ಕರ್ನಾಟಕ

karnataka

ಕರ್ನಾಟಕ ಅನ್​​​ಲಾಕ್ 3.0ಗೆ ಸಿದ್ಧತೆ: ದೇವಾಲಯ, ಮಾರ್ಕೆಟ್, ಮಾಲ್, ಬಾರ್​​ಗೆ ಅವಕಾಶ?

ರಾಜ್ಯದಲ್ಲಿ ಕೊರೊನಾ ಕೇಸ್​ಗಳ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ. ಈ ಸಂಬಂಧ ಸರ್ಕಾರ ಹಂತ ಹಂತವಾಗಿ ರಾಜ್ಯವನ್ನು ಅನ್​ಲಾಕ್​ ಮಾಡುತ್ತಿದೆ. ಸದ್ಯ ಜಾರಿಯಲ್ಲಿರುವ ಅನ್​ಲಾಕ್​ 2.0 ನಿಯಮಗಳು ಮುಕ್ತಾಯವಾಗಲಿದ್ದು, ಅನ್​​ಲಾಕ್​ 3.0ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

By

Published : Jul 2, 2021, 3:44 PM IST

Published : Jul 2, 2021, 3:44 PM IST

Updated : Jul 2, 2021, 4:04 PM IST

Preparation for Unlock 3.0 in Karnataka
ಅನ್​​​ಲಾಕ್ 3.0 ಗೆ ಸಿದ್ಧತೆ

ಬೆಂಗಳೂರು:ರಾಜ್ಯದಲ್ಲಿ ಜುಲೈ 5 ರಿಂದ ಅನ್ವಯವಾಗುವಂತೆ ಅನ್​ಲಾಕ್​​ 3.0 ಜಾರಿಗೆ ಸಿದ್ಧತೆಗಳು ಆರಂಭಗೊಂಡಿದ್ದು, ಪ್ರಾರ್ಥನಾ ಮಂದಿರಗಳು, ಮಾರುಕಟ್ಟೆ, ಮಾಲ್, ಪಬ್, ಕ್ಲಬ್, ಬಾರ್​​ಗಳಿಗೆ ಅವಕಾಶ ಸಿಗಲಿದೆ. ಸ್ಮಿಮ್ಮಿಂಗ್ ಪೂಲ್, ಸಿನಿಮಾ ಮಂದಿರಕ್ಕೆ ಅವಕಾಶ ಅನುಮಾನ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ತತ್ತರಿಸಿ ಲಾಕ್​​ಡೌನ್​​ ಜಾರಿಗೊಳಿಸಿದ್ದ ರಾಜ್ಯ ಸರ್ಕಾರ ಕೋವಿಡ್ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದ್ದಂತೆ ಹಂತ ಹಂತವಾಗಿ ಅನ್​​ಲಾಕ್ ಪ್ರಕ್ರಿಯೆ ಕೈಗೆತ್ತಿಕೊಂಡಿದೆ. ಸದ್ಯ ಜಾರಿಯಲ್ಲಿರುವ ಅನ್​​ಲಾಕ್ 2.0 ಜುಲೈ 5 ರ ಮುಂಜಾನೆ 6 ಗಂಟೆಗೆ ಅಂತ್ಯವಾಗಲಿದ್ದು, ಅನ್​​ಲಾಕ್ 3.0 ಜಾರಿಗೆ ಬರಲಿದೆ.

ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗುವಂತೆ ಅನ್​​ಲಾಕ್ 3.0 ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಆಯಾ ಜಿಲ್ಲಾಧಿಕಾರಿಗಳಿಗೂ ಅನ್​​ಲಾಕ್ ನಿಯಮ ಸಡಿಲಿಕೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಕಠಿಣ ನಿರ್ಬಂಧ ಮುಂದುವರೆಸುವ ಅಧಿಕಾರ ನೀಡಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಮಾಲ್​​​ಗಳಿಗೆ ಅವಕಾಶ :

