ಕರ್ನಾಟಕ

karnataka

ETV Bharat / state

ಪುಲಕೇಶಿನಗರದಲ್ಲಿ ಅಖಂಡ ಬಲಕ್ಕೆ ಸಂಪತ್ ಹಾಕ್ತಾರಾ ಬ್ರೇಕ್? ಠೇವಣಿ ಹಂತ ದಾಟುತ್ತಾ ಬಿಜೆಪಿ? - ಒಬ್ಬರೇ ಅಭ್ಯರ್ಥಿಗಳಿರುವ ಹೆಸರು

ಗಲಾಟೆ ಮತ್ತು ಗಲಭೆಯಿಂದ ದೇಶಾದ್ಯಂತ ಸುದ್ದಿಯಾಗಿದ್ದ ಪುಲಕೇಶಿನಗರ ಮತಕ್ಷೇತ್ರ ಇದೀಗ ಚುನಾವಣಾ ಕಣವಾಗಿ ಮಾರ್ಪಟ್ಟಿದೆ. ಮೂರು ಪಕ್ಷಗಳು ಈಗಾಗಲೇ ಪರೋಕ್ಷವಾಗಿ ಮತಬೇಟೆ ಆರಂಭಿಸಿದ್ದು ಕ್ಷೇತ್ರ ಯಾರ ಪಾಲಾಗಲಿದೆ ಅನ್ನೋದು ಕುತೂಹಲ ಮೂಡಿಸಿದೆ. ಕಾಂಗ್ರೆಸ್​ ಮತ್ತು ಜೆಡಿಎಸ್​ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದು ಇದರ ಮಧ್ಯೆ ಬಿಜೆಪಿ ಕೂಡ ಪ್ರಾಬಲ್ಯ ಸಾಧಿಸುವ ಯತ್ನ ನಡೆಸಿದೆ.

Pulakeshinagar Assembly constituency Profile
Pulakeshinagar Assembly constituency Profile

By

Published : Mar 22, 2023, 2:22 PM IST

Updated : Mar 22, 2023, 2:59 PM IST

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಸುದ್ದಿಯಾದ ಕ್ಷೇತ್ರಗಳಲ್ಲಿ ಬೆಂಗಳೂರಿನ ಪುಲಕೇಶಿನಗರ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ. ಇಲ್ಲಿನ ಕದನ ಕುತೂಹಲ ಇದೀಗ ರಾಜ್ಯಾದ್ಯಂತ ದೊಡ್ಡ ಸುದ್ದಿ ಮಾಡುತ್ತಿದೆ. ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್‌ ಭೈರಸಂದ್ರದಲ್ಲಿ 2020ರ ಆಗಸ್ಟ್ 10ರಂದು ನಡೆದ ಗಲಭೆಯಿಂದ ಸಹಜವಾಗಿಯೇ ಇದ್ದ ಕ್ಷೇತ್ರದಲ್ಲಿ ಏಕಾಏಕಿ ಸುನಾಮಿ ರೀತಿಯ ಸುದ್ದಿ ಬಂದಿದ್ದು ಯಾರೂ ಮರೆಯುವಂತಿಲ್ಲ.

ಕಳೆದ ಮೂರು ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಪಡೆದ ಸ್ಥಾನಗಳು

ಅಂದು ನಡೆದ ಗಲಾಟೆಯಲ್ಲಿ ಪೊಲೀಸರ ಗುಂಡೇಟಿಗೆ ಮೂವರು ಮೃತಪಟ್ಟು ಹಿಂಸಾಚಾರದಲ್ಲಿ ಹಲವರು ಗಾಯಗೊಂಡಿದ್ದರು. ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೂ ದಾಳಿ ನಡೆದಿತ್ತು. ಈ ಘಟನೆ ಕಾಂಗ್ರೆಸ್‌ ಪಕ್ಷದೊಳಗೇ ಬೆಂಕಿಗೆ ಕಾರಣವಾಗಿತ್ತು. ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಮೇಯರ್‌ ಸಂಪತ್‌ ರಾಜ್‌ ಈ ಘಟನೆ ಹಿಂದಿದ್ದರು ಎಂಬ ಆರೋಪವೂ ಕೇಳಿಬಂದಿತ್ತು. ಶಾಂತವಾಗಿಯೇ ಸಾಗಿದ್ದ ಕ್ಷೇತ್ರದ ಬೆಳವಣಿಗೆ ಏಕಾಏಕಿ ಬದಲಾಯಿತು. ರಾಜ್ಯದ 224 ಕ್ಷೇತ್ರಗಳಲ್ಲಿ ಒಂದಾಗಿದ್ದ ಪುಲಕೇಶಿನಗರ ಒಮ್ಮೆಲೇ ಇಡೀ ದೇಶದ ಗಮನ ಸೆಳೆಯಿತು. ಹಾಲಿ ಶಾಸಕನ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಸಂಪೂರ್ಣ ಧ್ವಂಸಗೊಳಿಸಿದ್ದರು. ಇದರಿಂದ ವಿಚಲಿತರಾದ ಅಖಂಡ, ಸ್ವಪಕ್ಷೀಯರ ಮೇಲೇ ಆರೋಪ ಮಾಡಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅಖಂಡ ಒಂದೆಡೆಯಾದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆ ಗುರುತಿಸಿಕೊಂಡಿದ್ದ ಮಾಜಿ ಮೇಯರ್ ಸಂಪತ್​ ರಾಜ್ ಇನ್ನೊಂದು ಶಕ್ತಿಯಾಗಿ ಗುರುತಿಸಿಕೊಳ್ಳುತ್ತಿದ್ದರು. ತಮ್ಮ ನಿವಾಸದ ಮೇಲೆ ಕಿಡಿಗೇಡಿಗಳ ದಾಳಿಗೆ ಸಂಪತ್ ರಾಜ್ ಕಾರಣ ಎಂದು ಅಖಂಡ ಶ್ರೀನಿವಾಸ ಮೂರ್ತಿ ಆರೋಪಿಸಿದ್ದರು.

