಮಿಸಿದ್ದು ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಈಶ್ವರ್ ಖಂಡ್ರೆ ಹಾಗೂ ರಾಮಲಿಂಗ ರೆಡ್ಡಿ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಮರ್ಥ ಅಭ್ಯರ್ಥಿಯ ಮಾಹಿತಿಯನ್ನು ಪಡೆದು ಪಟ್ಟಿ ಮಾಡಿಕೊಂಡಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜತೆಯೂ ಸಭೆ: ಮೂರು ಕಾರ್ಯಾಧ್ಯಕ್ಷರು ತಮ್ಮೊಂದಿಗೆ ಪ್ರತ್ಯೇಕವಾಗಿ ಕರೆಸಿ ಸಭೆ ನಡೆಸಿದ ಸಂದರ್ಭ ಗೆಲ್ಲಬಹುದಾದ ಅಭ್ಯರ್ಥಿಯ ಹೆಸರನ್ನು ಸೂಚಿಸಿದ್ದಾರೆ. ಇನ್ನಿಬ್ಬರು ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಹಾಗೂ ಧ್ರುವ ನಾರಾಯಣ ಜೊತೆ ನಾಳೆ ಸಭೆ ನಡೆಸುವ ಮೋಹನ್ ಪ್ರಕಾಶ್​ ಅವರು ಅಂತಿಮವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜತೆಯೂ ಸಭೆ ನಡೆಸಲಿದ್ದಾರೆ. ಅಂತಿಮವಾಗಿ ರಾಜ್ಯ ಕಾಂಗ್ರೆಸ್ ನಾಯಕರ ಒಟ್ಟಾರೆ ಅಭಿಪ್ರಾಯವನ್ನು ಸಂಗ್ರಹಿಸಿ ಪಟ್ಟಿ ಮಾಡಿಕೊಂಡು ಹೈಕಮಾಂಡ್ ನಾಯಕರಿಗೆ ತಲುಪಿಸಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಈಗಾಗಲೇ ಹೈಕಮಾಂಡ್​ಗೆ ತಮ್ಮ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ. ತಮ್ಮದೇ ಆದ ಮೂಲಗಳಿಂದ ಅವರು ಒಂದು ಪ್ರತ್ಯೇಕ ಸರ್ವೇ ಮಾಡಿಸಿದ್ದು, ಇದರಲ್ಲಿ ಗೆಲ್ಲಬಹುದಾದ ಅಭ್ಯರ್ಥಿಗಳ ಪಟ್ಟಿಯನ್ನು ನೀಡಿದ್ದಾರೆ. ಇನ್ನೂ ಒಂದೆರಡು ಸುತ್ತಿನ ಸಭೆಗಳನ್ನು ನಡೆಸಿದ ಬಳಿಕ ಅಂತಿಮವಾಗಿ ಒಂದು ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್ ನಾಯಕರು ಬಿಡುಗಡೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಯಾವುದೇ ಕಾರಣಕ್ಕೂ ಬಂಡಾಯ ಏಳುವಂತಿಲ್ಲ: ಹೈಕಮಾಂಡ್ ಬಿಡುಗಡೆ ಮಾಡುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾವುದೇ ಹೆಸರು ಸೂಚಿಸಲ್ಪಟ್ಟರೂ ಆ ಕ್ಷೇತ್ರದ ಇತರೆ ಆಕಾಂಕ್ಷಿಗಳು ಅವರನ್ನು ಬೆಂಬಲಿಸಬೇಕು. ಯಾವುದೇ ಕಾರಣಕ್ಕೂ ಬಂಡಾಯ ಏಳುವಂತಿಲ್ಲ ಎಂದು ಸೂಚಿಸಲಾಗುತ್ತದೆ. ಕಳೆದ ತಿಂಗಳು ಸಂಕ್ರಾಂತಿ ಹೊತ್ತಿಗೆ ಮೊದಲ ಪಟ್ಟಿಯನ್ನು ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಬೇಕಿತ್ತು. ಆದರೆ ಅದು ಮುಂದೆ ಹೋಗಿದ್ದು, ಫೆಬ್ರವರಿ ಮೊದಲ ವಾರದಲ್ಲಿ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಆದರೆ, ಇದೀಗ ನಡೆಯುತ್ತಿರುವ ವಿಳಂಬ ಗಮನಿಸಿದರೆ ಮೊದಲ ಪಟ್ಟಿಗೆ ಮಾರ್ಚ್​ ತಿಂಗಳ ಮಧ್ಯದವರೆಗೂ ಮುಹೂರ್ತ ಕೂಡಿ ಬರುವುದು ಅನುಮಾನ ಎನ್ನಲಾಗುತ್ತಿದೆ.

ಓದಿ :ಟಿಕೆಟ್ ಹಂಚಿಕೆ ಸಂಬಂಧ ಸ್ಕ್ರೀನಿಂಗ್ ಕಮಿಟಿ ಸಭೆ: ಕಾಂಗ್ರೆಸ್ ನಾಯಕರ ಪ್ರತ್ಯೇಕ ಸಮಾಲೋಚನೆ

ABOUT THE AUTHOR

...view details