ಎಲ್ಲಾ ಬಗೆಯ ವಾಣಿಜ್ಯ ಚಟುವಟಿಕೆ ಆರಂಭಗೊಂಡಿದ್ದರೂ ರಾಜ್ಯಾದ್ಯಂತ ಮಾಲ್​​​ಗಳಿಗೆ ನಿರ್ಬಂಧವಿದೆ. ಅನ್​​ಲಾಕ್ 3.0 ವೇಳೆ ಮಾಲ್​​ಗಳನ್ನು ತೆರೆಯಲು ಅನುಮತಿ ನೀಡುವಂತೆ ಮಾಲ್​​ಗಳ ಮಾಲೀಕರ ಸಂಘದಿಂದ ಸಿಎಂ ಯಡಿಯೂರಪ್ಪಗೆ ಮನವಿ ಸಲ್ಲಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಜುಲೈ 5 ರಿಂದ ಬೆಂಗಳೂರು ಸೇರಿ ರಾಜ್ಯಾದ್ಯಂತ ಮಲ್ಟಿಫ್ಲೆಕ್ಸ್ ಹೊರತುಪಡಿಸಿ ಮಾಲ್​​ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಬೆಳಗ್ಗೆ 8 ರಿಂದ ಸಂಜೆ 7 ಗಂಟೆವರೆಗೆ ಮಾಲ್​​ಗಳಲ್ಲಿ ವಹಿವಾಟು ನಡೆಸಲು ಅವಕಾಶ ನೀಡಲಾಗುತ್ತದೆ.

ಮಾರುಕಟ್ಟೆಗೆ ಅವಕಾಶ:

ಬೆಂಗಳೂರಿನಲ್ಲಿ ಸದ್ಯ ನಿರ್ಬಂಧ ವಿಧಿಸಿದ್ದರಿಂದ ಸ್ಥಗಿತಗೊಂಡಿರುವ ಕೆ.ಆರ್.ಮಾರುಕಟ್ಟೆ,ರಸೆಲ್ ಮಾರುಕಟ್ಟೆ,ಯಶವಂತಪುರ ಎಪಿಎಂಸಿ,ಮಾಡಿವಾಳ ಮಾರುಕಟ್ಟೆ ಸೇರಿ ದೊಡ್ಡ ದೊಡ್ಡ ಮಾರುಕಟ್ಟೆಗಳಲ್ಲಿ ವಹಿವಾಟು ಆರಂಭಕ್ಕೆ ಅವಕಾಶ ನೀಡುವ ಸಾಧ್ಯತೆ ಇದ್ದು, ಜಿಲ್ಲೆಗಳಲ್ಲಿಯೂ ಸ್ಥಗಿತವಾಗಿರುವ ಮಾರುಕಟ್ಟೆಗಳ ಆರಂಭಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ.

ಬಾರ್,ಕ್ಲಬ್​​​ಗೆ ಅವಕಾಶ:

ಸದ್ಯ ಅನ್​ಲಾಕ್ 2.0 ರಲ್ಲಿ ಶೇ.50 ರ ನಿಯಮದಂತೆ ಹೋಟೆಲ್​​​ಗಳಲ್ಲಿ ಆಹಾರ ಸೇವಿಸಲು, ಟೇಬಲ್ ಸರ್ವೀಸ್ ಮಾಡಲು ಅವಕಾಶ ಕಲ್ಪಿಸಿದ್ದು, ಇದೇ ನಿಯಮವನ್ನು ಅನ್​​ಲಾಕ್ 3.0 ರಲ್ಲಿ ಬಾರ್,ಪಬ್, ಕ್ಲಬ್, ಕ್ಲಬ್ ಹೌಸ್​ಗಳಿಗೂ ಅನ್ವಯಿಸಿ ಅವಕಾಶ ನೀಡುವ ಸಾಧ್ಯತೆ ಇದೆ. ಪಾರ್ಟಿಗಳನ್ನು ಹೊರತುಪಡಿಸಿ ಕೇವಲ ಚಟುವಟಿಕೆ ನಡೆಸಲು, ಬಾರ್​​ಗಳಲ್ಲಿ ಕುಳಿತು ಮದ್ಯ ಸೇವಿಸಲು,ಬಾರ್ ಅಂಡ್ ರೆಸ್ಟೊರೆಂಟ್​​ಗಳಲ್ಲಿ ಟೇಬಲ್ ಸರ್ವೀಸ್​​ಗೂ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.

ಪ್ರಾರ್ಥನಾ ಮಂದಿರಕ್ಕೆ ಅವಕಾಶ:

ರಾಜ್ಯದ ಎಲ್ಲಾ ಪ್ರಾರ್ಥನಾ ಮಂದಿರಗಳಲ್ಲಿ ಪೂಜಾ ಕೈಂಕರ್ಯಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಜುಲೈ 5 ರಿಂದ ದೇವಸ್ಥಾನ, ‌ಚರ್ಚ್, ಮಸೀದಿ ಸೇರಿದಂತೆ ಎಲ್ಲಾ ಪ್ರಾರ್ಥನಾ ಮಂದಿರಗಳಿಗೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಅಂತರ ಕಾಯ್ದುಕೊಳ್ಳುವ ನಿಯಮದೊಂದಿಗೆ ಎಲ್ಲಾ ಧರ್ಮಗಳ ದೇವಾಲಯಗಳಿಗೆ ಪ್ರವೇಶ ನೀಡಲಿದ್ದು, ಪ್ರಸಾದ ವಿತರಣೆಗೆ ನಿರ್ಬಂಧ ಮುಂದುವರೆಯಲಿದೆ.