ರಾಜಕೀಯ ಪಕ್ಷಗಳು ಪಡೆದ ಮತಗಳು (ಶೇಕಡಾವಾರು).

ಈ ಎಲ್ಲದರ ನಡುವೆ ಇವರಿಬ್ಬರು ಮಾತ್ರವಲ್ಲದೇ ಕ್ಷೇತ್ರದ ಮೇಲೆ ಮಾಜಿ ಶಾಸಕ ಪ್ರಸನ್ನ ಕುಮಾರ್ ಸಹ ಕಣ್ಣಿಟ್ಟಿದ್ದಾರೆ. ಮಾಜಿ ಡಿಸಿಎಂ ಪರಮೇಶ್ವರ್ ಸಹ ಈ ಸಾರಿ ಕೊರಟಗೆರೆ ತೊರೆದು ಪುಲಕೇಶಿನಗರದಿಂದ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ರಾಜ್ಯ ನಾಯಕರು ಹೈಕಮಾಂಡ್​​​ಗೆ ಕಳಿಸಿರುವ ಮೊದಲ ಪಟ್ಟಿಯಲ್ಲಿ ಒಬ್ಬರೇ ಅಭ್ಯರ್ಥಿಗಳಿರುವ ಹೆಸರು ಕಳುಹಿಸಲಾಗಿದೆ. ಅದರಲ್ಲಿ ಪುಲಕೇಶಿನಗರದಿಂದ ಪರಮೇಶ್ವರ್ ಹೆಸರು ಕಳುಹಿಸಲಾಗಿದೆ ಎಂಬ ಮಾತಿದೆ.

ಅಖಂಡ ಶ್ರೀನಿವಾಸಮೂರ್ತಿ

2008ರಲ್ಲಿ ಪ್ರತ್ಯೇಕ:ಯಲಹಂಕ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದ ಪುಲಕೇಶಿನಗರ ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗಿ 2008ರ ವಿಧಾನಸಭೆ ಕ್ಷೇತ್ರ ಮರುವಿಂಗಡಣೆ ಸಂದರ್ಭ ಹೊಸದಾಗಿ ರಚನೆಯಾಗಿದೆ. ಹೊಸದಾಗಿ ರಚನೆಯಾದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಪ್ರಾಭಲ್ಯ ಸಾಧಿಸಿದೆ. 2008ರಲ್ಲಿ ಬಿ. ಪ್ರಸನ್ನ ಕುಮಾರ್ ಕಾಂಗ್ರೆಸ್​ನಿಂದ ಗೆಲುವು ಸಾಧಿಸಿದ್ದರು. 2013ರಲ್ಲಿ ಅಖಂಡ ಶ್ರೀನಿವಾಸ ಮೂರ್ತಿ 10,199 ಮತಗಳ ಅಂತರದಿಂದ ಪ್ರಸನ್ನ ಕುಮಾರ್ ವಿರುದ್ಧ ಜೆಡಿಎಸ್​ನಿಂದ ಗೆದ್ದರು. 2018 ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಅಖಂಡ ಶ್ರೀನಿವಾಸ ಮೂರ್ತಿ, ತಮ್ಮ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್​ನ ಪ್ರಸನ್ನ ಕುಮಾರ್ ವಿರುದ್ಧ 81,626 ಮತಗಳ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ಆದರೆ, ಇದೀಗ ಇಲ್ಲಿಗೆ ಸ್ಪರ್ಧೆ ಹೆಚ್ಚಾಗಿದೆ. ಪ್ರಸನ್ನ ಕುಮಾರ್ ವಾಪಸ್ ಕೈ ಹಿಡಿದಿದ್ದಾರೆ. ಸಂಪತ್​ ರಾಜ್ ತಾವು ಗೆಲ್ಲುವ ಅಭ್ಯರ್ಥಿ ಆಗುತ್ತೇನೆ ಎನ್ನುತ್ತಿದ್ದಾರೆ.

