ರೋಟರಿ ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿ ತರೂರ್ ಬೆಂಗಳೂರು : ಭಾರತ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ದೇಶಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆದಿದೆ. ಈ ವಿಚಾರದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿಕೆ ಸರಿಯಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಸ್ಪಷ್ಟಪಡಿಸಿದ್ದಾರೆ.
ರೋಟರಿ ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಈಗ ಸ್ವತಂತ್ರವಾಗಿ ನಿರ್ಣಯ ಕೈಗೊಳ್ಳುವ ರಾಷ್ಟ್ರವಾಗಿದೆ, ದೇಶದ ಸ್ವಾತಂತ್ರ್ಯಕ್ಕೆ ಇದು ಅತಿ ಮುಖ್ಯ ನೀತಿಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ನಮ್ಮ ನಿರ್ಧಾರವನ್ನು ಸ್ವತಂತ್ರವಾಗಿಯೇ ಕೈಗೊಳ್ಳಬೇಕು ಎಂದರು.
ಹಿಂದೆ ಶೀತಲ ಸಮರದ ವೇಳೆ ಜವಾಹರ್ ಲಾಲ್ ನೆಹರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಬಣ ಸೇರುವುದನ್ನು ತಿರಸ್ಕರಿಸಿದ್ದರು. ತಟಸ್ಥರಾಗಿ ಉಳಿಯುವ ನಿರ್ಧಾರ ಕೈಗೊಂಡಿದ್ದರು, ಕಳೆದ 200 ವರ್ಷಗಳಿಂದ ವಿದೇಶಗಳ ನಿರ್ಧಾರದ ಮೇಲೆ ನಮ್ಮ ದೇಶದ ನಿರ್ಧಾರ ಅವಲಂಬನೆಯಾಗಬೇಕಿತ್ತು. ಆದರೆ, ಈಗ ನಾವು ನಮ್ಮ ದೇಶದ ಬಗ್ಗೆ ಸ್ವಂತ ನಿರ್ಧಾರ ಕೈಗೊಳ್ಳುತ್ತಿದ್ದೇವೆ, ಆ ಮಟ್ಟಕ್ಕೆ ಬೆಳೆದಿದ್ದೇವೆ. ಈ ವಿಚಾರದಲ್ಲಿ ಪುಟಿನ್ ಹೇಳಿದ್ದು ನಿಜವಿದೆ ಎಂದರು.
ಇದನ್ನೂ ಓದಿ :' ಇದು ಜನರ ಜಿ20, ಭಾರತದ ರಾಜತಾಂತ್ರಿಕ ಗೆಲುವು ' : ಕಾಂಗ್ರೆಸ್ ಸಂಸದ ಶಶಿ ತರೂರ್ ಮೆಚ್ಚುಗೆ
ನಿನ್ನೆ ಶಶಿ ತರೂರ್ ಅವರ ಇಂಗ್ಲಿಷ್ ಕೃತಿ 'ವೈ ಐ ಆ್ಯಮ್ ಎ ಹಿಂದೂ' ಕೃತಿಯ ಕನ್ನಡ ಅವತರಣಿಕೆ ಪ್ರೊ.ಕೆ. ಈ ರಾಧಾಕೃಷ್ಣ ಅನುವಾದಿತ 'ನಾನು ಯಾಕೆ ಹಿಂದೂ' ಕೃತಿ ಬಿಡುಗಡೆ ಮಾಡಲಾಯಿತು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಶಿ ತರೂರ್, "ನನ್ನ ಸತ್ಯವನ್ನು ನೀವು ಗೌರವಿಸಿ. ನಿಮ್ಮ ಸತ್ಯವನ್ನು ನಾವು ಗೌರವಿಸುತ್ತೇವೆ ಎನ್ನುವುದೇ ಹಿಂದುತ್ವ. ಹಿಂದೂ ಧರ್ಮದಲ್ಲಿ ದೇವರು ನಿರ್ಗುಣ ತತ್ವದ ನಿರಾಕಾರಣಿ, ಅವನಿಗೆ ಹುಟ್ಟು - ಸಾವು ಹಾಗೂ ಆಕಾರ ಇಲ್ಲ. ಆತ ನಿರ್ಮೋಹಿ, ಆಸೆ, ಆಕಾಂಕ್ಷೆ, ಮೋಕ್ಷ ಯಾವುದೂ ಇಲ್ಲ. ಆತ ಎಲ್ಲೆಡೆಯೂ ಆವರಿಸಿರುವ ಸರ್ವಾಂತರ್ಯಾಮಿ. ಈ ವಿಚಾರ ಬರಿ ಹಿಂದೂ ಧರ್ಮದಲ್ಲಿ ಮಾತ್ರವಲ್ಲ, ಇಸ್ಲಾಂ ಧರ್ಮದಲ್ಲಿಯೂ ಇದೆ. ಹಾಗಾದರೆ ಹಿಂದೂ ಯಾರು? ಹಿಂದುತ್ವ ಎಲ್ಲಿದೆ?" ಎಂದು ಪ್ರಶ್ನಿಸಿದರು.
ಇದನ್ನೂ ಓದಿ :'ಎಂಪವರಿಂಗ್ ಇಂಡಿಯಾ' ಪುಸ್ತಕ ಲೋಕಾರ್ಪಣೆಗೊಳಿಸಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ
ಇನ್ನು ಕೆಲವರು ಗರ್ವದಿಂದ ನಾನೊಬ್ಬ ಹಿಂದೂ ಎನ್ನುತ್ತಾರೆ. ಹಿಂದೂ ಎಂದರೆ ವಿದೇಶಿಗರಿಗೆ ಗೊತ್ತಾಗುತ್ತಾ?, ಅವರೆಲ್ಲ ನಮ್ಮನ್ನು ಇಂಡಿಯನ್ಸ್ ಎಂದು ಕರೆಯುತ್ತಾರೆ. ಇಂಡಿಯನ್ಸ್ ಯಾರು?. ಸಿಂಧೂಯಿಂದ ಇಂಡಸ್ ವ್ಯಾಲಿ ಆಗಿ ಇಂಡಿಯನ್ ಆಗಿದ್ದೇವೆ. ಆದರೆ, ಆಡಳಿತ ಪಕ್ಷದ ನಾಯಕರು ಇಂಡಿಯಾ ಪದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದರು.
ಇದನ್ನೂ ಓದಿ :ಶಶಿ ತರೂರ್ ಅವರ ' ನಾನು ಯಾಕೆ ಹಿಂದೂ ' ಕನ್ನಡ ಅನುವಾದಿತ ಕೃತಿ ಬಿಡುಗಡೆ