ವಹಿವಾಟು ಸಮಯ ವಿಸ್ತರಣೆ:

ಅನ್​​ಲಾಕ್ 2.0 ಅಡಿಯಲ್ಲಿ ಎಲ್ಲಾ ಬಗೆಯ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ಕಲ್ಪಿಸಿದ್ದ, ಅಂಗಡಿ, ಮುಂಗಟ್ಟುಗಳಿಗೆ ಬೆಳಗ್ಗೆ 6 ರಿಂದ ಸಂಜೆ 5 ರವರೆಗೆ ಅವಕಾಶ ಕಲ್ಪಿಸಿದ್ದು, ಅದನ್ನು ರಾತ್ರಿ 7 ರವರೆಗೆ ವಿಸ್ತರಿಸಲಾಗುತ್ತದೆ. ತಜ್ಞರ ಸಮಿತಿ ಶಿಫಾರಸ್ಸಿನಂತೆ ಅವಧಿ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಇದೆ.

ನೈಟ್ ಕರ್ಫ್ಯೂ ಮುಂದುವರಿಕೆ:

ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಮುಂದುವರೆಸಲಾಗುತ್ತಿದೆ. ಆದರೆ ಅದರಲ್ಲಿ ಸ್ವಲ್ಪ ಸಡಿಲಿಕೆ ಮಾಡುವ ಸಾಧ್ಯತೆ ಇದ್ದು, ನೈಟ್ ಕರ್ಫ್ಯೂ ಸಮಯವನ್ನು ಸಂಜೆ 5 ರಿಂದ ಬೆಳಗ್ಗೆ 6 ರ ಬದಲು ರಾತ್ರಿ 7 ರಿಂದ ಬೆಳಗ್ಗೆ 5 ರವರೆಗೆ ಬದಲಾಯಿಸಲಾಗುತ್ತದೆ ಎನ್ನಲಾಗುತ್ತಿದೆ.

ಸಂಜೆ ವಾಕಿಂಗ್, ಜಿಮ್​​ಗೆ ಅವಕಾಶ :

ಪ್ರತಿದಿನ ಬೆಳಗ್ಗೆ ಉದ್ಯಾನಗಳನ್ನು ತೆರೆದು ವಾಕಿಂಗ್ ಮಾಡಿವವರಿಗೆ ಅವಕಾಶ ಕಲ್ಪಸಲಾಗಿದೆ. ಅದೇ ರೀತಿ ಬೆಳಗ್ಗೆ ಜಿಮ್​​ಗಳನ್ನು ತೆರೆಯಲು ಅನುಮತಿಸಿದ್ದು, ಅನ್​ಲಾಕ್​​ 3.0 ನಲ್ಲಿ ಸಂಜೆ ವೇಳೆಗೂ ಉದ್ಯಾನ ತೆರೆದು ವಾಯುವಿಹಾರಕ್ಕೆ ಅವಕಾಶ ಹಾಗೂ ಜಿಮ್​​ಗಳನ್ನು ತೆರೆಯಲು ಅನುಮತಿ ನೀಡಲಾಗುತ್ತದೆ ಎನ್ನಲಾಗಿದೆ.

ನಿರ್ಬಂಧ ಮುಂದುವರಿಕೆ:

ರಾಜ್ಯಾದ್ಯಂತ ಮಲ್ಟಿಫ್ಲೆಕ್ಸ್ ಸೇರಿದಂತೆ ಎಲ್ಲಾ ಬಗೆಯ ಸಿನಿಮಾ ಮಂದಿರಗಳಿಗೆ ನಿರ್ಬಂಧ ಇದ್ದು, ಅನ್​ಲಾಕ್ 3.0ನಲ್ಲಿ ಇವುಗಳಿಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಹಾಗಾಗಿ ಚಿತ್ರಮಂದಿರಗಳು, ರಂಗ ಮಂದಿರಕ್ಕೆ ಅವಕಾಶ ಸಿಗುವುದಿಲ್ಲ ಎನ್ನಲಾಗಿದೆ.

Last Updated : Jul 2, 2021, 4:04 PM IST

ABOUT THE AUTHOR

...view details