ಮಾಜಿ ಮೇಯರ್‌ ಸಂಪತ್‌ ರಾಜ್‌

ಕ್ಷೇತ್ರದ ಸಮಸ್ಯೆಗಳು : ಶೇ.65ರಷ್ಟು ಕೊಳಗೇರಿ ನಿವಾಸಿಗಳಿಂದಲೇ ತುಂಬಿರುವ ವಿಧಾನಸಭೆ ಕ್ಷೇತ್ರ ಅನುಕೂಲಕ್ಕಿಂತ ಅನಾನುಕೂಲವನ್ನೇ ಹೆಚ್ಚಾಗಿ ಹೊಂದಿದೆ. ಸ್ವಚ್ಛತೆಯ ಕೊರತೆ, ಕಿರಿದಾದ ರಸ್ತೆಗಳು, ಚರಂಡಿ, ರಸ್ತೆ ಮತ್ತು ರಾಜಕಾಲುವೆ ಸಮಸ್ಯೆ ಹೆಚ್ಚಾಗಿದೆ. ಮುಸ್ಲಿಂ ಮತಗಳು ನಿರ್ಣಾಯಕವಾಗಿರುವ ಕ್ಷೇತ್ರದಲ್ಲಿ ಜೆಡಿಎಸ್​ ಈ ಸಾರಿ ಅಭ್ಯರ್ಥಿ ಆಯ್ಕೆಗೆ ಕಾಯುತ್ತಿದೆ. ಕಾಂಗ್ರೆಸ್​ನಿಂದ ಟಿಕೆಟ್​ ವಂಚಿತರಾದವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಇನ್ನು ಆಪ್​ನಿಂದ ಸುರೇಶ್‌ ರಾಥೋಡ್‌ ಕಣಕ್ಕಿಳಿಯಲಿದ್ದು ಎಸ್​ಡಿಪಿಐ​ ಕೂಡ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಿದ್ಧತೆ ಕೈಗೊಂಡಿದ್ದಾರೆ. ಬಿಜೆಪಿಯಿಂದ ಪ್ರಮೋದ್ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ.

ರಾಹುಲ್​ ಗಾಂಧಿ ಜೊತೆ ಮಾಜಿ ಮೇಯರ್‌ ಸಂಪತ್‌ ರಾಜ್‌

ಮತದಾರರ ಮಾಹಿತಿ: ಇನ್ನೊಂದು ವಿಶೇಷವೆಂದರೆ ಆರಂಭದಿಂದಲೂ ಬೆಂಗಳೂರು ನಗರದಲ್ಲಿ ಬಿಜೆಪಿಗೆ ಠೇವಣಿಯೂ ಬರದಂತೆ ನೋಡಿಕೊಂಡಿರುವ ಕ್ಷೇತ್ರವಿದು. ಈ ಸಾರಿಯಾದರೂ ಬಿಜೆಪಿ ತಮ್ಮ ಪ್ರಾಬಲ್ಯ ಮೆರೆಯುವುದಾ ಅನ್ನುವುದನ್ನು ಕಾದುನೋಡಬೇಕಿದೆ. 2,32,154 ಮತದಾರರನ್ನು ಒಳಗೊಂಡಿರುವ ಕ್ಷೇತ್ರದಲ್ಲಿ 1,17,158 ಪುರುಷ ಹಾಗೂ 1,14,960 ಮಹಿಳಾ ಮತ್ತು 36 ತೃತೀಯ ಲಿಂಗಿ ಮತದಾರರಿದ್ದಾರೆ.

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ವಿವರ

ಮುಸ್ಲಿಂ ಮತದಾರರ ಪ್ರಾಬಲ್ಯ:ಕ್ಷೇತ್ರದಲ್ಲಿ ಇಂಗ್ಲಿಷ್, ಹಿಂದಿ, ಉರ್ದು, ತಮಿಳು, ಇತ್ತೀಚೆಗೆ ಈಶಾನ್ಯ ಭಾರತೀಯ ಭಾಷಿಕರ ಪಾರುಪತ್ಯ ಇದ್ದು, ಕನ್ನಡಿಗರೇ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಂ ಮತದಾರರ ಪ್ರಾಬಲ್ಯ ಹೆಚ್ಚಿದೆ. ಇತರೇ ಭಾಷಿಕರು ಸೇರಿದಂತೆ ಲಿಂಗಾಯತ, ಒಕ್ಕಲಿಗರು, ಎಸ್ಸಿ-ಎಸ್‌ಟಿ, ಬ್ರಾಹ್ಮಣ, ಒಬಿಸಿ, ತಿಗಳ, ಕುರುಬ, ದೇವಾಂಗ, ಯಾದವ ಮತದಾರರು ಇದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಇವತ್ತು ಡೌಟ್, ಎರಡ್ಮೂರು ದಿನ ವಿಳಂಬ: ಡಿಕೆಶಿ

Last Updated : Mar 22, 2023, 2:59 PM IST

ABOUT THE AUTHOR

...view details